ಕನ್ನಡ ಸಂಶೋಧನೆಗೆ ಮಾರ್ಗದರ್ಶನ ನೀಡಲು ಉನ್ನತ ಮಟ್ಟದ ಸಮಿತಿ: ಸಿಎಂ ಬೊಮ್ಮಾಯಿ
ಗಡಿನಾಡಿನ ಜನರ ಶಿಕ್ಷಣ, ಆರೋಗ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ 100 ಕೋಟಿ ರೂಪಾಯಿ ಒದಗಿಸಲಿದ್ದು, ಕನ್ನಡದ ಶಾಸ್ತ್ರೀಯ ಭಾಷೆ ಸ್ಥಾನಮಾನದ ಸಂಶೋಧನಾ ಕಾರ್ಯಗಳಿಗೆ ಉನ್ನತ ಮಟ್ಟದಲ್ಲಿ ಸಾಹಿತಿಗಳ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ಹೇಳಿದರು.
Published: 09th January 2023 10:46 AM | Last Updated: 09th January 2023 01:48 PM | A+A A-

ಸಿಎಂ ಬೊಮ್ಮಾಯಿ
ಹಾವೇರಿ: ಗಡಿನಾಡಿನ ಜನರ ಶಿಕ್ಷಣ, ಆರೋಗ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ 100 ಕೋಟಿ ರೂಪಾಯಿ ಒದಗಿಸಲಿದ್ದು, ಕನ್ನಡದ ಶಾಸ್ತ್ರೀಯ ಭಾಷೆ ಸ್ಥಾನಮಾನದ ಸಂಶೋಧನಾ ಕಾರ್ಯಗಳಿಗೆ ಉನ್ನತ ಮಟ್ಟದಲ್ಲಿ ಸಾಹಿತಿಗಳ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ಹೇಳಿದರು.
86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಗಡಿನಾಡಿನ ಶಿಕ್ಷಣ, ಆರೋಗ್ಯ ಮತ್ತು ಸೌಕರ್ಯಗಳ ಅಭಿವೃದ್ಧಿಗೆ ಈಗಾಗಲೆ 25 ಕೋಟಿ ರೂ. ಅನುದಾನ ಒದಗಿಸಿದ್ದು, ಈ ವರ್ಷ ಇನ್ನೂ 100 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಕನ್ನಡ ನಾಡಿನ ಅಭಿವೃದ್ಧಿಗೆ ಪೂರಕವಾಗಿರುವ ಎಲ್ಲಾ ಅಂಶಗಳ ಅನುಷ್ಠಾನಕ್ಕೆ ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ
ಶಾಸ್ತ್ರೀಯ ಭಾಷೆ ಕುರಿತ ಸಂಶೋಧನೆ, ಗ್ರಂಥಾಲಯ, ಚರ್ಚೆಗಳಿಗೆ ಮಾರ್ಗದರ್ಶನ ಮಾಡಲು ಸಮ್ಮೇಳನಾಧ್ಯಕ್ಷರ ಮಾರ್ಗದರ್ಶನದಲ್ಲಿ ನಾಡಿನ ಹಿರಿಯ ಸಾಹಿತಿಗಳ ಸಮಿತಿ ರಚಿಸಲಾಗುವುದು. ಸಮಿತಿ ಸೂಚಿಸುವ ಕಾರ್ಯಗಳಿಗೆ ಎಷ್ಟು ಅನುದಾನ ಬೇಕಾದರೂ ಸರ್ಕಾರ ಒದಗಿಸಲಿದೆ. ಹಾವೇರಿ ಜಿಲ್ಲಾ ಕಸಾಪ ಭವನ ನಿರ್ಮಾಣಕ್ಕೆ 3 ಕೋಟಿ ರೂ.ಒದಗಿಸಲಾಗುವುದು. ಕರ್ನಾಟಕ ಜಾನಪದ ವಿವಿ ಸಹಯೋಗದಲ್ಲಿ ಅಲ್ಲೊಂದು ಗುಣಮಟ್ಟದ ಸಂಶೋಧನಾ ಕೇಂದ್ರವನ್ನು ಕಸಾಪ ರೂಪಿಸಬೇಕು ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಮಾತನಾಡಿದ್ದ ಹಿರಿಯ ಕವಿ ಪ್ರೊ.ದೊಡ್ಡರಂಗೇಗೌಡ ಅವರು ಕೆಲ ಬೇಸರದ ನುಡಿಗಳನ್ನು ಹೊರಹಾಕಿದ್ದರು.
