ಸ್ಟಾರ್ಟ್‌ಅಪ್, ಉದ್ದಿಮಗಳಲ್ಲಿ ಸಂಶೋಧನೆಯ ಉತ್ತೇಜನಕ್ಕಾಗಿ ಕರ್ನಾಟಕ ರಿಸರ್ಚ್ ಫೌಂಡೇಶನ್ ಸ್ಥಾಪನೆ!
ರಾಜ್ಯದಲ್ಲಿ ಸ್ಟಾರ್ಟ್ ಅಪ್‌ಗಳು ಮತ್ತು ಉದ್ದಿಮೆಗಳು ನೂತನ ಉತ್ಪನ್ನಗಳ ಸಂಶೋಧನೆಗೆ ಮತ್ತು ಉತ್ಪಾದನೆಗೆ ಪೂರಕ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸಂಶೋಧನಾ ಫೌಂಡೇಶನ್ ನ್ನು ಸ್ಥಾಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಬೋಸರಾಜು ತಿಳಿಸಿದರು.
Published: 12th August 2023 08:28 PM | Last Updated: 12th August 2023 08:42 PM | A+A A-

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಸ್ಟಾರ್ಟ್ ಅಪ್‌ಗಳು ಮತ್ತು ಉದ್ದಿಮೆಗಳು ನೂತನ ಉತ್ಪನ್ನಗಳ ಸಂಶೋಧನೆಗೆ ಮತ್ತು ಉತ್ಪಾದನೆಗೆ ಪೂರಕ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸಂಶೋಧನಾ ಫೌಂಡೇಶನ್ ನ್ನು ಸ್ಥಾಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಬೋಸರಾಜು ತಿಳಿಸಿದರು.
ಸತ್ಯ ಸಾಯಿ ಗ್ರಾಮದಲ್ಲಿ ಆಯೋಜಿಸಲಾಗಿರುವ ಇಂಡಿಯನ್ ಸ್ಟಾರ್ಟ್‌ಅಪ್ ಫೆಸ್ಟಿವಲ್ - 2023 ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವೈಜ್ಞಾನಿಕ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ಆರ್ಥಿಕ ಚಟುವಟಿಕೆಗಳಿಗೆ ಬಹಳ ಅಗತ್ಯ ಮತ್ತು ಸ್ಟಾರ್ಟ್ ಅಪ್ ಎಕೋಸಿಸ್ಟಮ್‌ಗೆ ಮೂಲ. ನಮ್ಮ ಸರಕಾರ ಸ್ಟಾರ್ಟ್ ಅಪ್‌ಗಳ ಸ್ಥಾಪನೆಗೆ ಉತ್ತಮ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಿದೆ ಎಂದರು.
ಶಿಕ್ಷಣದಲ್ಲಿ ವೈಜ್ಞಾನಿಕ ಅಂಶಗಳನ್ನು ಅಳವಡಿಸುವ, ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಉದ್ದಿಮೆಗಳಿಗೆ ಪೂರಕವಾದ ವಾತಾವರಣ, ಪರಿಸರ ಸುಸ್ಥಿರತೆಯನ್ನು ಕಾಪಾಡುವಂತಹ ರೋಬಸ್ಟ್ ಎಕಾಮಿಯನ್ನ ಉತ್ತೇಜಿಸುವ ಗುರಿಗಳನ್ನು ನಾವು ಹೊಂದಿದ್ದೇವೆ. ಬೆಂಗಳೂರು ನಗರ ಸ್ಟಾರ್ಟ್‌ಅಪ್ ಗಳ ರಾಜಧಾನಿ ಎಂದೇ ಹೆಸರುವಾಸಿ. ರಾಜ್ಯದಲ್ಲಿರುವ ಹೂಡಿಕೆ ಪೂರಕ ವಾತಾವರಣದ ಕಾರಣದಿಂದಾಗಿ ಹೆಚ್ಚಿನ ಉದ್ದಿಮೆಗಳು ಹಾಗೂ ಸ್ಟಾರ್ಟ್ ಅಪ್ ಗಳು ಸ್ಥಾಪನೆ ಆಗುತ್ತಿವೆ ಎಂದು ತಿಳಿಸಿದರು.
ಹೊಸ ಉದ್ದಿಮೆಗಳೂ ಹಾಗೂ ಕೈಗಾರಿಕೆಗಳ ಬೆಳವಣಿಗೆಗೆ ಸಂಶೋಧನೆ ಬಹಳ ಅವಶ್ಯಕ. ಉತ್ತಮ ಉತ್ಪನ್ನಗಳನ್ನ ಹಾಗೂ ಸೇವೆಗಳನ್ನ ನೀಡುವ ನಿಟ್ಟಿನಲ್ಲಿ ಸಂಸ್ಥೆಗಳಿಗೆ ಸಂಶೋಧನೆ ಕೈಗೊಳ್ಳಲು ಅನುವು ಮಾಡಿಕೊಡುವ ಉದ್ದೇಶವನ್ನು ಕರ್ನಾಟಕ ರಿಸರ್ಚ್ ಫೌಂಡೇಶನ್ ಹೊಂದಿದೆ. ಅಲ್ಲದೇ, ಖಾಸಗಿ ಸಂಸ್ಥೆಗಳು, ಪ್ರತಿಷ್ಠಾನಗಳು ಮತ್ತು ವ್ಯಕ್ತಿಗಳು ಸಂಶೋಧನೆ ಮತ್ತು ಅಭಿವೃದ್ದಿಗೆ ಉತ್ತೇಜನ ನೀಡಲು ಕೆಎಸ್‌ಆರ್‌ಎಫ್ ಗೆ ತಮ್ಮ ಕೊಡುಗೆಯನ್ನು ನೀಡಬಹುದಾದ ವ್ಯವಸ್ಥೆ ಇರಲಿದೆ ಎಂದು ಹೇಳಿದರು.
ರಾಜ್ಯದ ಯುವ ಉದ್ಯಮಿಗಳ ಆಶೋತ್ತರಗಳಿಗೆ ಪೋಷಣೆ ನೀಡುವ ಮೂಲಕ ಸುಸ್ಥಿರ ಆರ್ಥಿಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಬದ್ದವಾಗಿದೆ. ಕೆಎಸ್‌ಆರ್‌ಎಫ್ ಮೂಲಕ ಹಂತಹಂತವಾಗಿ ಸಂಶೋಧನೆ ಮತ್ತು ಅಭಿವೃದ್ದಿಗೆ ಉತ್ತೇಜನ ನೀಡುವ ನಿಟ್ಟಿನಲಿ ರಾಜ್ಯದ ಜಿಡಿಪಿಯ ಶೇಕಡಾ 3 ರಷ್ಟ ಹಣವನ್ನು ಸಂಶೋಧನಾ ಚಟುವಟಿಕೆಗಳಿಗೆ ವಿನಿಯೋಗಿಸುವ ಗುರಿಯನ್ನು ಹೊಂದಿದ್ದೇವೆ. ರಾಜ್ಯದ ಜ್ಞಾನಾರ್ಜನೆಯ ಕೇಂದ್ರಗಳಲ್ಲಿ ಸಂಶೋಧನೆ ಮತ್ತು ಹೊಸ ತಂತ್ರಜ್ಞಾನಗಳಿಗೆ ಇಂಬು ನೀಡುವ ಮೂಲಕ ಹೊಸ ಸ್ಟಾರ್ಟ್ ಅಪ್‌ಗಳಿಗೆ ಪೋಷಣೆ ನೀಡುವುದು ಈ ಮೂಲಕ ಜ್ಞಾನವನ್ನ ಉದ್ದಿಮೆಗಳು, ವಿಶ್ವವಿದ್ಯಾಲಯಗಳೂ ಮತ್ತು ಸಂಶೋಧನಾ ಕೇಂದ್ರಗಳ ಮಧ್ಯೆ ಹರಿಯುವಂತೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಹೇಳಿದರು.
ಗಮನ ಸೆಳೆದ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಳಿಗೆ: ಇಂಡಿಯನ್ ಸ್ಟಾರ್ಟ್ ಅಪ್ ಫೆಸ್ಟಿವಲ್ ನಲ್ಲಿನ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಳಿಗೆ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಮಳಿಗೆಯ ಮೂಲಕ ರಾಜ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮೂಲಕ ಕೈಗೊಳ್ಳಲಾಗುತ್ತಿರುವ ಕಾರ್ಯಕ್ರಮಗಳು, ಸಂಶೋಧನೆಗಾಗಿ ಇರುವಂತೆ ಸೌಲಭ್ಯಗಳ ಬಗ್ಗೆ ಸ್ಟಾರ್ಟ್‌ಅಪ್ ಗಳಿಗೆ ಮಾಹಿತಿ ನೀಡಲಾಯಿತು. ಮಾನ್ಯ ಸಚಿವರು ಮಳಿಗೆಗೆ ಭೇಟಿ ನೀಡಿದ ಸಾರ್ವಜನಿಕರುಗಳಿಗೆ ಮಾಹಿತಿಯನ್ನು ನೀಡಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಸತ್ಯ ಸಾಯಿ ವಿಶ್ವ ವಿದ್ಯಾಲಯದ ಸಂಸ್ಥಾಪಕರಾದ ಸದ್ಗುರು ಮಧುಸುಧನ ಸಾಯಿ, ಇಂಡಿಯನ್ ಸ್ಟಾರ್ಟ್ ಅಪ್ ಫೆಸ್ಟಿವಲ್ ಮುಖ್ಯಸ್ಥರಾದ ಜೆ ಎ ಚೌಧರಿ ಉಪಸ್ಥಿತರಿದ್ದರು.