ಎಸ್‌ಡಿಪಿಐ ಕಚೇರಿಗಳ ಮೇಲೆ ದಾಳಿ ನಡೆಸಲು ಕೇಂದ್ರ ನಿರ್ದೇಶನ ನೀಡಿದೆಯೇ?: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಚೇರಿಗಳ ಮೇಲೆ ದಾಳಿ ನಡೆಸಲು ಕೇಂದ್ರ ಸರ್ಕಾರ ನಿರ್ದೇಶನ ನೀಡುತ್ತಿದೆಯೇ ಎಂಬುದರ ಕುರಿತು ಕರ್ನಾಟಕ ಹೈಕೋರ್ಟ್ ಬುಧವಾರ ಸ್ಪಷ್ಟನೆ ಕೇಳಿದೆ. ಈ ಸಂಬಂಧ ದಾಖಲೆಗಳನ್ನು ಸಲ್ಲಿಸುವಂತೆಯೂ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ.
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಚೇರಿಗಳ ಮೇಲೆ ದಾಳಿ ನಡೆಸಲು ಕೇಂದ್ರ ಸರ್ಕಾರ ನಿರ್ದೇಶನ ನೀಡುತ್ತಿದೆಯೇ ಎಂಬುದರ ಕುರಿತು ಕರ್ನಾಟಕ ಹೈಕೋರ್ಟ್ ಬುಧವಾರ ಸ್ಪಷ್ಟನೆ ಕೇಳಿದೆ. ಈ ಸಂಬಂಧ ದಾಖಲೆಗಳನ್ನು ಸಲ್ಲಿಸುವಂತೆಯೂ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ.

ಎಸ್‌ಡಿಪಿಐಗೆ ಸಂಬಂಧಿಸಿದ ಆಸ್ತಿಗಳನ್ನು ವಶಪಡಿಸಿಕೊಳ್ಳುವುದನ್ನು ನಿಲ್ಲಿಸುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತಕ್ಕೆ ನಿರ್ದೇಶನ ನೀಡುವಂತೆ ಕೋರಿ ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಈ ನಿರ್ದೇಶನ ನೀಡಿದೆ.

ಪೂರ್ವ ಸೂಚನೆ ನೀಡದೆ ದಕ್ಷಿಣ ಕನ್ನಡ ಜಿಲ್ಲೆಯ ಎಸ್‌ಡಿಪಿಐನ 17 ಕಚೇರಿಗಳಿಗೆ ಬೀಗ ಜಡಿಯಲಾಗಿದೆ. ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಎಸ್‌ಡಿಪಿಐ ಸಿದ್ಧತೆ ನಡೆಸಬೇಕಿದೆ ಎಂದು ಅರ್ಜಿದಾರರ ಪರ ವಕೀಲರು ವಿವರಿಸಿದರು.

ಕಚೇರಿಗಳಿಗೆ ಬೀಗ ಹಾಕಿರುವುದರಿಂದ ಯಾವುದೇ ರಾಜಕೀಯ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಕಚೇರಿಗಳ ಬೀಗವನ್ನು ತೆರವುಗೊಳಿಸಲು ನಿರ್ದೇಶನ ನೀಡುವಂತೆ ಪೀಠಕ್ಕೆ ಮನವಿ ಮಾಡಿದರು.

ಎಸ್‌ಡಿಪಿಐ ಬೇಡಿಕೆಗೆ ಸರ್ಕಾರದ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ''ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಯನ್ನು ಕೇಂದ್ರ ಸರಕಾರ ನಿಷೇಧಿಸಿದೆ. ಎಸ್‌ಡಿಪಿಐ ಕಚೇರಿಗಳಲ್ಲಿ ಪಿಎಫ್‌ಐಗೆ ಸಂಬಂಧಿಸಿದ ಸಾಮಗ್ರಿಗಳು ಪತ್ತೆಯಾಗಿವೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿದೆ. ಆದರೂ, ಅರ್ಜಿದಾರರು ಕೇಂದ್ರ ಸರ್ಕಾರವನ್ನು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿಲ್ಲ' ಎಂದು ಅವರು ಹೇಳಿದರು.

ಕೇಂದ್ರದ ನಿರ್ದೇಶನಗಳ ಬಗ್ಗೆ ಸರ್ಕಾರಕ್ಕೆ ಪೀಠವು ಪ್ರಶ್ನೆಗಳನ್ನು ಹಾಕಿತು ಮತ್ತು ಈ ಸಂಬಂಧ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿತು. ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 16ಕ್ಕೆ ಮುಂದೂಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com