
ಸಿಎಂ ಬಸವರಾಜ ಬೊಮ್ಮಾಯಿ ಮತ್ತಿತರರು
ಬೆಂಗಳೂರು: ರಾಜಧಾನಿ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ನಿರ್ಮಿಸಿರುವ ನೂತನ ಬಸ್ ನಿಲ್ದಾಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಉದ್ಘಾಟಿಸಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಟಿಸಿ ಸುಮಾರು 63.17 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಸುಸಜ್ಜಿತ ನಿಲ್ದಾಣವನ್ನು ಮುಖ್ಯಮಂತ್ರಿ ಸಾರ್ವಜನಿಕರ ಸೇವೆಗೆ ಸಮರ್ಪಿಸಿದರು. ಸಚಿವರಾದ ಆರ್. ಅಶೋಕ್, ಮುನಿರತ್ನ, ಬೈರತಿ ಬಸವರಾಜ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮುಖ್ಯಮಂತ್ರಿ @BSBommai ಅವರು ಇಂದು ಬಿಎಂಟಿಸಿ ವತಿಯಿಂದ ನಿರ್ಮಿಸಿರುವ ಕಲಾಸಿಪಾಳ್ಯ ನೂತನ ಬಸ್ ನಿಲ್ದಾಣವನ್ನು ಉದ್ಘಾಟಿಸಿದರು.
ಸಚಿವರಾದ @RAshokaBJP ಹಾಗೂ @MunirathnaMLA, ಶಾಸಕ ಉದಯ್ ಗರುಡಾಚಾರ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಮೊದಲಾದವರು
ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. pic.twitter.com/DEr8uRep7L— CM of Karnataka (@CMofKarnataka) February 24, 2023
ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ಬಿಎಂಟಿಸಿ ನಗರದ ಜನರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದೆ. ಮುಂಬರುವ ದಿನಗಳಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಬಿಎಂಟಿಸಿ ಪ್ರಮುಖ ಪಾತ್ರ ವಹಿಸಲಿದ್ದು, ಬೆಂಗಳೂರಿನ ವಾಹನ ದಟ್ಟಣೆ ಕಡಿಮೆಯಾಗುತ್ತದೆ ಎಂದರು.
ಕೋವಿಡ್ ನಿಂದಾಗಿ ಹಾಗೂ ಕೆಲವು ವರ್ಷಗಳಿಂದ ಬಿಎಂಟಿಸಿ ದರಗಳನ್ನು ಹೆಚ್ಚಿಸದ ಕಾರಣ, ಬಿಎಂಟಿಸಿ ನಷ್ಟದಲ್ಲಿದೆ. ಕಳೆದ ಎರಡು ವರ್ಷಗಳಲ್ಲಿ ಸರ್ಕಾರ 2, 915 ಕೋಟಿ ರೂ.ಗಳನ್ನು ಸಂಸ್ಥೆಗೆ ನೀಡಿರುವುದರಿಂದ ಬಿಎಂಟಿಸಿ ಸಂಸ್ಥೆಗೆ ತನ್ನ ಸೇವೆಯನ್ನು ಸಲ್ಲಿಸಲು ಸಾಧ್ಯವಾಗಿದೆ. ಬಿಎಂಟಿಸಿಗೆ 3445 ಹೊಸ ಬಸ್ ಗಳನ್ನು ಒದಗಿಸಲಾಗುತ್ತಿದೆ ಎಂದರು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ಕೇಂದ್ರ ಸರ್ಕಾರದ ಸಹಯೋಗದಲ್ಲಿ 1,300 ಎಲೆಕ್ಟ್ರಿಕ್ ಬಸ್‌ಗಳನ್ನು ನೀಡಲಾಗುವುದು. ಪರಿಸರ ನಾಶ ತಡೆಯಲು ಈ ಬಸ್‌ಗಳ ಅಗತ್ಯವಿದೆ ಎಂದು ಬೊಮ್ಮಾಯಿ ಹೇಳಿದರು.