
ಸಾಂದರ್ಭಿಕ ಚಿತ್ರ
ಮೈಸೂರು: ಬೆಳ್ಳಂಬೆಳಗ್ಗೆ ಮೈಸೂರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಸುಮಾರು 10 ಮಂದಿಗೆ ಗಾಯವಾದ ಘಟನೆ ನಡೆದಿದೆ.
ಬುಧವಾರ ಮೈಸೂರಿನ ಬನ್ನಿಮಂಟಪದ ಅಗ್ನಿಶಾಮಕ ವಸತಿ ಗೃಹದಲ್ಲಿ ಈ ಘಟನೆ ನಡೆದಿದೆ. ವಸತಿಗೃಹದ ಮನೆಯೊಂದರಲ್ಲಿ ಗ್ಯಾಸ್ ಲೀಕೇಜ್ ಆಗಿದ್ದು, ಬೆಳಗ್ಗೆ ಎದ್ದು ಹಾಲು ಕಾಯಿಸಲು ಬೆಂಕಿ ಹಚ್ಚುವ ವೇಳೆ ಸಿಲಿಂಡರ್ ಸ್ಫೋಟಗೊಂಡಿದೆ. ಈ ವೇಳೆ ಅಕ್ಕಪಕ್ಕದ ಮನೆಯವರಿಗೂ ಬೆಂಕಿ ತಗುಲಿದೆ.
ಘಟನೆಯಲ್ಲಿ ಒಂದೇ ಮನೆಯ ನಾಲ್ವರು ಹಾಗೂ ಅಕ್ಕಪಕ್ಕದ 6 ಮಂದಿಗೆ ಗಾಯಗಳಾಗಿದೆ. 6 ಮಂದಿ ಗಾಯಳು ಪೈಕಿ ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ದೇಹದ ಕೆಲ ಭಾಗ ಸುಟ್ಟುಹೋಗಿದೆ.
ಗಾಯಾಳುಗಳನ್ನು ಸಮೀಪದ ಸೆಂಟ್ ಜೋಸೆಫ್ ಆಸ್ಪತ್ರೆಗೆ ದಾಖಲು ಮಾಡಿದ್ದು, ನಾಲ್ವರ ಸ್ಥಿತಿ ಸ್ವಲ್ಪ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮೈಸೂರಿನ ಎನ್ ಆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದು ಪ್ರಕರಣ ದಾಖಲಾಗಿದೆ.
ಸಿಲಿಂಡರ್ ಸ್ಫೋಟಗೊಂಡ ಮನೆಯ ವಸ್ತುಗಳೆಲ್ಲ ಸುಟ್ಟು ಕರಕಲಾಗಿ ಹೋಗಿವೆ. ಅಡುಗೆ ಮನೆಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸ್ಫೋಟದ ತೀವ್ರತೆಗೆ ಗೋಡೆಗಳು ಬಿರುಕುಬಿಟ್ಟಿವೆ. ಕಿಟಕಿ ಗ್ರಿಲ್‌ಗಳು ಕೂಡಾ ಸುಟ್ಟು ಹೋಗಿವೆ. ಅಕ್ಕಪಕ್ಕದ ಮನೆಗಳಲ್ಲೂ ಅನಾಹುತ ನಡೆದಿದೆ.