ಇಂದಿನಿಂದ ವಿಧಾನಮಂಡಲ ಬಜೆಟ್ ಅಧಿವೇಶನ: ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲರ ಭಾಷಣ; ಶಕ್ತಿ ಸೌಧದ ಸುತ್ತಮುತ್ತ ಬಿಗಿ ಭದ್ರತೆ

ಪ್ರಸಕ್ತ ಅವಧಿಯ ವಿಧಾನಮಂಡಲದ ಅಂತಿಮ ಹಾಗೂ ಬಜೆಟ್ ಅಧಿವೇಶನ ಶುಕ್ರವಾರದಿಂದ ಆರಂಭವಾಗಲಿದ್ದು, ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ 3 ರಾಜಕೀಯ ಪಕ್ಷಗಳ ವಾಕ್ಸಮರಕ್ಕೆ ಈ ಅಧಿವೇಶನ ಮಹತ್ವದ ವೇದಿಕೆಯಾಗಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪ್ರಸಕ್ತ ಅವಧಿಯ ವಿಧಾನಮಂಡಲದ ಅಂತಿಮ ಹಾಗೂ ಬಜೆಟ್ ಅಧಿವೇಶನ ಶುಕ್ರವಾರದಿಂದ ಆರಂಭವಾಗಲಿದ್ದು, ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ 3 ರಾಜಕೀಯ ಪಕ್ಷಗಳ ವಾಕ್ಸಮರಕ್ಕೆ ಈ ಅಧಿವೇಶನ ಮಹತ್ವದ ವೇದಿಕೆಯಾಗಲಿದೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಸಕ್ತ ವರ್ಷದ ಮೊದಲ ಅಧಿವೇಶನ ಆಗಿರುವ ಕಾರಣ ಸಂಪ್ರದಾಯದಂತೆ ಶುಕ್ರವಾರ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ರಾಜ್ಯಪಾಲರ ಭಾಷಣದ ನಂತರ ಚಳಿಗಾಲದ ಅಧಿವೇಶನದ ಬಳಿಕ ನಿಧನ ಹೊಂದಿದ ಗಣ್ಯರಿಗೆ ಸಂತಾಪ ಸೂಚಿಸಲಾಗುವುದು. ಫೆ.17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರಸಕ್ತ ಸಾಲಿನ ರಾಜ್ಯದ ಆಯವ್ಯಯ ಮಂಡಿಸಲಿದ್ದಾರೆ.

ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಮೂರು ಪಕ್ಷಗಳ ಶಾಸಕರು ಚುನಾವಣಾ ಸಂಬಂಧಿತ ಕೆಲಸಗಳಲ್ಲಿ ನಿರತರಾಗಿದ್ದು, ಈ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಕಳಪೆ ಹಾಜರಾತಿ ಕಂಡುಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪಂಚರತ್ನ ಯಾತ್ರೆಯಲ್ಲಿ ನಿರತರಾಗಿರುವ ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಡಿಮೆಯಿದ್ದು, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಜೆಟ್ ದಿನ ಸೇರಿದಂತೆ ಕೆಲವೇ ದಿನಗಳಲ್ಲಿ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಎನ್ನಲಾಗಿದೆ.

ದಕ್ಷಿಣ ಕರ್ನಾಟಕ ಭಾಗದಲ್ಲಿ ಯಾತ್ರೆಯ ನೇತೃತ್ವ ವಹಿಸಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ಕೆಲವೇ ದಿನಗಳ ಕಾಲ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿಯ ಹಿರಿಯ ನಾಯಕರು ಚುನಾವಣಾ ಕೆಲಸದಲ್ಲಿ ನಿರತರಾಗಿದ್ದಾರೆ. ಪ್ರಧಾನಿ ಮೋದಿಯವರು ಸೋಮವಾರ ಬೆಂಗಳೂರಿಗೆ ಆಗಮಿಸುತ್ತಿದ್ದು, ಏರೋ ಇಂಡಿಯಾ 2023ಕ್ಕೆ ಚಾಲನೆ ನೀಡಲಿದ್ದಾರೆ. ಮೋದಿಯವರ ಆಗಮನ ಹಿನ್ನೆಲೆಯಲ್ಲಿ ಅಧಿವೇಶನದ ಜೊತೆಗೆ ಈ ಕುರಿತ ಸಿದ್ಧತೆಗಳನ್ನೂ ಬಿಜೆಪಿ ನಾಯಕರು ಮಾಡಬೇಕಿದೆ.

ಅಧಿವೇಶನ ಕುರಿತು ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಪ್ರತಿಯೊಬ್ಬ ಶಾಸಕರೂ ಅಧಿವೇಶನದ ಕಲಾಪದಲ್ಲಿ ತಪ್ಪದೇ ಸಕ್ರಿಯವಾಗಿ ಭಾಗವಹಿಸಬೇಕು. ಸದನ ಪ್ರಜಾಪ್ರಭುತ್ವದ ದೇಗುಲ ಎಂದು ಪರಿಗಣಿಸಲ್ಪಡುವುದರಿಂದ ನನ್ನ ಸಲಹೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಆದರೆ, ಅಧಿವೇಶನದ ವೇಳಾಪಟ್ಟಿ ಪ್ರಕಟಗೊಂಡ ನಂತರವೂ ಕೆಲವು ರಾಜಕೀಯ ಪಕ್ಷಗಳು ಹಾಗೂ ಸದಸ್ಯರು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇದನ್ನು ನೋಡಿದರೆ ತಮ್ಮ ಕೆಲಸ ಸುಲಭವಾಗಲಿದೆ ಎಂದು ಕಾಗೇರಿ ಹೇಳಿದರು. ಈ ಮೂಲಕ ಪರೋಕ್ಷವಾಗಿ ಅಧಿವೇಶನದಲ್ಲಿ ಸದಸ್ಯರ ಗೈರು ಹಾಜರಿ ಮುನ್ಸೂಚನೆ ನೀಡಿದರು.

ಫೆಬ್ರವರಿ 13 ರಂದು ಸಭಾ ನಾಯಕರೂ ಆದ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕರು ಹಾಗೂ ಸದನ ನಾಯಕರೊಂದಿಗೆ ಸದನ ಕಾರ್ಯಕಲಾಪ ಸಮಿತಿ ಸಭೆ ನಡೆಯಲಿದ್ದು, ಸದನದ ನಡೆಯನ್ನು ನಿರ್ಧರಿಸಲಿದೆ. ಇದೀಗ ಸದನದಲ್ಲಿ ಮಂಡನೆಗೆ ಏಳು ವಿಧೇಯಕಗಳು ಸ್ವೀಕೃತವಾಗಿದ್ದು, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಹಾಗೂ ಆರು ಖಾಸಗಿ ವಿಶ್ವವಿದ್ಯಾನಿಲಯಗಳ ವಿಧೇಯಕಗಳು ಒಳಗೊಂಡಿವೆ.  ಅಲ್ಲದೇ, 1300 ಪ್ರಶ್ನೆಗಳು ಸ್ವೀಕೃತವಾಗಿವೆ ಎಂದು ಮಾಹಿತಿ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com