'ಬೀದಿ ನಾಯಿಗಳ ಕೊಲ್ಲದೆ ಬೇರೆ ದಾರಿಯಿಲ್ಲ' ಹೇಳಿಕೆ: ಕ್ಷಮೆಯಾಚಿಸುವಂತೆ ಪ್ರತಾಪ್ ಸಿಂಹಗೆ ಪ್ರಾಣಿ ಕಲ್ಯಾಣ ಮಂಡಳಿ ಸೂಚನೆ

ಬೀದಿ ನಾಯಿಗಳ ಕೊಲ್ಲದೆ ಬೇರೆ ದಾರಿಯಿಲ್ಲ ಹೇಳಿಕೆ ಕುರಿತು ಕ್ಷಮೆಯಾಚಿಸಬೇಕೆಂದು ಸಂಸದ ಪ್ರತಾಪ್ ಸಿಂಹ ಅವರಿಗೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸೂಚನೆ ನೀಡಿದೆ.
ಪ್ರತಾಪ್ ಸಿಂಹ
ಪ್ರತಾಪ್ ಸಿಂಹ

ಬೆಂಗಳೂರು: ಬೀದಿ ನಾಯಿಗಳ ಕೊಲ್ಲದೆ ಬೇರೆ ದಾರಿಯಿಲ್ಲ ಹೇಳಿಕೆ ಕುರಿತು ಕ್ಷಮೆಯಾಚಿಸಬೇಕೆಂದು ಸಂಸದ ಪ್ರತಾಪ್ ಸಿಂಹ ಅವರಿಗೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸೂಚನೆ ನೀಡಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಪಾರಸ್ ಜೈನ್ ಅವರು, ಸಂಸದರು ಕೂಡಲೇ ತಮ್ಮ ಹೇಳಿಕೆ ಕುರಿತು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ, ಪ್ರತಾಪ್ ಸಿಂಹ ಅವರ ಸದಸ್ಯತ್ವ ಅಸಿಂಧುಗೊಳಿಸುವಂತೆ ಲೋಕಸಭಾ ಸ್ಪೀಕರ್‌ಗೆ ಮನವಿ ಸಲ್ಲಿಸಿ, ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಬೀದಿ ನಾಯಿಗಳನ್ನು ಕೊಲ್ಲುವ ಕುರಿತು ಪ್ರತಾಪ್ ಸಿಂಹ ಅವರು ಗೊತ್ತಿದ್ದೂ ನೀಡಿರುವ ಹೇಳಿಕೆ ಸುಪ್ರೀಂಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ. ಈ ಹೇಳಿಕೆ ದೇಶದ ಸಾಂವಿಧಾನಿಕ ಕಾನೂನು ಮತ್ತು ಸಂಸತ್ತಿನ ಸದಸ್ಯರಾಗಿ ಪ್ರಮಾಣ ವಚನಕ್ಕೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.

ಮೂರು ದಿನಗಳಲ್ಲಿ ಸಂಸದರು ತಮ್ಮ ಹೇಳಿಕೆಯನ್ನು ಹಿಂಪಡೆಯದಿದ್ದರೆ, ಅವರ ಲೋಕಸಭಾ ಸದಸ್ಯತ್ವವನ್ನು ಅಸಿಂಧುಗೊಳಿಸಲು ನಾವು ಸ್ಪೀಕರ್‌ಗೆ ಶಿಫಾರಸು ಮಾಡುತ್ತೇವೆಂದು ಹೇಳಿದ್ದಾರೆ.

ಸಂಸದರ ಹೇಳಿಕೆ ಖಂಡನೀಯ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಬೀದಿನಾಯಿಗಳ ಸಂಖ್ಯೆ ಹೆಚ್ಚಳಕ್ಕೆ ಸಾಮೂಹಿಕ ಹತ್ಯೆ ಪರಿಹಾರವಲ್ಲ ಎಂದು ಹೇಳಿದೆ. ಸಂಸದರಾಗಿರುವ ಅವರು ಸಮಂಜಸವಾದ ಹೇಳಿಕೆಗಳನ್ನು ನೀಡಬೇಕು. ಹೇಳಿಕೆ ಸಂಬಂಧ ಪ್ರತಾಪ್ ಸಿಂಹ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನ ನಡೆಸಿದೆ. ಆದರೆ, ಅವರು ಉತ್ತರಿಸುತ್ತಿಲ್ಲ. ಸಂದೇಶಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದಿದ್ದಾರೆ.

ಏತನ್ಮಧ್ಯೆ, ಪ್ರಾಣಿ ಹಕ್ಕುಗಳ ಹೋರಾಟಗಾರರಾದ ಅರುಣ್ ಪ್ರಸಾದ್, ನವೀನ ಕಾಮತ್ ಮತ್ತು ಇತರರು ಬುಧವಾರ ಪತ್ರಿಕಾಗೋಷ್ಠಿ ನಡೆಸಲು ಮುಂದಾಗಿದ್ದಾರೆಂದು ತಿಳಿದುಬಂದಿದೆ. ಪತ್ರಿಕಾಗೋಷ್ಠಿಯಲ್ಲಿ ಸಂಸದರಿಂದ ಬೇಷರತ್ ಕ್ಷಮೆಯಾಚಿಸುವಂತೆ ಆಗ್ರಹಿಸಬೇಕೆಂದು ಚಿಂತನೆ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ.

ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಶಿವನ ಅವತಾರವಾದ ದತ್ತಾತ್ರೇಯರಿಂದ... ಧರ್ಮರಾಯ, ಶಿರಡಿ ಸಾಯಿಬಾಬಾ ಹಾಗೂ ಶ್ರೀಕೃಷ್ಣ ಕೂಡ ನಾಯಿ ಸಾಕಿದ್ದಾರೆ. ಹೀಗಾಗಿ ಇಂತಹ ಹೇಳಿಕೆ ನೀಡಿ ಧಾರ್ಮಿಕ ಭಾವನೆಗಳಿಗೂ ಧಕ್ಕೆ ತಂದಿದ್ದಾರೆ. ಅವರ ಹೇಳಿಕೆಯನ್ನು ವಾಪಸ್ ಪಡೆದು ಬೇಷರತ್ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರಸಾದ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com