ಪ್ರಜಾಪ್ರಭುತ್ವದ ಮೌಲ್ಯಗಳು ದಿನೇದಿನೇ ಅರ್ಥವನ್ನು ಕಳೆದುಕೊಳ್ಳುತ್ತಿವೆ. ದುಡ್ಡು ಕೊಟ್ಟು ಅಧಿಕಾರ ಹಿಡಿಯುತ್ತಿರುವವರಿಗೆ ದುಡ್ಡು ಎಲ್ಲಿಂದ ಬಂತು ಎಂದು ಪ್ರಶ್ನಿಸುವವರಿಲ್ಲ. ಈ ಬೆಳವಣಿಗೆ ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತಂದೊಡ್ಡಿದೆ. ಭ್ರಷ್ಟತೆಯೇ ವ್ಯವಸ್ಥೆಯಾಗುತ್ತಿರುವಾಗ ಮೌಲ್ಯಗಳನ್ನು ನಿರೀಕ್ಷಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: ಹಾವೇರಿಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯ 'ಜನ ಸಾಹಿತ್ಯ ಸಮ್ಮೇಳನ' ಬೆಂಗಳೂರಿನಲ್ಲಿ ಆಯೋಜನೆ
ಈ ಟೀಕೆಗಳನ್ನು ಆಲಿಸಿದ ಮುಖ್ಯಮಂತ್ರಿಗಳು, ಈ ಟೀಕೆಗಳನ್ನು ಸ್ಪೂರ್ತಿಯಾಗಿ ತೆಗೆದುಕೊಂಡಿದ್ದೇನೆ. ಭಾಷೆಯ ಅಭಿವೃದ್ಧಿಗೆ ಮೂಲಸೌಕರ್ಯಕ್ಕಾಗಿ ಕೇಂದ್ರ ಸರ್ಕಾರವು 13.30 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಆದರೆ, ಕನ್ನಡಕ್ಕೆ ಯಾವುದೇ ಅನುದಾನ ಬಂದಿಲ್ಲ ಎಂದು ಹೇಳುತ್ತಿರುವುದು ಅನ್ಯಾಯ ಎಂದು ಹೇಳಿದರು.
ಶಾಸ್ತ್ರೀಯ ಭಾಷಾ ಸಂಶೋಧನಾ ಕೇಂದ್ರ ಸ್ಥಾಪಿಸಲು ಮೈಸೂರು ವಿಶ್ವವಿದ್ಯಾನಿಲಯ ನೀಡಿದ ಕಟ್ಟಡವನ್ನು ನವೀಕರಿಸಲಾಗುತ್ತಿದೆ. ನೆಲ, ಜಲ, ಭಾಷೆ ರಕ್ಷಣೆಗೆ ರಾಜ್ಯದಲ್ಲಿ ಪಕ್ಷಗಳು ಒಗ್ಗಟ್ಟಿನಿಂದ ಹೋರಾಟ ನಡೆಸಿವೆ. ಇದು ನಮ್ಮ ಹಿರಿಯರು ಹೇಳಿಕೊಟ್ಟ ಸಂಪ್ರದಾಯ. ಕನ್ನಡಕ್ಕೆ ಉಜ್ವಲ ಭವಿಷ್ಯವಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ನೆಲೆಸಿರುವ ಇತರ ರಾಜ್ಯಗಳ ಜನರಿಗೆ ಕನ್ನಡ ಕಲಿಸಲು ಕೋರ್ಸ್'ಗಳ ರೂಪಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದರು.