ಗಣರಾಜ್ಯೋತ್ಸವ 2023: ರಾಜ್ಯದ ಸ್ತಬ್ಧಚಿತ್ರಕ್ಕೆ ಅನುಮತಿಯಿಲ್ಲ!

ಹಾಲಿ ವರ್ಷದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಈ ಬಾರಿ ರಾಜ್ಯದ ಸ್ತಬ್ದಚಿತ್ರ ಇರುವುದಿಲ್ಲ ಎನ್ನಲಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹಾಲಿ ವರ್ಷದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಈ ಬಾರಿ ರಾಜ್ಯದ ಸ್ತಬ್ದಚಿತ್ರ ಇರುವುದಿಲ್ಲ ಎನ್ನಲಾಗಿದೆ. 

ಹೌದು.. ರಾಜಧಾನಿ ದೆಹಲಿಯಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸಂಸ್ಕೃತಿ, ಕಲೆ, ಬಿಂಬಿಸುವ ಸ್ತಬ್ಧ ಚಿತ್ರಗಳು ಪ್ರಮುಖ ಆಕರ್ಷಣೆಯಾಗಿದ್ದವು. ಈ ಬಾರಿ ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿರುವುದು ವಿವಾದಕ್ಕೆಡೆ ಮಾಡಿಕೊಟ್ಟಿದ್ದು, ಕೇಂದ್ರದ ಈ ತೀರ್ಮಾನದ ವಿರುದ್ಧ ಪ್ರತಿಪಕ್ಷಗಳು ಕಿಡಿಕಾರಿದ್ದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕದ ಸ್ತಬ್ದ ಚಿತ್ರಕ್ಕೆ ಅನುಮತಿ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಅಧಿಕಾರದಲ್ಲಿದ್ದರೂ ಈ ಬಾರಿ ರಾಜ್ಯದ ಸ್ತಬ್ಧ ಚಿತ್ರಕ್ಕೆ ಅವಕಾಶ ಕೈ ತಪ್ಪಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.ಬೇರೆ ರಾಜ್ಯಗಳಿಗೆ ಅವಕಾಶ ಕಲ್ಪಿಸಲು ಈ ಬಾರಿ ರಾಜ್ಯದ ಸ್ತಬ್ಧ ಚಿತ್ರಕ್ಕೆ ಅನುಮತಿ ನಿರಾಕರಿಸಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆಯಾದರೂ ಇದು ವ್ಯಾಪಕ ಟೀಕೆಗೆ ಎಡೆಮಾಡಿಕೊಟ್ಟಿದೆ.

ಏನಿದು ವಿವಾದ?
ಕಳೆದ 13 ವರ್ಷಗಳಿಂದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಇರುತ್ತಿತ್ತು. ಹಲವು ಬಾರಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಪ್ರಥಮ, ದ್ವಿತೀಯ ಬಹುಮಾನಗಳು ಬಂದಿದೆ. ಆದರೆ, ಈ ಬಾರಿ ಕರ್ನಾಟಕ ಸ್ಥಬ್ದಚಿತ್ರ ಭಾಗಿಯಾಗಲ್ಲ. ದೇಶದ ಬೇರೆ ಬೇರೆ ರಾಜ್ಯಗಳಿಗೂ ಪರೇಡ್‌ನಲ್ಲಿ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲು ಅವಕಾಶ ಕೊಡಬೇಕು ಎಂಬ ಕಾರಣಕ್ಕೆ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಕೇಂದ್ರ ಅನುಮತಿ ನೀಡಿಲ್ಲ ಎನ್ನಲಾಗಿದೆ. 

ರಾಜ್ಯದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರತಿವರ್ಷ ವಿಶಿಷ್ಠ ಮತ್ತು ಆಕರ್ಷಕ ಥೀಮ್‌ನೊಂದಿಗೆ ಸ್ತಬ್ಧಚಿತ್ರವನ್ನು ಸಿದ್ಧಗೊಳಿಸಿ ಪರೇಡ್‌ನಲ್ಲಿ ಭಾಗಿಯಾಗುತ್ತಿತ್ತು. ಈ ಬಾರಿ ಮಹಿಳಾ ಸಬಲೀಕರಣ ಥೀಮ್ ಇಟ್ಟುಕೊಂಡು ಸ್ತಬ್ಧಚಿತ್ರ ಸಿದ್ಧಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ.ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ತಮಿಳುನಾಡು, ಕೇರಳ ಸೇರಿದಂತೆ 13 ರಾಜ್ಯಗಳ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಕಳೆದ ಬಾರಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಕುರಿತ ಸ್ತಬ್ಧ ಚಿತ್ರಕ್ಕೆ ದ್ವಿತೀಯ ಸ್ಥಾನ ಲಭಿಸಿತ್ತು. ಆದರೆ ಈ ಬಾರಿ ಅವಕಾಶ ದೊರೆಯದಿರುವುದು ರಾಜ್ಯದ ಜನತೆಗೆ ಬೇಸರ ಉಂಟು ಮಾಡಿದೆ.

ಅವಕಾಶ ಪಡೆಯಲು ಪ್ರಯತ್ನ: ಸಿಎಂ ಬೊಮ್ಮಾಯಿ
ದೆಹಲಿಯ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಕರ್ನಾಟಕ ಸ್ತಬ್ದಚಿತ್ರಕ್ಕೆ ಅವಕಾಶ ಪಡೆಯಲು ಪ್ರಯತ್ನ ನಡೆಸಿದ್ದೇನೆ. ಅವಕಾಶ ಸಿಗಲಿದೆ ಎಂಬ ವಿಶ್ವಾಸ ತಮಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಸ್ತಬ್ದಚಿತ್ರವನ್ನು ತಿರಸ್ಕರಿಸಿಲ್ಲ. ಬೇರೆ ರಾಜ್ಯಗಳಿಗೆ ಅವಕಾಶ ಕೊಡಬೇಕು ಎಂಬ ಕಾರಣಕ್ಕೆ ಈ ಬಾರಿ ರಾಜ್ಯಕ್ಕೆ ಅವಕಾಶ ಸಿಕ್ಕಿಲ್ಲ. ಆದರೂ ನಾವು ಪ್ರಯತ್ನ ನಡೆಸಿದ್ದೇವೆ. ಕರ್ನಾಟಕದ ಸ್ಥಬ್ದಚಿತ್ರ ಈ ಬಾರಿಯೂ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಇರಲಿದೆ ಎಂದರು. ಸ್ತಬ್ದಚಿತ್ರಕ್ಕೆ ಒಪ್ಪಿಗೆ ಪಡೆಯಲು ಇನ್ನೂ ಅವಕಾಶವಿದೆ. ಯಾವುದೂ ಮುಗಿದಿಲ್ಲ, ಕೇಂದ್ರ ರಾಜ್ಯದ ಸ್ಥಬ್ದಚಿತ್ರಕ್ಕೆ ಅನುಮತಿ ನೀಡಲಿದೆ ಎಂದ ಅವರು, ಕಳೆದ ಬಾರಿ ಕರ್ನಾಟಕ ರಾಜ್ಯ ತನ್ನ ಸ್ತಬ್ದಚಿತ್ರಕ್ಕೆ ದ್ವಿತೀಯ ಬಹುಮಾನ ಪಡೆದಿತ್ತು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com