ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ 'ಶಕ್ತಿ' ಯೋಜನೆ ವಿರುದ್ಧ ಸಲ್ಲಿಸಿದ್ದ ಪಿಐಎಲ್ ವಾಪಸ್
ರಾಜ್ಯದಲ್ಲಿ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಒದಗಿಸುತ್ತಿರುವ ಉಚಿತ ಬಸ್ ಪ್ರಯಾಣವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹಿಂಪಡೆಯಲು ಹೈಕೋರ್ಟ್ ಗುರುವಾರ ಅನುಮತಿ ನೀಡಿದೆ.
Published: 31st August 2023 08:08 PM | Last Updated: 31st August 2023 08:09 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಒದಗಿಸುತ್ತಿರುವ ಉಚಿತ ಬಸ್ ಪ್ರಯಾಣವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹಿಂಪಡೆಯಲು ಹೈಕೋರ್ಟ್ ಗುರುವಾರ ಅನುಮತಿ ನೀಡಿದೆ. ಈ ಸಂಬಂಧ ಮೂವರು ಕಾನೂನು ವಿದ್ಯಾರ್ಥಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಸ್ಪಷ್ಟವಾಗಿದ್ದು, ಯಾವುದೇ ಅಧ್ಯಯನದ ಬೆಂಬಲವಿಲ್ಲ ಎಂಬುದನ್ನು ನ್ಯಾಯಾಲಯ ಪರಿಗಣಿಸಿತು.
ಶಕ್ತಿ ಯೋಜನೆಯು ಅವ್ಯವಸ್ಥೆ, ಗದ್ದಲ ಮತ್ತು ಬಸ್ ನಿಲ್ದಾಣಗಳಲ್ಲಿ ಗುಂಪಿನ ಅಶಿಸ್ತಿನ ವರ್ತನೆಗೆ ಕಾರಣವಾಗಿದ್ದು, ಮಕ್ಕಳು ಮತ್ತು ಹಿರಿಯ ನಾಗರಿಕರ ಮೇಲೆ ಪರಿಣಾಮ ಬೀರುತ್ತಿದೆ ಮತ್ತು ಆರ್ಥಿಕತೆಗೆ ತೀವ್ರ ನಷ್ಟವನ್ನುಂಟುಮಾಡಿದೆ ಎಂದು ಅಶ್ವಿನ್ ಶಂಕರ್ ಭಟ್, ನೇಹಾ ವೆಂಕಟೇಶ್ ಮತ್ತು ಯಶಿಕಾ ಶರವಣನ್ ಅವರು ಪಿಐಎಲ್‌ನಲ್ಲಿ ದೂರಿದ್ದರು. ಸರ್ಕಾರಿ ಸ್ವಾಮ್ಯದ ಬಸ್‌ಗಳಲ್ಲಿ ಉಚಿತ ಪ್ರಯಾಣವು ಮಹಿಳೆಯರಿಗೆ ಪ್ರಯೋಜನಕ್ಕಿಂತ ಹೆಚ್ಚು ಹಾನಿಯನ್ನುಂಟುಮಾಡುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ: ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆಗೆ ಶೀಘ್ರದಲ್ಲೇ ಕ್ರಮ- ರಾಮಲಿಂಗಾ ರೆಡ್ಡಿ
ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರನ್ನೊಳಗೊಂಡ ಪೀಠ, 'ಶಕ್ತಿ' ಯೋಜನೆ ಪ್ರಾರಂಭಕ್ಕೂ ಮುನ್ನಾ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಪ್ರಯಾಣ ಆರಾಮದಾಯಕವಾಗಿತ್ತೇ ಎಂದು ದೂರುದಾರರ ಪರ ವಕೀಲರನ್ನು ಪ್ರಶ್ನಿಸಿತು. ಅಲ್ಲದೇ ಎಲ್ಲೆಲ್ಲಿ ಜನದಟ್ಟಣೆ ಉಂಟಾಗುತ್ತಿದೆ. ಈ ಯೋಜನೆ ಯಾವುದೇ ನಿರ್ದಿಷ್ಟ ಗುಂಪಿನ ಜನರಿಗೆ ಸೀಮಿತವಾಗಿದೆಯೇ ? ಈ ನಿಟ್ಟಿನಲ್ಲಿ ಅಧ್ಯಯನ ನಡೆಸಲಾಗಿದೆಯೇ ಎಂಬುದರ ಕುರಿತು ನ್ಯಾಯಾಲಯ ಉತ್ತರ ಬಯಸಿತು.
ಜನದಟ್ಟಣೆಗಾಗಿ ಪಿಐಎಲ್ ಪರಿಹಾರವನ್ನು ಹುಡುಕುತ್ತಿದೆಯೇ ಅಥವಾ ಯೋಜನೆಯನ್ನು ಪ್ರಶ್ನಿಸುತ್ತಿದೆಯೇ ಎಂದು ಅರ್ಜಿದಾರರನ್ನು ಪ್ರಶ್ನಿಸಿದ ನ್ಯಾಯಪೀಠ, ಮುಂಬೈ ಲೋಕಲ್ ರೈಲುಗಳತ್ತ ಬೊಟ್ಟು ಮಾಡಿ ಅಲ್ಲಿಎಷ್ಟು ಜನಸಂದಣಿ ಇದೆ ಎಂದು ತಿಳಿದಿದೆಯೇ ಎಂದು ಕೇಳಿತು. ಸೂಕ್ತ ಸಿದ್ಧತೆಗಳ ನಂತರವೇ ಪಿಐಎಲ್ ಸಲ್ಲಿಸಬೇಕು ಎಂದು ಅರ್ಜಿದಾರರಿಗೆ ಸಲಹೆ ನೀಡಿತು. ನಂತರ ಅರ್ಜಿದಾರರ ಪರ ವಕೀಲರುಪಿಐಎಲ್ ಹಿಂಪಡೆಯಲು ನ್ಯಾಯಾಲಯದ ಅನುಮತಿ ಕೋರಿದರು.