'ಏಷ್ಯಾದ ಅತ್ಯುತ್ತಮ ಉದ್ಯೋಗದಾತ' ಬ್ರ್ಯಾಂಡ್ ಪ್ರಶಸ್ತಿ ಪಡೆದ ಕೆಎಸ್‌ಆರ್‌ಟಿಸಿ
ದೇಶದ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಅತ್ಯುತ್ತಮ ಸಂಚಾರ ಸೇವೆ ಒದಗಿಸುತ್ತಿರುವ ಸಂಸ್ಥೆಗಳಲ್ಲಿ ಪ್ರಮುಖ ಸಂಸ್ಥೆಯಾಗಿರುವ ಕೆಎಸ್ಆರ್‌ಟಿಸಿ ಪ್ರತಿ ವರ್ಷವೂ ಒಂದಿಲ್ಲೊಂದು ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುತ್ತಲೇ ಇದೆ. ಈ ಬಾರಿ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದು...
Published: 18th August 2023 11:39 AM | Last Updated: 18th August 2023 08:19 PM | A+A A-

ಸಿಂಗಾಪುರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭ.
ಬೆಂಗಳೂರು: ದೇಶದ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಅತ್ಯುತ್ತಮ ಸಂಚಾರ ಸೇವೆ ಒದಗಿಸುತ್ತಿರುವ ಸಂಸ್ಥೆಗಳಲ್ಲಿ ಪ್ರಮುಖ ಸಂಸ್ಥೆಯಾಗಿರುವ ಕೆಎಸ್ಆರ್‌ಟಿಸಿ ಪ್ರತಿ ವರ್ಷವೂ ಒಂದಿಲ್ಲೊಂದು ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುತ್ತಲೇ ಇದೆ. ಈ ಬಾರಿ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಇದರೊಂದಿಗೆ ಕೆಎಸ್ಆರ್‌ಟಿಸಿ ಮುಕುಟಕ್ಕೆ ಜಾಗತಿಕ ಮನ್ನಣೆ ಸಿಕ್ಕಂತಾಗಿದೆ.
ಸಿಂಗಾಪುರದ ವಿಶ್ವ ಸುಸ್ಥಿರ ಕಾಂಗ್ರೆಸ್ ನೀಡುವ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್ 2023ನೇ ಸಾಲಿನ 14ನೇ ಆವೃತ್ತಿಯ 18ನೇ ಪ್ರಶಸ್ತಿಗೆ ನಿಗಮವು ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಗಳ ಅನುಷ್ಠಾನ ವರ್ಗದಲ್ಲಿ ಆಯ್ಕೆಯಾಗಿದೆ.
ಗುರುವಾರ ಸಿಂಗಾಪುರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿಗಮದ ಪರವಾಗಿ ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರ್ತಿ ಮಂಜುಳ ನಾಯ್ಕ್, ಮಂಡಳಿ ಕಾರ್ಯದರ್ಶಿ ಹಾಗೂ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಲತಾ ಟಿ.ಎಸ್ ಪ್ರಶಸ್ತಿ ಸ್ವೀಕರಿಸಿದರು.
KSRTC has won Asia’s Best Brand Employer Award – 2023. pic.twitter.com/TjEA4pEOiq
— KSRTC (@KSRTC_Journeys) August 17, 2023
ಹೊಸ ಸೇವೆಗಳನ್ನು ಪರಿಚಯಿಸುವ ಮೂಲಕ ದೇಶದ ಗಮನ ಸೆಳೆದಿರುವ ಕೆಎಸ್ಆರ್‌ಟಿಸಿ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಇದನ್ನೂ ಓದಿ: ಕೆಎಸ್ಆರ್ ಟಿಸಿ ಸೇವೆಗಳ ಉನ್ನತೀಕರಣ; ಕೇಂದ್ರೀಕೃತ ನಿಯಂತ್ರಣ ಕೊಠಡಿ ಸ್ಥಾಪನೆಗೆ ಮುಂದು!
2018-19ರಲ್ಲಿ ಜೀವನಮಟ್ಟ ಸುಧಾರಿಸುವ ಉತ್ತಮ ಉಪಕ್ರಮಗಳ ಪ್ರಶಸ್ತಿ, ಅತ್ಯುತ್ತಮ ಪ್ರಯಾಣಿಕ ಸಾರಿಗೆ ಸಂಸ್ಥೆ ವಿಭಾಗದಲ್ಲಿ ಎಕ್ಸೆಲೆನ್ಸಿ ಪ್ರಶಸ್ತಿ ಪಡೆದುಕೊಂಡಿತ್ತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು 2020ರಲ್ಲಿ ಶ್ರೀ ಶೌಚಾಲಯ ಮತ್ತು ಮೊಬೈಲ್ ಫೀವರ್ ಕ್ಲಿನಿಕ್ ಅಭಿವೃದ್ಧಿಪಡಿಸಿದ್ದಕ್ಕಾಗಿ ರಾಷ್ಟ್ರೀಯ ಉದ್ದಿಮೆಗಳ ಅತ್ಯುತ್ತಮ ಪ್ರಶಸ್ತಿ ಪಡೆದುಕೊಂಡಿತ್ತು.
2021ರಲ್ಲಿ ಭಾರತೀಯ ಸಾರ್ವಜನಿಕ ಮಂಡಳಿ ನೀಡುವ ಪಿಆರ್ಸಿಐ ಎಕ್ಸಲೆನ್ಸ್ ಪ್ರಶಸ್ತಿಯನ್ನು ಐದು ವರ್ಗದಲ್ಲಿ ಸಾಧಿಸಿದೆ. ಇದೀಗ ಈ ಬಾರಿ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್ ಪ್ರಶಸ್ತಿ ಪಡೆದುಕೊಂಡು ಸಾರಿಗೆ ಸಂಸ್ಥೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ.