ಯುವತಿಗೆ ಚೂರಿ ಇರಿದು ತಾನೂ ಇರಿದುಕೊಂಡಿದ್ದ ಭಗ್ನ ಪ್ರೇಮಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ: ಪೊಲೀಸರು

ಬೆಂಗಳೂರಿನ ರಾಜಾನುಕುಂಟೆಯಲ್ಲಿರುವ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಯುವತಿಗೆ ಚೂರಿ ಇರಿದು, ತಾನೂ ಕೂಡ ಚೂರಿ ಇರಿದುಕೊಂಡಿದ್ದ ವಿದ್ಯಾರ್ಥಿಯ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹತ್ಯೆಯಾದ ಯುವತಿ ಹಾಗೂ ಕಲ್ಯಾಣ್.
ಹತ್ಯೆಯಾದ ಯುವತಿ ಹಾಗೂ ಕಲ್ಯಾಣ್.

ಬೆಂಗಳೂರು: ಬೆಂಗಳೂರಿನ ರಾಜಾನುಕುಂಟೆಯಲ್ಲಿರುವ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಯುವತಿಗೆ ಚೂರಿ ಇರಿದು, ತಾನೂ ಕೂಡ ಚೂರಿ ಇರಿದುಕೊಂಡಿದ್ದ ವಿದ್ಯಾರ್ಥಿಯ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಜಾನುಕುಂಟೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿಟೆಕ್ ಮಾಡುತ್ತಿದ್ದ 19 ವರ್ಷದ ಲಯಸ್ಮಿತಾ ಎಂಬ ವಿದ್ಯಾರ್ಥಿನಿಗೆ ಕಲ್ಯಾಣ್ ಚಾಕುವಿನಿಂದ ಇರಿದಿದ್ದ. ಯುವತಿಯ ಎದೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದ. ಬಳಿಕ ತನಗೂ ಚಾಕುವಿನಿಂದ ಇರಿದುಕೊಂಡಿದ್ದ.

ನಂತರ ಗಂಭೀರವಾಗಿ ಗಾಯಗೊಂಡಿದ್ದ ಆರೋಪಿಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯುವಕನಿಗೆ ಇರಿತದ ಗಾಯವು ಆಳವಾಗಿಲ್ಲ. ಇದೀಗ ಆತ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ. ಆದರೆ, ಆತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕ ಚೇತರಿಸಿಕೊಳ್ಳಲು ನಾವು ಕಾಯುತ್ತಿದ್ದೇವೆ. ಚೇತರಿಸಿಕೊಂಡ ಬಳಿಕ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತದೆ. ನಂತರ ಬಂಧನದ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ ಎಂದಿದ್ದಾರೆ.

ಏತನ್ಮಧ್ಯೆ, ಸಂತ್ರಸ್ತೆಯ ಪೋಷಕರ ದೂರಿನ ಮೇರೆಗೆ ಪೊಲೀಸರು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರ ವಿರುದ್ಧ ನಿರ್ಲಕ್ಷ್ಯದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಮೃತ ವಿದ್ಯಾರ್ಥಿನಿ ಲಯಸ್ಮಿತಾ ಮತ್ತು ಆರೋಪಿ ಕಲ್ಯಾಣ್ ಸಂಬಂಧಿಕರಾಗಿದ್ದು, ಪರಸ್ಪರ ಸಂಪರ್ಕದಲ್ಲಿದ್ದರು. ಲಯಸ್ಮಿತಾಗೆ ಕಲ್ಯಾಣ್ ತನ್ನ ಪ್ರೇಮ ನಿವೇದನೆಯನ್ನು ಮುಂದಿಟ್ಟಿದ್ದು, ಇದಕ್ಕೆ ಆಕೆ ನಿರಾಕರಿಸಿದ್ದಳು. ಇದರಿಂದ ಕುಪಿತನಾಗಿದ್ದ ಕಲ್ಯಾಣ್ ಆಕೆಗೆ ಚೂರಿ ಇರಿದು ಹತ್ಯೆ ಮಾಡಿದ್ದಾನೆಂದು ಪೊಲೀಸರು ಖಚಿತಪಡಿಸಿದ್ದಾರೆ.

ವಿದ್ಯಾರ್ಥಿನಿಗೆ ಆರೋಪಿ 5 ಬಾರಿ ಇರಿದಿದ್ದು, ಎದೆಯ ಭಾಗಕ್ಕೆ ಹಲವು ಬಾರಿ ಇರಿದ ಕಾರಣ ವಿದ್ಯಾರ್ಥಿನಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com