
ಸಾಂದರ್ಭಿಕ ಚಿತ್ರ
ಬೆಂಗಳೂರು: ಸೌಲಭ್ಯ ವಂಚಿತ ಮಕ್ಕಳಿಗೆ ತಂತ್ರಜ್ಞಾನದ ಅರಿವು ಮೂಡಿರುವ ಮಹತ್ವದ ಕೆಲಸವನ್ನು ನಗರದ ಈ ಯುವಕರು ಮಾಡುತ್ತಿದ್ದಾರೆ.
ಬೆಂಗಳೂರಿನ ದಿ ಇಂಟರ್‌ನ್ಯಾಶನಲ್ ಸ್ಕೂಲ್‌ನ 12-14 ವಯಸ್ಸಿನ 10 ವಿದ್ಯಾರ್ಥಿಗಳು ರಿಕ್ಕೆಟಿ ರೋಬೋಟ್ಸ್ ರೋಬೋಶಾಲಾ (ಆರ್'ಆರ್'ಆರ್) ಎಂಬ ಸಂಸ್ಥೆಯನ್ನು ಆರಂಭಿಸಿದ್ದು, ಇದರ ಮೂಲಕ ಹಿಂದುಳಿದ ವಿದ್ಯಾರ್ಥಿಗಳಿಗೆ ಅವರ ಭವಿಷ್ಯಕ್ಕಾಗಿ ಹೆಚ್ಚಿನ ಅವಕಾಶಗಳನ್ನು ತೆರೆಯಲು ಸಹಾಯ ಮಾಡಲು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ಕುರಿತು ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಬೆಂಗಳೂರು ಮತ್ತು ಇಡೀ ವಿಶ್ವವೇ ತಂತ್ರಜ್ಞಾನ ಆಧಾರಿತ ಭವಿಷ್ಯದತ್ತ ಸಾಗುತ್ತಿದ್ದು, ಸೌಲಭ್ಯರಹಿತ ಮಕ್ಕಳು ಹಿಂದುಳಿಯದಂತೆ ಮಾಡುವುದು ನಮ್ಮ ಗುರಿಯಾಗಿದೆ. ಸಮಾಜ ಕಲ್ಯಾಣಗಳು ಈ ಸಮುದಾಯಗಳ ಮೇಲೆ ಪರಿಣಾಮ ಬೀರಬೇಕೆಂದು ನಾವು ಬಯಸುತ್ತಿದ್ದೇವೆಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಆರಿತ್ ಸಮೈರಾ, ನಿಶ್ಕಾ, ಕೆಯೂಷ್, ಒದತಿ, ರಯಾನ್, ಅವನಿ, ಮಹಿರ್ ಮತ್ತು ಅರ್ಜುನ್ ಎಂಬ ವಿದ್ಯಾರ್ಥಿಗಳು, ಹಿಂದುಳಿದ ಮಕ್ಕಳಿಗೆ ತಂತ್ರಜ್ಞಾನದ ಅರಿವು ಮಾಡಿಸುತ್ತಿದ್ದಾರೆ. ಈಗಾಗಲೇ ಈ ವಿದ್ಯಾರ್ಥಿಗಳು ಅನಾಥಾಶ್ರಮ ಹಾಗೂ ನಗರದ ಹಲವು ಸರ್ಕಾರಿ ಶಾಲೆಗಳಲ್ಲಿ ಹಲವು ತರಬೇತಿ, ವರ್ಕ್ ಶಾಪ್ ಗಳನ್ನು ನಡೆಸಿದ್ದಾರೆ.
“ತಂತ್ರಜ್ಞಾನವು ಭವಿಷ್ಯವಾಗಿದೆ, ಆದ್ದರಿಂದ ಅದನ್ನು ಎಲ್ಲರಿಗೂ ತಿಳಿಯುವಂತೆ ಮಾಡದ ಹೊರತು ನಾವು ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ತಂತ್ರಜ್ಞಾನದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ನಮ್ಮ ಪ್ರಾಥಮಿಕ ಉದ್ದೇಶಗಳಲ್ಲಿ ಒಂದಾಗಿದೆ. ಬೆಂಗಳೂರನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಾವು ಈ ಪ್ರಯತ್ನಗಳನ್ನು ಮಾಡುತ್ತಿದ್ದೇವೆಂದು ಮತ್ತೊಬ್ಬ ವಿದ್ಯಾರ್ಥಿ ಹೇಳಿದ್ದಾರೆ.
ಇದನ್ನೂ ಓದಿ: ದೇವರ ಸೇವೆಯ ಹೆಸರಲ್ಲಿ ಲೈಂಗಿಕ ಗುಲಾಮಗಿರಿ, 'ದೇವದಾಸಿ' ಪದ್ಧತಿ!
ಈ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿ ಅವರು ಮಕ್ಕಳಿಗೆ ಪ್ರೋಗ್ರಾಮಿಂಗ್ ಭಾಷೆಯಾದ ಸ್ಕ್ರ್ಯಾಚ್ ಮೂಲಕ ಕೋಡಿಂಗ್ ಕಲಿಸುತ್ತಿದ್ದಾರೆ. ವೈಟ್‌ಫೀಲ್ಡ್‌ನಲ್ಲಿರುವ ರಾಮಗೊಂಡನಹಳ್ಳಿ ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಂಡು, ಅಭಿವೃದ್ಧಿಪಡಿಸುತ್ತಿದ್ದಾರೆ. ಶಾಲೆಯಲ್ಲಿ ಕಂಪ್ಯೂಟರ್ ಮತ್ತು ರೊಬೊಟಿಕ್ಸ್ ಲ್ಯಾಬ್‌ಗಳನ್ನು ಸ್ಥಾಪಿಸುವ ಕೆಲಸ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿರುವ ಅನಾಥಾಶ್ರಮ ಆರತಿ ಹೋಮ್ಸ್‌ನಲ್ಲಿ ಮೇಕರ್ ಲ್ಯಾಬ್ ಸ್ಥಾಪಿಸಿ, ಮಕ್ಕಳು ಮತ್ತು ವಯಸ್ಕರಿಗೆ ವಸ್ತುಗಳನ್ನು ರಚಿಸಲು ಮತ್ತು ಆವಿಷ್ಕರಿಸಲು ಸ್ಥಳವನ್ನು ಒದಗಿಸಿಕೊಟ್ಟಿದ್ದಾರೆ.
ಇದಷ್ಟೇ ಅಲ್ಲದೆ, ಪ್ರತೀ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಸ್ಥಾಪಿಸುವ ಹಾಗೂ ಪ್ರತೀ ಹಂತದಲ್ಲಿಯೂ ಪೂರ್ಣ ಪ್ರಮಾಣದ ರೋಬೋಟಿಕ್ ಲ್ಯಾಬ್ ಸ್ಥಾಪಿಸುವ ಗುರಿಯನ್ನು ವಿದ್ಯಾರ್ಥಿಗಳು ಹೊಂದಿದ್ದಾರೆ.