ತುಮಕೂರು: ಗಂಡು ಹುಲಿ ಮೃತದೇಹ ಪತ್ತೆ, ಬೇರೆಡೆ ಕೊಂದು ಇಲ್ಲಿ ಹಾಕಿರುವ ಶಂಕೆ, ಪೊಲೀಸ್ ತನಿಖೆ

ತುಮಕೂರಿನಲ್ಲಿ ಮೊದಲ ಪ್ರಕರಣ ಎಂಬಂತೆ ಗಂಡು ಹುಲಿ ಸತ್ತಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಎದುರಾಗಿದೆ.
ಹುಲಿ ಮೃತದೇಹ
ಹುಲಿ ಮೃತದೇಹ

ತುಮಕೂರು: ತುಮಕೂರಿನಲ್ಲಿ ಮೊದಲ ಪ್ರಕರಣ ಎಂಬಂತೆ ಗಂಡು ಹುಲಿ ಸತ್ತಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಎದುರಾಗಿದೆ.

ತುಮಕೂರಿನ ಗುಬ್ಬಿ ತಾಲೂಕಿನ ಅಂಕಸಂದ್ರ ಮೀಸಲು ಅರಣ್ಯದ ರಸ್ತೆಯ ಖಾಲಿ ನೀರಿನ ಪೈಪ್‌ಲೈನ್‌ನಲ್ಲಿ ಹುಲಿ ಮೃತದೇಹ ಪತ್ತೆಯಾಗಿದೆ. ಈ ಹಿಂದೆ ತುಮಕೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಎಂದೂ ಕೂಡ ಯಾರ ಕಣ್ಣಿಗೂ ಕಾಣದ ಹುಲಿಯೊಂದು ಸಾವನ್ನಪ್ಪಿರುವುದು ತುಮಕೂರು ಜಿಲ್ಲೆಯ ಜನರಲ್ಲಿ ಅಚ್ಚರಿ ಹಾಗೂ ಅನುಮಾನ ಮೂಡಿಸಿದೆ.‌

ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಅಂಕಸಂದ್ರ ಮೀಸಲು ಅರಣ್ಯ ಪ್ರದೇಶದ ಸಿಮೆಂಟ್ ಪೈಪ್ ಒಳಗೆ ಹುಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಂದು ಮುಂಜಾನೆ ಚಿಕ್ಕಹೆಗಡೇಹಳ್ಳಿ ಗ್ರಾಮದ ವಾಸಿಯೊಬ್ಬರು ಬಹಿರ್ದೆಸೆಗೆ ಹೋಗಿದ್ದ ಸಂದರ್ಭದಲ್ಲಿ ಹುಲಿ ಸಾವನಪ್ಪಿ ಬಿದ್ದಿರುವುದು ಗೊತ್ತಾಗಿದೆ. ಕೂಡಲೇ ಸ್ಥಳೀಯರು ಗುಬ್ಬಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಹುಲಿಯನ್ನು ಪರಿಶೀಲಿಸಿದ್ದಾರೆ.

ಹುಲಿ ಮೈ ಮೇಲೆ ಯಾವುದೇ ಗಾಯ ಅಥವಾ ಹೊಡೆತ ಬಿದ್ದಿರುವ ಗುರುತುಗಳು ಪತ್ತೆಯಾಗಿಲ್ಲ. ಹೀಗಾಗಿ ಹುಲಿ ಸಾವಿನ ರಹಸ್ಯ ಭೇದಿಸಲು ತನಿಖೆ ನಡೆಸಲಾಗುತ್ತಿದೆ. ಭದ್ರಾ ಅಭಯಾರಣ್ಯದಿಂದ ವೈದ್ಯರ ತಂಡ ಆಗಮಿಸುತ್ತಿದ್ದು, ಹುಲಿ ದೇಹದ ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ. ಜೊತೆಗೆ ಚೇಳೂರು ಪೊಲೀಸರು ಹಾಗೂ ಶಿರಾ ಡಿವೈಎಸ್ಪಿ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.‌ ಅಂತೆಯೇ ಹುಲಿ ಸಾವಿನ ಕುರಿತು ತನಿಖೆ ನಡೆಸಿದ್ದಾರೆ.

