ನಗರದಲ್ಲಿ ರಾರಾಜಿಸುತ್ತಿರುವ ಫ್ಲೆಕ್ಸ್'ಗಳು: ಹೈಕೋರ್ಟ್ ಆದೇಶ ಧಿಕ್ಕರಿಸುತ್ತಿರುವ ರೌಡಿ ಶೀಟರ್'ಗಳು!
ಫ್ಲೆಕ್ಸ್‌ಗಳು, ಬ್ಯಾನರ್‌ಗಳು ಮತ್ತು ಬಂಟಿಂಗ್ಸ್‌ಗಳ ವಿರುದ್ಧ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದ್ದು, ಈ ಆದೇಶವನ್ನು ರಾಜಕೀಯ ಮುಖಂಡರು ಧಿಕ್ಕರಿಸುತ್ತಿರುವ ಬೆಳವಣಿಗೆಗಳು ನಗರದಲ್ಲಿ ಕಂಡು ಬರುತ್ತಲೇ ಇವೆ. ಈ ನಡುವೆ ಹೊಸ ಬೆಳವಣಿಗೆ ಎಂಬಂತೆ ರೌಡಿ ಶೀಟರ್ ಗಳ ಪೋಸ್ಟರ್ ಗಳೂ ಕೂಡ ರಸ್ತೆಗಳಲ್ಲಿ ರಾರಾಜಿಸುತ್ತಿರುವುದು ಕಂಡು ಬಂದಿದೆ.
Published: 21st February 2023 10:23 AM | Last Updated: 21st February 2023 05:21 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಫ್ಲೆಕ್ಸ್‌ಗಳು, ಬ್ಯಾನರ್‌ಗಳು ಮತ್ತು ಬಂಟಿಂಗ್ಸ್‌ಗಳ ವಿರುದ್ಧ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದ್ದು, ಈ ಆದೇಶವನ್ನು ರಾಜಕೀಯ ಮುಖಂಡರು ಧಿಕ್ಕರಿಸುತ್ತಿರುವ ಬೆಳವಣಿಗೆಗಳು ನಗರದಲ್ಲಿ ಕಂಡು ಬರುತ್ತಲೇ ಇವೆ. ಈ ನಡುವೆ ಹೊಸ ಬೆಳವಣಿಗೆ ಎಂಬಂತೆ ರೌಡಿ ಶೀಟರ್ ಗಳ ಪೋಸ್ಟರ್ ಗಳೂ ಕೂಡ ರಸ್ತೆಗಳಲ್ಲಿ ರಾರಾಜಿಸುತ್ತಿರುವುದು ಕಂಡು ಬಂದಿದೆ.
ಮೈಸೂರು ರಸ್ತೆಯಲ್ಲಿ ‘ಸೈಲೆಂಟ್’ ಸುನೀಲ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯ ಕೋರಿರುವ ಪೋಸ್ಟರ್ ಗಳು ರಾರಾಜಿಸುತ್ತಿವೆ.
ಬ್ಯಾನರ್ ನಲ್ಲಿ ಸೈಲೆಂಟ್ ಸುನೀಲ ಕೇಸರಿ ಶಾಲು ಹಾಕಿದ್ದು, ಮಹಾಶಿವರಾತ್ರಿ ಹಬ್ಬದ ಶುಭಾಶಯಗಳನ್ನು ಹೇಳಿರುವುದು ಕಂಡು ಬಂದಿದೆ. ಜೊತೆಗೆ ಬ್ಯಾನರ್‌ನಲ್ಲಿ ಸಾವರ್ಕರ್ ಸೇರಿದಂತೆ ಇತರ ನಾಯಕರು ಕಂಡು ಬಂದಿದೆ,
ಈ ಬೆಳವಣಿಗೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಅವರನ್ನು ಪರಿಗಣಿಸುವಂತೆ ಆಡಳಿತಾರೂಢ ಬಿಜೆಪಿಯನ್ನು ಮೆಚ್ಚಿಸಲು ನಡೆಸಲಾಗಿರುವ ಪ್ರಯತ್ನಗಳೆಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ನಗರದಲ್ಲಿ ರಾರಾಜಿಸುತ್ತಿರುವ ಫ್ಲೆಕ್ಸ್‌ಗಳು: ಹೈಕೋರ್ಟ್ ಆದೇಶಕ್ಕೂ ಕಿಮ್ಮತ್ತು ನೀಡದ ರಾಜಕಾರಣಿಗಳು
ಪೋಸ್ಟರ್ ಹಾವಳಿ ಕುರಿತು ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ ಅವರು, ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು, ಫ್ಲೆಕ್ಸ್'ಗಳ ತೆಗೆದುಹಾಕುವ ಕೆಲಸಗಳನ್ನು ಮಾಡುತ್ತಿದ್ದಾರೆ. ಅಲ್ಲದೆ, ಬ್ಯಾನರ್ ಹಾಗೂ ಫ್ಲೆಕ್ಸ್ ಹಾಕಿರುವವರ ವಿರುದ್ಧ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ನಿವೃತ್ತ ಪೊಲೀಸ್ ಅಧೀಕ್ಷಕ ಎಸ್‌ಕೆ ಉಮೇಶ್ ಅವರು ಮಾತನಾಡಿ, ಸಮಸ್ಯೆ ಬಗ್ಗೆ ನನಗೆ ತಿಳಿದಿದೆ. ನಾಯಕರ ತಾಳಕ್ಕೆ ತಕ್ಕಂತೆ ಬಿಬಿಎಂಪಿ ಕುಣಿಯುತ್ತಿದೆ, ಕೆಲ ವರ್ಷಗಳ ಹಿಂದೆ ಹೈಕೋರ್ಟ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಾಗ ಒಂದೇ ಒಂದು ಬ್ಯಾನರ್ ಇರಲಿಲ್ಲ. ಈಗ ರಾಜಕಾರಣಿಗಳು ಬಿಡಿ ರೌಡಿಗಳು ಕೂಡ ಬ್ಯಾನರ್ ಹಾಕುತ್ತಿದ್ದಾರೆ. ಈ ಕುರಿತು ಯಾರಾದರೂ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ನಗರವನ್ನು ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳಿಂದ ಮುಚ್ಚುವುದನ್ನು ತಡೆಯಬೇಕು. ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಸ್ವಯಂಪ್ರೇರಿತ ಕ್ರಮವನ್ನೂ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.