ಪಿಯುಸಿ ಕಾಲೇಜುಗಳೇ ಇಲ್ಲದ ಊರುಗಳಿಗೂ ಪದವಿ ಕಾಲೇಜು ಮಂಜೂರು ಮಾಡಿದ್ದರು, ಅದನ್ನು ಸರಿಪಡಿಸುತ್ತಿದ್ದೇವೆ: ಸಿಎಂ ಬೊಮ್ಮಾಯಿ
ಯಾರದ್ದೋ ಒತ್ತಡಕ್ಕೆ ಮಣಿದು ಪದವಿ ಪೂರ್ವ(ಪಿಯು) ಕಾಲೇಜುಗಳೇ ಇಲ್ಲದ ಊರುಗಳಿಗೂ ಪದವಿ ಕಾಲೇಜು ಮಂಜೂರು ಮಾಡಿದ್ದರು. ಅದನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೋಮವಾರ ಹೇಳಿದರು.
Published: 21st February 2023 08:46 AM | Last Updated: 21st February 2023 05:16 PM | A+A A-

ಸಿಎಂ ಬೊಮ್ಮಾಯಿ
ಬೆಂಗಳೂರು: ಯಾರದ್ದೋ ಒತ್ತಡಕ್ಕೆ ಮಣಿದು ಪದವಿ ಪೂರ್ವ(ಪಿಯು) ಕಾಲೇಜುಗಳೇ ಇಲ್ಲದ ಊರುಗಳಿಗೂ ಪದವಿ ಕಾಲೇಜು ಮಂಜೂರು ಮಾಡಿದ್ದರು. ಅದನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೋಮವಾರ ಹೇಳಿದರು.
ವಿಧಾನಸಭೆಯಲ್ಲಿ ಕಾಲೇಜು ಮತ್ತು ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳ ಕುರಿತು ಚರ್ಚೆಯಲ್ಲಿ ಮುಖ್ಯಮಂತ್ರಿಗಳು ಈ ವಿಚಾರವನ್ನು ತಿಳಿಸಿದರು.
ಚರ್ಚೆ ವೇಳೆ ಕಾಂಗ್ರೆಸ್‌ನ ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ತಮ್ಮ ಕ್ಷೇತ್ರದಲ್ಲಿ ಪಿಯು ಕಾಲೇಜು ಇಲ್ಲ, ಆದರೆ ಪದವಿ ಕಾಲೇಜು ಇದೆ ಎಂದು ಹೇಳಿದರು.
ಕೋಟ್ಯಂತರ ರೂಪಾಯಿ ವೆಚ್ಚದ ಪದವಿ ಕಾಲೇಜಿಗೆ ಬೃಹತ್ ಕಟ್ಟಡವಿದೆ. ಆದರೆ, ಕ್ಷೇತ್ರದಲ್ಲಿ ಪಿಯುಸಿ ಕಾಲೇಜು ಇಲ್ಲ. ಪರಿಸ್ಥಿತಿ ಹೀಗಿರುವಾಗ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳನ್ನು ಹೇಗೆ ಸೇರ್ಪಡೆಗೊಳಿಸುವುದು ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ರಾಜಕೀಯ ಒತ್ತಡಕ್ಕೆ ಮಣಿದು ಪಿಯು ಕಾಲೇಜುಗಳಿಲ್ಲದೇ ಊರುಗಳಿಗೆ ಪದವಿ ಕಾಲೇಜು ಮಂಜೂರು ಮಾಡಿದ್ದರು. ನನ್ನ ಕ್ಷೇತ್ರದಲ್ಲೂ ಪಿಯು ಕಾಲೇಜು ಇರಲಿಲ್ಲ, ಡಿಗ್ರಿ ಕಾಲೇಜ್ ಇತ್ತು, ಈಗ ಪಿಯು ಕಾಲೇಜು ಆರಂಭಿಸಿದ್ದೇನೆ, ಹಲವೆಡೆ ಹೊಂದಾಣಿಕೆ ಇಲ್ಲದ ಕಾರಣ ಸೂಕ್ತ ಚಿಂತನೆ ನಡೆಸಿಲಾಗಿಲ್ಲ ಎಂದರು.
ಇದನ್ನೂ ಓದಿ: 'ಬಿಎಂಎಸ್ ವಿಶ್ವವಿದ್ಯಾಲಯ'ಕ್ಕೆ ಸಂಪುಟ ಸಮ್ಮತಿ
ಚರ್ಚೆ ವೇಳೆ ಹಲವು ಶಾಸಕರು ಪಕ್ಷಾತೀತವಾಗಿ ಕಾಲೇಜುಗಳಲ್ಲಿ ಮೂಲಸೌಕರ್ಯಗಳ ಕೊರತೆಯ ಬಗ್ಗೆ ದೂರಿದರು.
ಇದು ವಿದ್ಯಾರ್ಥಿಗಳ ದಾಖಲಾತಿ ಅನುಪಾತದಲ್ಲಿ ಕುಸಿತಕ್ಕೆ ಕಾರಣವಾಗುತ್ತದೆ. ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ನಂತರ ಪಿಯು ಕಾಲೇಜುಗಳಿಗೆ ದಾಖಲಾತಿ ಪ್ರಮಾಣ ಶೇ.25ರಷ್ಟಿದ್ದರೆ, ಪದವಿ ಕಾಲೇಜುಗಳಲ್ಲಿ ಶೇ.16ಕ್ಕೆ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಶೇ.6ಕ್ಕೆ ಇಳಿಕೆಯಾಗಿದೆ ಎಂದು ಬೊಮ್ಮಾಯಿ ಹೇಳಿದರು.
ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಿಸಲು ಪದವಿ ಕಾಲೇಜಿನವರೆಗೆ ಉಚಿತ ಶಿಕ್ಷಣ ನೀಡುವುದಾಗಿ ಘೋಷಣೆ ಮಾಡಿದ್ದೇನೆ, ಹಳೆಯ ಶಿಥಿಲಗೊಂಡಿರುವ ತರಗತಿ ಕೊಠಡಿಗಳ ದುರಸ್ತಿಗೆ ತಮ್ಮ ಸರ್ಕಾರ ಹೊಸ ತರಗತಿ ಕೊಠಡಿಗಳಿಗೆ ಹಣ ಮಂಜೂರು ಮಾಡಿದೆ ಎಂದು ಮಾಹಿತಿ ನೀಡಿದರು.