ಅಧಿಕಾರಿಗಳ ಕಂಗೆಡಿಸಿದ ಪ್ರಕರಣ
ಹುಲಿ ಶವ ಪತ್ತೆಯಾಗಿರುವುದು ವನ್ಯಜೀವಿ ತಜ್ಞರು ಮತ್ತು ಅರಣ್ಯಾಧಿಕಾರಿಗಳನ್ನು ಕಂಗೆಡಿಸಿದೆ, ಹುಲಿ ತುಮಕೂರಿಗೆ ಎಲ್ಲಿಂದ ಬಂದಿರಬಹುದು ಎಂದು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದೆ. 132 ಕಿಮೀ ದೂರದಲ್ಲಿರುವ ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಅಥವಾ ಗಂಡು ಹುಲಿ ಸತ್ತ ಸ್ಥಳದಿಂದ ಸುಮಾರು 136 ಕಿಮೀ ದೂರದಲ್ಲಿರುವ ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಹುಲಿ ದಾರಿ ತಪ್ಪಿರಬಹುದು ಎಂದು ವನ್ಯಜೀವಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪಕ್ಕದ ಚಿಕ್ಕಮಗಳೂರು ಜಿಲ್ಲೆಯ ಭಾಗದಿಂದ ಇಲ್ಲಿಗೆ ಹುಲಿ ಬಂದಿರಬಹುದು. ಅಥವಾ ಯಾರಾದ್ರೂ ಹುಲಿಯನ್ನು ಕೊಂದು ತಂದು ಹಾಕಿದ್ದಾರಾ ಎಂಬ ದೃಷ್ಟಿಕೋನದಲ್ಲೂ ಅರಣ್ಯ ಇಲಾಖೆ ಹಾಗೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಮಂಗಳವಾರ ಸಂಜೆ ಹುಲಿ ಮೃತದೇಹವನ್ನು ಸುಟ್ಟು ಹಾಕಲಾಗಿದ್ದು, ಅಂಗಾಂಗಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಸಾವಿಗೆ ಕಾರಣ ತಿಳಿಯಬಹುದು. ತುಮಕೂರಿನಲ್ಲಿ ಹಲವು ವರ್ಷಗಳಿಂದ ಹುಲಿ ಕಾಣಿಸಿಕೊಂಡಿಲ್ಲ. ಕೆಲವೆಡೆ ಹುಲಿ ಕಾಣಿಸಿಕೊಂಡ ಪ್ರಕರಣಗಳು ಕಂಡುಬಂದಿದ್ದರೂ ಛಾಯಾಚಿತ್ರ ಅಥವಾ ವಿಡಿಯೋ ಸಾಕ್ಷ್ಯಗಳಿಲ್ಲ. 2006 ರಲ್ಲಿ, ರಾಷ್ಟ್ರೀಯ ಹುಲಿ ಗಣತಿಯ ಸಮಯದಲ್ಲಿ ತುಮಕೂರಿನ ದೇವರಾಯನದುರ್ಗ ಅರಣ್ಯದಲ್ಲಿ ಹುಲಿ ಹೆಜ್ಜೆ ಗುರುತುಗಳು ಕಂಡುಬಂದಿದ್ದವು.

ತುಮಕೂರಿನ ವನ್ಯಜೀವಿ ಸಂರಕ್ಷಣಾಧಿಕಾರಿ ಬಿ ವಿ ಗುಂಡಪ್ಪ ಮಾತನಾಡಿ, ತುಮಕೂರಿನಲ್ಲಿ ಈ ಹಿಂದೆಯೂ ಹಲವಾರು ಹುಲಿಗಳು ಕಾಣಿಸಿಕೊಂಡಿವೆ. "ನಿವೃತ್ತ ಅರಣ್ಯಾಧಿಕಾರಿ ಡಾ.ಯು.ವಿ. ಸಿಂಗ್ ಅವರು ತುಮಕೂರಿನಲ್ಲಿ 1997 ರಲ್ಲಿ ಮೊದಲ ಬಾರಿಗೆ ಹುಲಿಗಳನ್ನು ಕಂಡರು. ನಂತರ ಗ್ರಾಮಸ್ಥರು, ಪ್ರಯಾಣಿಕರು ಮತ್ತು ಅರಣ್ಯಾಧಿಕಾರಿಗಳು ಹಲವಾರು ವೀಕ್ಷಣೆಗಳನ್ನು ಮಾಡಿದರು. ಆದರೆ ಹುಲಿ ಇರುವಿಕೆಯನ್ನು ಸಾಬೀತುಪಡಿಸಲು ಯಾವುದೇ ಫೋಟೋ ದಾಖಲೆಗಳಿಲ್ಲ. ಇದೀಗ ತುಮಕೂರಿನ ಮೀಸಲು ಅರಣ್ಯದ ಬಳಿ ಹುಲಿ ಸತ್ತು ಬಿದ್ದಿದ್ದು, ಈ ಹಿಂದೆ ತುಮಕೂರಿನಲ್ಲಿ ಹುಲಿಗಳಿದ್ದವು ಎಂಬುದಾಗಿ ಬ್ರಿಟಿಷರ ದಾಖಲೆಗಳಿದ್ದು, ವನ್ಯಜೀವಿಗಳನ್ನು ದಾಖಲಿಸಲು ತುಮಕೂರಿನ ಅರಣ್ಯ ಪ್ರದೇಶಗಳಿಗೂ ಕ್ಯಾಮೆರಾ ಟ್ರ್ಯಾಪಿಂಗ್ ಪ್ರಯೋಗವನ್ನು ವಿಸ್ತರಿಸಬೇಕು’’ ಎಂದರು.

ಈ ಹಿಂದೆ ಚಿರತೆ ಓಡಾಟದ ಮಾಹಿತಿ ಬಂದಿತ್ತು!
ಕಳೆದ ಒಂದು ವಾರದಿಂದ ಸುಮಾರು ನಾಲ್ಕು ವರ್ಷದ ಚಿರತೆ ಓಡಾಡುತ್ತಿದೆ ಎಂಬ ಮಾಹಿತಿ ಅರಣ್ಯ ಇಲಾಖೆಗೂ ಲಭ್ಯವಾಗಿತ್ತು. ಅಲ್ಲದೇ, ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗಳು ಕೂಡ ಪರಿಶೀಲನೆ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com