ಆತಿಥ್ಯ ಉದ್ಯಮಕ್ಕೆ ಮರುಜೀವ ನೀಡಿದ 'ಕಾಂತಾರ': ಹೋಟೆಲ್, ಹೋಂಸ್ಟೇಗಳಿಗೆ ಸಿನಿಮಾ ಹೆಸರು!
ಆತಿಥ್ಯ ಉದ್ಯಮದಲ್ಲಿ ಭಾರೀ ಪೈಪೋಟಿ ಇರುವ ಈ ಸಮಯದಲ್ಲಿ ಪ್ರವಾಸಿಗರ ಆಕರ್ಷಿಸಲು ಹೋಟೆಲ್ ಹಾಗೂ ಹೋಂಸ್ಟೇಗಳಿಗೆ ಆಕರ್ಷಕ ಹೆಸರಿಡುವುದೇ ದೊಡ್ಡ ಸವಾಲಿನ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಕೆಲ ಉದ್ಯಮಿಗಳು ಬ್ಲಾಕ್ ಬಸ್ಟರ್ ಮೂವಿ ಕಾಂತಾರ ಚಿತ್ರದ ಯಶಸ್ಸನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದ್ದು...
Published: 07th February 2023 12:24 PM | Last Updated: 07th February 2023 07:47 PM | A+A A-

ಸಂಗ್ರಹ ಚಿತ್ರ
ಹುಬ್ಬಳ್ಳಿ: ಆತಿಥ್ಯ ಉದ್ಯಮದಲ್ಲಿ ಭಾರೀ ಪೈಪೋಟಿ ಇರುವ ಈ ಸಮಯದಲ್ಲಿ ಪ್ರವಾಸಿಗರ ಆಕರ್ಷಿಸಲು ಹೋಟೆಲ್ ಹಾಗೂ ಹೋಂಸ್ಟೇಗಳಿಗೆ ಆಕರ್ಷಕ ಹೆಸರಿಡುವುದೇ ದೊಡ್ಡ ಸವಾಲಿನ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಕೆಲ ಉದ್ಯಮಿಗಳು ಬ್ಲಾಕ್ ಬಸ್ಟರ್ ಮೂವಿ ಕಾಂತಾರ ಚಿತ್ರದ ಯಶಸ್ಸನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದ್ದು, ತಮ್ಮ ಹೋಟೆಲ್ ಹಾಗೂ ಹೋಂಸ್ಟೇಗಳಿಗೆ ಕಾಂತಾರ ಹೆಸರನ್ನು ಇಡುತ್ತಿದ್ದಾರೆ, ಈ ಮೂಲಕ ಪ್ರವಾಸಿಗರು, ಗ್ರಾಹಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ದಾಂಡೇಲಿ ಬಳಿಯ ಹೋಮ್ ಸ್ಟೇ ಮತ್ತು ಹಳಿಯಾಳ ಬಳಿಯ ಡಾಬಾಗಳಿಗೆ ಕಾಂತಾರ ಹೆಸರನ್ನು ಇಡಲಾಗಿದ್ದು, ಈ ಹೆಸರು ಗ್ರಾಹಕರು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಜೊಯಿಡಾ ತಾಲೂಕಿನ ಪ್ರದಾನಿ ಗ್ರಾಮದ ಕಾಂತಾರ ಹೋಂಸ್ಟೇ ಮಾಲೀಕ ಮಹೇಶ್ ದಂಡಗಲಿ ಮಾತನಾಡಿ, ಕಾಡಿನಲ್ಲಿ ನಡೆಯುವ ಕಥೆಯ ಸಿನಿಮಾ ನೋಡಿದೆ. ಸಿನಿಮಾ ಬಹಳಷ್ಟು ಇಷ್ಟವಾಗಿತ್ತು. ಜೊಯಿಡಾ ತಾಲೂಕಿನ ದಟ್ಟವಾದ ಅರಣ್ಯದಲ್ಲಿ ಹೋಂಸ್ಟೇ ಇರುವುದರಿಂದ, ಇದಕ್ಕೆ ಸಿನಿಮಾ ಹೆಸರು ಇಡುವುದು ಚೆನ್ನಾಗಿರುತ್ತದೆ ಎಂದು ಭಾವಿಸಿದ್ದೆ. ನನಗೆ ದೈವದ ಮೇಲೆ ನಂಬಿಕೆಯಿದೆ. ಹೋಂಸ್ಟೇನಲ್ಲಿ ಅತ್ಯುತ್ತಮ ಸೇವೆಗಳನ್ನು ಒದಗಿಸುವ ಮೂಲಕ ಪ್ರವಾಸಿಗರನ್ನು ಸಂತಸಪಡಿಸಬಹುದು. ಆನ್‌ಲೈನ್‌ನಲ್ಲಿ ಇನ್ನೂ ಹೆಸರು ಪ್ರಸಿದ್ಧವಾಗಿಲ್ಲ, ಆದರೆ, ಹೋಂಸ್ಟೇಗೆ ಕಾಂತಾರ ಹೆಸರು ಇಟ್ಟಿರುವುದಕ್ಕೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ.
