ಬೆಂಗಳೂರು: ಶವಸಂಸ್ಕಾರಕ್ಕೂ ಬಂತು 'ಸಂಚಾರಿ ಸ್ಮಶಾನ'!

ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಸ್ಥಳದ ಕೊರತೆ ಎದುರಾಗಿದ್ದು, ಈ ಸಮಸ್ಯೆಯನ್ನು ನೀಗಿಸಲು ಕುಂದಾಪುರ ತಾಲೂಕಿನ ಮುದೂರು ಗ್ರಾಮದಲ್ಲಿ ಇತ್ತೀಚಿಗೆ ಸಂಚಾರಿ ಚಿತಾಗಾರವನ್ನು ಆರಂಭಿಸಲಾಗಿದೆ.
ಸಂಚಾರಿ ಸ್ಮಶಾನ
ಸಂಚಾರಿ ಸ್ಮಶಾನ

ಉಡುಪಿ: ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಸ್ಥಳದ ಕೊರತೆ ಎದುರಾಗಿದ್ದು, ಈ ಸಮಸ್ಯೆಯನ್ನು ನೀಗಿಸಲು ಕುಂದಾಪುರ ತಾಲೂಕಿನ ಮುದೂರು ಗ್ರಾಮದಲ್ಲಿ ಇತ್ತೀಚಿಗೆ ಸಂಚಾರಿ ಚಿತಾಗಾರವನ್ನು ಆರಂಭಿಸಲಾಗಿದೆ.

ಹಿಂದುಳಿದವರು, ದಲಿತರು ವಾಸಿಸುವ ಭಾಗದಲ್ಲಿ ಐದು ಸೆಂಟ್ಸ್ ಜಾಗವಿರುವ ಕುಟುಂಬಗಳ ಮನೆಯಲ್ಲಿ ಸಾವಿಗೀಡಾದರೆ ಸ್ಮಶಾನಕ್ಕೆ ಕುಂದಾಪುರದ 40 ಕಿ.ಮೀ ದೂರದಲ್ಲಿರುವ ಸ್ಮಶಾನಕ್ಕೆ ಕೊಂಡೊಯ್ಯಬೇಕಿದೆ. ಹೀಗಾಗಿ ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘ (ಎಂಪಿಎಸಿ), ಗ್ರಾಮಸ್ಥರ ಅನುಕೂಲಕ್ಕಾಗಿ ಸಂಚಾರಿ ಶವಸಂಸ್ಕಾರ ವಾಹನವನ್ನು ಪರಿಚಯಿಸಿದೆ.

ಸಂಚಾರಿ ಶವಸಂಸ್ಕಾರ ವಾಹನವನ್ನು ಎಂಪಿಎಸಿ ಉಚಿತವಾಗಿ ಒದಗಿಸುತ್ತಿದ್ದು, ಈ ಸಂಚಾರಿ ವಾಹನದಲ್ಲಿ ಮೃತದೇಹಗಳು 2 ಗಂಟೆಗಳಲ್ಲಿ ಬೂದಿಯಾಗುತ್ತವೆ ಎಂದು ತಿಳಿದುಬಂದಿದೆ.

ಮುದೂರು ಗ್ರಾಮದಲ್ಲಿ ಸುಮಾರು 600 ಮನೆಗಳಿದೆ. ಕಳೆದ ವರ್ಷ 50 ವರ್ಷದ ಮಹಿಳೆಯ ಶವ ಸಂಸ್ಕಾರ ಮಾಡಲು ಜಾಗ ಸಿಗದೆ, ಮನೆಯ ಅಂಗಳದಲ್ಲಿ ಶವಸಂಸ್ಕಾರ ನಡೆಸಲಾಗಿತ್ತು. ಈ ಘಟನೆ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಎಂಪಿಎಸಿಯ ಗಮನ ಸೆಳೆದಿತ್ತು.

ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಎಂಪಿಎಸಿ ಅಧ್ಯಕ್ಷ ವಿಜಯ ಶಾಸ್ತ್ರಿ ಮತ್ತು ಸಿಇಒ ಪ್ರಭಾಕರ ಪೂಜಾರಿ ಅವರು, ಗ್ರಾಮದಲ್ಲಿ ಸಂಚಾರಿ ಶವಸಂಸ್ಕಾರ ವ್ಯವಸ್ಥೆ ಮಾಡಲು ನಿರ್ಧರಿಸಿದರು. ಇದರಂತೆ ಕೇರಳದ ಸ್ಟಾರ್ ಚೇರ್ ಕಂಪನಿಯಿಂದ 5.8 ಲಕ್ಷ ರೂಪಾಯಿ ಮೌಲ್ಯದ ಸಂಚಾರಿ ಶವಸಂಸ್ಕಾರ ವಾಹನವನ್ನು ಖರೀದಿಸಿದ್ದಾರೆ. ಈ ಸಂಚಾರಿ ಶವಸಂಸ್ಕಾರ ವಾಹನದಲ್ಲಿ 10 ಕೆಜಿ ಎಲ್‌ಪಿಜಿ ಸಿಲಿಂಡರ್ ಇರಲಿದ್ದು, ಇದು ಮೃತದೇಹವನ್ನು ತ್ವರಿತಗತಿಯಲ್ಲಿ ಬೂದಿ ಮಾಡುತ್ತದೆ.

ಅಂದಾಜು 7 ಅಡಿ ಉದ್ದ, 2 ಅಡಿ ಅಗಲ, 4 ಅಡಿ ಎತ್ತರದ ಈ ಶವದಹನ ಯಂತ್ರವು ಗ್ಯಾಸ್ ಮತ್ತು ವಿದ್ಯುತ್ ಮೂಲಕ ಈ ವಾಹನ ಕಾರ್ಯ ನಿರ್ವಹಿಸುತ್ತದೆ. ಒಂದೊಮ್ಮೆ ವಿದ್ಯುತ್ ಇಲ್ಲದಿದ್ದರೆ ಕೇವಲ ಗ್ಯಾಸ್ ಮೂಲಕವೇ ಶವ ದಹಿಸಲು ಸಾಧ್ಯ. ಯಂತ್ರದ ಒಳಭಾಗದಲ್ಲಿನ ಚೇಂಬರ್ ಮೇಲೆ ಶವ ಇಟ್ಟು ಕರ್ಪೂರ ಹಚ್ಚಿ ಮೇಲ್ಭಾಗ ಮುಚ್ಚಿ ಗ್ಯಾಸ್ ಸಂಪರ್ಕ ನೀಡಿದರೆ ಕೆಲವೇ ಕ್ಷಣಗಳಲ್ಲಿ ದಹನ ಪ್ರಕ್ರಿಯೆ ಮುಗಿಯುತ್ತದೆ.

ಗ್ಯಾಸ್ ಮೂಲಕವೇ ದಹನ ಪ್ರಕ್ರಿಯೆ ನಡೆಯುವ ಕಾರಣ ವಾಯು ಮಾಲಿನ್ಯ ರಹಿತವಾಗಿ, ಪರಿಸರ ಸ್ನೇಹಿಯಾಗಿ ಈ ಯಂತ್ರ ಕಾರ್ಯಾಚರಿಸುತ್ತದೆ. ಒಂದು ಶವ ಸಂಸ್ಕಾರಕ್ಕೆ 10 ಕಿಲೋ ಗ್ಯಾಸ್, 100 ಗ್ರಾಂ ಕರ್ಪೂರ ಬೇಕಾಗಲಿದೆ.

ಮೃತದೇಹವನ್ನು ವಾಹನದಲ್ಲಿ ಇರಿಸಿದ ಬಳಿಕ ಎಲ್ಲಾ ವಿಧಿವಿಧಾನಗಳನ್ನು ಅನುಸರಿಸಬಹುದು. ಇದು ದುರ್ವಾಸನೆ ಮತ್ತು ಹೊಗೆಯ ಹೊರಸೂಸುವಿಕೆಯನ್ನು ಕೂಡ ತಗ್ಗಿಸುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಂಚಾರಿ ಶವಸಂಸ್ಕಾರ ಯಂತ್ರವನ್ನು ಬಳಕೆ ಮಾಡುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ ಸಂಕುಚಿತ ಗಾಳಿಯೊಂದಿಗೆ ಅಧಿಕ ಒತ್ತಡದಲ್ಲಿ ಯಂತ್ರವು ಮೃತದೇಹವನ್ನು ಪರಿಣಾಮಕಾರಿಯಾಗಿ ಸುಡಲು ಸಹಾಯ ಮಾಡುತ್ತದೆ. ಈ ಸಂಚಾರಿ ಯಂತ್ರವು ದುರ್ವಾಸನೆಯನ್ನೂ ಹೊರಹಾಕುವುದಿಲ್ಲ. ಹೀಗಾಗಿ ಮನೆಗಳ ಅಂಗಳಕ್ಕೂ ಈ ಯಂತ್ರವನ್ನು ಕೊಂಡೊಯ್ಯಬಹುದು ಎಂದು ಎಂದು ಪ್ರಭಾಕರ ಪೂಜಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com