ರಾಜ್ಯದಲ್ಲಿ 28,000 ದೇವಸ್ಥಾನಗಳು ಅತಿಕ್ರಮಣ ಮುಕ್ತವಾಗಲು ಸರ್ಕಾರದ ಸಹಾಯಕ್ಕಾಗಿ ಕಾಯುತ್ತಿವೆ!

ರಾಜ್ಯದ ಅಧಿಕಾರದ ಗದ್ದುಗೆ ವಿಧಾನಸೌಧದ ಗೋಡೆ ಮೇಲೆ ‘ಸರ್ಕಾರಿ ಕೆಲಸ ದೇವರ ಕೆಲಸ’ ಎಂದು ಕೆತ್ತಲಾಗಿದೆ. ಆದರೆ ದೇವರ ಕೆಲಸ ಕೈಗೆತ್ತಿಕೊಳ್ಳಲು ಸಿಬ್ಬಂದಿ ನಿಯೋಜಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ ಅಧಿಕಾರದ ಗದ್ದುಗೆ ವಿಧಾನಸೌಧದ ಗೋಡೆ ಮೇಲೆ ‘ಸರ್ಕಾರಿ ಕೆಲಸ ದೇವರ ಕೆಲಸ’ ಎಂದು ಕೆತ್ತಲಾಗಿದೆ. ಆದರೆ ದೇವರ ಕೆಲಸ ಕೈಗೆತ್ತಿಕೊಳ್ಳಲು ಸಿಬ್ಬಂದಿ ನಿಯೋಜಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಸಾವಿರಾರು ದೇವಸ್ಥಾನಗಳನ್ನು ಒತ್ತುವರಿ ಮಾಡಲಾಗಿದ್ದು, ಅವುಗಳನ್ನು ರಕ್ಷಿಸಲು ಸರ್ಕಾರಕ್ಕೆ ಕಷ್ಟವಾಗುತ್ತಿದೆ. ಕಾರಣ, ರಾಜ್ಯ ಮುಜರಾಯಿ ಇಲಾಖೆಯು ಭೂಮಾಪಕರ ಕೊರತೆ ಎದುರಿಸುತ್ತಿದ್ದು, ಇದು ಸರ್ವೆ ಕಾರ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮುಜರಾಯಿ ಇಲಾಖೆಯ ಅಡಿಯಲ್ಲಿ 34,559 ದೇವಾಲಯಗಳಿವೆ.

“ನವೆಂಬರ್ 30, 2022 ರವರೆಗೆ, ಕೇವಲ 5,720 ದೇವಾಲಯಗಳ ಆಸ್ತಿಗಳ ಸರ್ವೆ ಕಾರ್ಯ ಪೂರ್ಣಗೊಂಡಿದೆ ಮತ್ತು 302 ಎಕರೆ ಭೂಮಿ ಒತ್ತುವರಿ ಮಾಡಿರುವುದು ಕಂಡುಬಂದಿದೆ. ಇನ್ನೂ 28,000 ದೇವಸ್ಥಾನಗಳಿದ್ದು, ಅಲ್ಲಿ ಸರ್ವೇ ಕಾರ್ಯವೂ ಆರಂಭವಾಗಿಲ್ಲ. ಎಷ್ಟು ಒತ್ತುವರಿಯಾಗಿದೆ ಎಂಬುದು ನಮಗೆ ತಿಳಿದಿಲ್ಲ, ಆದರೆ ದೊಡ್ಡ ಪ್ರಮಾಣದಲ್ಲಿ ಒತ್ತುವರಿ ಮಾಡಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ದೇವಾಲಯಗಳಲ್ಲಿ 205 ಎ ವರ್ಗ(ವಾರ್ಷಿಕ ಆದಾಯ 25 ಲಕ್ಷಕ್ಕಿಂತ ಮೇಲ್ಪಟ್ಟು), 193 ವರ್ಗ ಬಿ (5 ರಿಂದ 25 ಲಕ್ಷ ರೂ.ವರೆಗಿನ ವಾರ್ಷಿಕ ಆದಾಯ) ಮತ್ತು ಉಳಿದವು ಸಿ ವರ್ಗದ ದೇವಾಲಯಗಳು(ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಕಡಿಮೆ). ಸರ್ಕಾರಿ ಸ್ವಾಮ್ಯದ ದೇವಸ್ಥಾನಗಳಿಗೆ ಸೇರಿದ ಆಸ್ತಿಗಳಲ್ಲಿ ಅತಿಕ್ರಮಣ ನಡೆದಿರುವುದನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ.

ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡಿ, ಸಮೀಕ್ಷೆಯನ್ನು ನಡೆಸುವ ಮೂಲಕ ದೇವಾಲಯಗಳ ಆಸ್ತಿಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ರಕ್ಷಿಸಲು ಹಾಗೂ ಅತಿಕ್ರಮಣ ತೆರವು ಕಾರ್ಯಾಚರಣೆ ಕೈಗೊಳ್ಳಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈ ಸಂಬಂಧ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com