ಹಳಿಯಾಳ-ಧಾರವಾಡ ರಸ್ತೆಯಲ್ಲಿರುವ ಕಾಂತಾರ ಡಾಬಾದ ಮಾಲೀಕರು ಮಾತನಾಡಿ, ಸಸ್ಯಾಹಾರಿ-ಮಾಂಸಾಹಾರಿ ಡಾಬಾ ತೆರೆಯಲು ಚಿಂತನೆ ನಡೆಸಿದಾಗ ಮನಸ್ಸಿನಲ್ಲಿ ಸಾಕಷ್ಟು ಹೆಸರುಗಳು ಇದ್ದವು. ಆದರೆ, ಅಂತಿಮವಾಗಿ ಕಾಂತಾರ ಹೆಸರಿಡಲು ನಿರ್ಧರಿಸಿದೆವು. ಚಿತ್ರವು ಅರಣ್ಯವಾಸಿಗಳ ದೈನಂದಿನ ಜೀವನವನ್ನು ಆಧರಿಸಿದ್ದು, ಚಿತ್ರದುದ್ದಕ್ಕೂ ಆಹಾರ ಪದ್ಧತಿಯನ್ನು ಗೌರವಯುತವಾಗಿ ತೋರಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನೀವೆಲ್ಲಾ ನೋಡಿದ್ದು ಕಾಂತಾರ-2, ಮುಂದೆ ಬರುವುದು ಕಾಂತಾರ ಪಾರ್ಟ್-1: ರಿಷಬ್ ಶೆಟ್ಟಿ
2014ರಲ್ಲಿ ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾದಾಗ ಅನೇಕ ಟೀ ಅಂಗಡಿಗಳು ಮತ್ತು ತಿನಿಸುಗಳಿಗೆ ಅವರ ಹೆಸರನ್ನು ಇಡಲಾಗಿತ್ತು. ಇಂದಿಗೂ ಮೋದಿ ಹೆಸರಿನಲ್ಲಿ ಹಲವಾರು ಫುಡ್ ಜಾಯಿಂಟ್‌ಗಳು ಮತ್ತು ಟೀ ಅಂಗಡಿಗಳು ನಡೆಯುತ್ತಿವೆ.
ಪ್ರವಾಸೋದ್ಯಮ ತಜ್ಞ ಶಿವಯೋಗಿ ಎಚ್ ಅವರು ಮಾತನಾಡಿ, ವ್ಯಾಪಾರಕ್ಕಾಗಿ ಆಸಕ್ತಿದಾಯಕ ಹೆಸರನ್ನು ಆಯ್ಕೆ ಮಾಡುವುದು ಸುಲಭದ ಕೆಲಸವಲ್ಲ. ಕೆಲವೊಮ್ಮೆ ಲೋಗೋ ಹಾಗೂ ಹೆಸರಿಗಾಗಿ ಏಜೆನ್ಸಿಗಳ ಮೊರೆ ಹೋಗುವವರಿದ್ದಾರೆ. ಪ್ರದೇಶವನ್ನು ಅವಲಂಬಿಸಿ ಪ್ರವಾಸೋದ್ಯಮ ಘಟಕಗಳು ಅಥವಾ ಹೋಟೆಲ್‌ಗಳ ಹೆಸರುಗಳು ಬದಲಾಗುತ್ತವೆ. ವನ್ಯಜೀವಿ ಪ್ರದೇಶಗಳಲ್ಲಿರುವ ರೆಸಾರ್ಟ್ ಹಾಗೂ ಹೋಟೆಲ್ ಗಳಿಗಿಂತ ಕಡಲತೀರದ ರೆಸಾರ್ಟ್, ಹೋಟೆಲ್ ಗಳ ಹೆಸರು ಭಿನ್ನವಾಗಿರುತ್ತವೆ ಎಂದು ಹೇಳಿದ್ದಾರೆ.