ನಿಷೇಧಿತ ಪಿಎಫ್ಐ ಸಂಘಟನೆಯಿಂದ ಬೆದರಿಕೆ: ಮೇಲುಕೋಟೆಯ ಯದುಗಿರಿ ಮಠದ ಪೀಠಾಧಿಪತಿ ರಾಮಾನುಜ ಜೀಯರ್ ಸ್ವಾಮೀಜಿಗೆ ವೈ ಕೆಟಗರಿ ಭದ್ರತೆ
ಮೇಲುಕೋಟೆಯ ಯದುಗಿರಿ ಮಠದ ಪೀಠಾಧಿಪತಿ ಯತಿರಾಜ ರಾಮಾನುಜ ಜೀಯರ್ ಸ್ವಾಮೀಜಿ ಅವರಿಗೆ ಕೇಂದ್ರ ಗೃಹ ಸಚಿವಾಲಯ ವೈ ಕೆಟಗರಿ ಭದ್ರತೆ ನೀಡಿದೆ.
Published: 09th February 2023 11:36 AM | Last Updated: 09th February 2023 03:31 PM | A+A A-

ಯತಿರಾಜ ರಾಮಾನುಜ ಜೀಯರ್
ಬೆಂಗಳೂರು: ಮೇಲುಕೋಟೆಯ ಯದುಗಿರಿ ಮಠದ ಪೀಠಾಧಿಪತಿ ಯತಿರಾಜ ರಾಮಾನುಜ ಜೀಯರ್ ಸ್ವಾಮೀಜಿ ಅವರಿಗೆ ಕೇಂದ್ರ ಗೃಹ ಸಚಿವಾಲಯ ವೈ ಕೆಟಗರಿ ಭದ್ರತೆ ನೀಡಿದೆ.
ಮೇಲುಕೋಟೆ ಯದುಗಿರಿಯ ಯತಿರಾಜ ಮಠದ ಪೀಠಾಧಿಪತಿ ಯದುಗಿರಿ ಯತಿರಾಜ ಶ್ರೀಮನ್ ನಾರಾಯಣ ರಾಮಾನುಜ ಜಿಯರ್ ಅವರಿಗೆ ನಿಷೇಧಿತ ಪಿಎಫ್ಐ ಸಂಘಟನೆಯಿಂದ ಬೆದರಿಕೆ ಇರುವುದರಿಂದ ವೈ ಮಾದರಿ ಭದ್ರತೆ ನೀಡುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.
ಯತಿರಾಜ ಜಿಯರ್ ಅವರಿಗೆ ಇತ್ತೀಚೆಗೆ ಪಿಎಫ್ಐ ಸಂಘಟನೆ ವಿಡಿಯೋ ಸಂದೇಶದ ಮೂಲಕ ಜೀವ ಬೆದರಿಕೆ ಹಾಕಿರುವ ಸುದ್ದಿ ರಾಷ್ಟ್ರೀಯ ನ್ಯೂಸ್ ಚಾನೆಲ್‌ಗಳಲ್ಲಿ ಬಿತ್ತರವಾಗಿರುವ ಹಿನ್ನೆಲೆಯಲ್ಲಿ ಅವರಿಗೆ ವೈ ಮಾದರಿ ಭದ್ರತೆಯನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ.
ಯದುಗಿರಿ ಯತಿರಾಜ ಮಠದ ಯತಿರಾಜ ಜಿಯರ್ ಅವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಶಾಖ ಮಠದಲ್ಲಿ ವಾಸವಾಗಿದ್ದು ಮೇಲುಕೋಟೆ ವೈರಮುಡಿ, ಶ್ರೀ ರಾಮಾನುಜ ತಿರುನಕ್ಷತ್ರ ಸೇರಿದಂತೆ ವಿಶೇಷ ದಿನಗಳನ್ನು ಮಾತ್ರ ಮೇಲುಕೋಟೆಗೆ ಆಗಮಿಸಿ ಪೂಜಾ ಕೈಂಕರ್ಯಗಳಲ್ಲಿ ತೊಡಗುತ್ತಿದ್ದರು.
ಯದುಗಿರಿ ಮಠದಿಂದ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ವಿಶಿಷ್ಟಾದ್ವೈತ ತತ್ವದ ಜನಕರಾದ ರಾಮಾನುಜಾಚಾರ್ಯರ ಪ್ರತಿಮೆಯನ್ನು 2022ರ ಜುಲೈನಲ್ಲಿ ಲೋಕಾರ್ಪಣೆ ಮಾಡಲಾಗಿತ್ತು. ಸ್ವಾಮೀಜಿಯವರ ನೇತೃತ್ವದಲ್ಲಿ ನಾಲ್ಕೈದು ತಿಂಗಳ ಹಿಂದೆ ಕಾಶ್ಮೀರದಲ್ಲಿ ರಾಮಾನುಜಾಚಾರ್ಯರ ಪ್ರತಿಮೆ ನಿರ್ಮಾಣ ನಡೆದಿತ್ತು. ಆ ಬಳಿಕ ಸ್ವಾಮೀಜಿಯವರಿಗೆ ಪಿಎಫ್ಐ ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಭದ್ರತೆ ಒದಗಿಸಲಾಗಿದೆ.