ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಯುವಕನಿಂದ ಆ್ಯಸಿಡ್ ದಾಳಿ
ಕನಕಪುರ ನಗರದ ಬೈಪಾಸ್ ರಸ್ತೆ ಬಳಿ ಶುಕ್ರವಾರ ಪ್ರೀತಿಯನ್ನು ನಿರಾಕರಿಸಿದಳೆಂದು ಕೋಪಗೊಂಡ ಯುವಕನೊಬ್ಬ 17 ವರ್ಷದ ವಿದ್ಯಾರ್ಥಿನಿಯ ಮುಖದ ಮೇಲೆ ಆ್ಯಸಿಡ್ ಎರಚಿರುವ ಘಟನೆ ನಡೆದಿದೆ.
Published: 18th February 2023 08:31 AM | Last Updated: 18th February 2023 06:23 PM | A+A A-

ಸಾಂದರ್ಭಿಕ ಚಿತ್ರ
ರಾಮನಗರ: ಕನಕಪುರ ನಗರದ ಬೈಪಾಸ್ ರಸ್ತೆ ಬಳಿ ಶುಕ್ರವಾರ ಪ್ರೀತಿಯನ್ನು ನಿರಾಕರಿಸಿದಳೆಂದು ಕೋಪಗೊಂಡ ಯುವಕನೊಬ್ಬ 17 ವರ್ಷದ ವಿದ್ಯಾರ್ಥಿನಿಯ ಮುಖದ ಮೇಲೆ ಆ್ಯಸಿಡ್ ಎರಚಿರುವ ಘಟನೆ ನಡೆದಿದೆ.
ಆ್ಯಸಿಡ್ ದಾಳಿಯಲ್ಲಿ ಅಪ್ರಾಪ್ತೆಯ ಕಣ್ಣಿಗೆ ಗಾಯಗಳಾಗಿದ್ದು, ಕೂಡಲೇ ಕನಕಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಕುರುಪೇಟೆಯಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ 22 ವರ್ಷ ವಯಸ್ಸಿನ ಆರೋಪಿ ಯುವಕ, ಮತ್ತು ವಿದ್ಯಾರ್ಥಿನಿ ನಡುವೆ ಕಳೆದ ಒಂದು ವರ್ಷದಿಂದಲೂ ಸಲುಗೆ ಇತ್ತು. ಸಾಮಾಜಿಕ ಮಾಧ್ಯಮದ ಮೂಲಕ ಇಬ್ಬರು ಪರಿಚಿತರಾಗಿದ್ದರು. ಈ ವೇಳೆ ಯುವಕ ತನ್ನನ್ನು ಪ್ರೀತಿಸುವಂತೆ ಕೇಳಿಕೊಂಡಿದ್ದಾನೆ. ಇದಕ್ಕೆ ನಿರಾಕರಿಸಿದ್ದ ಬಾಲಕಿ, ಇತ್ತೀಚೆಗಷ್ಟೇ ಮಾತನಾಡುವುದನ್ನು ನಿಲ್ಲಿಸಿದ್ದಳು.
ಈ ವಿಚಾರವಾಗಿ ಸಿಟ್ಟಿಗೆದ್ದಿದ್ದ ಯುವಕ, ಬಾಲಕಿಗೆ ಕರೆ ಮಾಡಿ ಮಾತನಾಡಲು ಬೈಪಾಸ್ ರಸ್ತೆಗೆ ಬರಬೇಕೆಂದು ಕೇಳಿದ್ದಾನೆ. ಅದರಂತೆ ಬಾಲಕಿ ತನ್ನ ತಮ್ಮನ ಜೊತೆ ತೆರಳಿ ಆತನನ್ನು ಭೇಟಿಯಾಗುತ್ತಾಳೆ. ಈ ವೇಳೆ ಯುವಕ ಆಕೆಯ ಮನವೊಲಿಸಲು ಯತ್ನಿಸಿದ್ದಾನೆ. ಆಗಲೂ ಆಕೆ ಒಪ್ಪದಿದ್ದಾಗ ಕಾರ್ ಎಂಜಿನ್ ಶುಚಿಗೊಳಿಸಲು ಬಳಸುತ್ತಿದ್ದ ಆ್ಯಸಿಡ್ ಅನ್ನು ಮುಖದ ಮೇಲೆ ಎರಚಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಕನಕಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.