ಮೌಲ್ಯಯುತ ಜೀವನಕ್ಕೆ ಅಡಿಪಾಯ: ಶಾಲೆಯಲ್ಲಿ ಮಕ್ಕಳಿಗೆ ಧಾರ್ಮಿಕ ಪಠ್ಯ -ಸಾತ್ವಿಕ ಆಹಾರ; ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ?

ಮಾಜದಲ್ಲಿ ಮೌಲ್ಯ ಕುಸಿತ ಉಂಟಾಗಿದೆ. ಶಿಕ್ಷಣದಲ್ಲಿ ಮಕ್ಕಳಿಗೆ ಮೌಲ್ಯ ಆಧಾರಿತ ಶಿಕ್ಷಣ ದೊರಕುತ್ತಿಲ್ಲ. ಸ್ವಾಮೀಜಿಗಳಿಂದ ಮೌಲ್ಯ ಆಧಾರಿತ ಶಿಕ್ಷಣ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಸುಮಾರು ವರ್ಷಗಳಿಂದ ಮೌಲ್ಯ ಆಧಾರಿತ ಶಿಕ್ಷಣವನ್ನು ಭಾರತ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಶಾಲಾ ಹಂತದಲ್ಲಿ ಮೌಲ್ಯ ಶಿಕ್ಷಣದ ಅನುಷ್ಠಾನ ಕುರಿತು ಶಿಕ್ಷಣ ತಜ್ಞರು, ವಿವಿಧ ಧಾರ್ಮಿಕ ಗುರುಗಳು, ಚಿಂತಕರು, ಉನ್ನತ ಅಧಿಕಾರಿಗಳೊಂದಿಗೆ ವಿಧಾನಸೌಧದ 3ನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ನಡೆದ ದುಂಡು ಮೇಜಿನ ಸಮಾಲೋಚನಾ ಸಭೆಯಲ್ಲಿ ಬಹುತೇಕ ಎಲ್ಲರೂ ಪ್ರಾಥಮಿಕ, ಪ್ರೌಢ ಶಾಲೆಗಳು, ಕಾಲೇಜು ವಿದ್ಯಾರ್ಥಿಗಳಿಗೂ ಮೌಲಿಕ ಶಿಕ್ಷಣ ನೀಡುವುದು ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.

ಸಭೆಯಲ್ಲಿ ಸ್ವಾಮೀಜಿಗಳು, ಮುಸ್ಲಿಂ, ಕ್ರಿಶ್ಚಿಯನ್ ಮುಖಂಡರು, ಶಿಕ್ಷಣ ತಜ್ಞರು, ಶಾಸಕರು, ಸಚಿವರು ಪಾಲ್ಗೊಂಡಿದ್ದರು. ಶಾಲಾ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣವನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ದುಂಡು ಮೇಜಿನ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಮಠಾಧೀಶರು ಸಲಹೆ ನೀಡಿದರು.

ಮಕ್ಕಳಿಗೆ ನೀಡಬೇಕಾದ ನೈತಿಕ ಶಿಕ್ಷಣ ಹೇಗಿರಬೇಕು ಎಂಬುದನ್ನು ಅಂತಿಮಗೊಳಿಸಿ ಅನುಷ್ಠಾನಕ್ಕೆ ತರಲು ಸಮಿತಿ ರಚಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ಇದೇ ವೇಳೆ ಮಾತನಾಡಿದ ಅವರು, ಸಮಾಜದಲ್ಲಿ ಮೌಲ್ಯ ಕುಸಿತ ಉಂಟಾಗಿದೆ. ಶಿಕ್ಷಣದಲ್ಲಿ ಮಕ್ಕಳಿಗೆ ಮೌಲ್ಯ ಆಧಾರಿತ ಶಿಕ್ಷಣ ದೊರಕುತ್ತಿಲ್ಲ. ಸ್ವಾಮೀಜಿಗಳಿಂದ ಮೌಲ್ಯ ಆಧಾರಿತ ಶಿಕ್ಷಣ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಸುಮಾರು ವರ್ಷಗಳಿಂದ ಮೌಲ್ಯ ಆಧಾರಿತ ಶಿಕ್ಷಣವನ್ನು ಭಾರತ ನೀಡಿದೆ. ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಬೇಕು. ದೇಶದಲ್ಲಿ ಮೌಲ್ಯ ಕುಸಿಯುತ್ತಿದೆ ಎಂದರು.

ಮೌಲ್ಯ ಶಿಕ್ಷಣವನ್ನು ಪರಿಚಯಿಸುವ ತುರ್ತು ಸಭೆಯಲ್ಲಿ ಒಮ್ಮತಕ್ಕೆ ಬಂದಿರುವುದರಿಂದ ಮುಂಬರುವ ವರ್ಷದಲ್ಲಿ ಜಾರಿಗೆ ತರುವ ಸಾಧ್ಯತೆಯಿದೆ.  ಶಿಕ್ಷಣದ ಪ್ರತಿಯೊಂದು ಹಂತದಲ್ಲೂ ನೈತಿಕತೆ ಮತ್ತು ಮೌಲ್ಯಗಳನ್ನು ನೀಡಲಾಗುತ್ತಿದೆ ಎಂದು ಖಚಿತಪಡಿಸಿಕೊಳ್ಳಲು, ಸರಿಯಾದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಮೌಲ್ಯಮಾಪನಗಳು ಮತ್ತು ಪರೀಕ್ಷೆಗಳನ್ನು ನಿಗದಿಪಡಿಸುವಂತೆ ತಜ್ಞರು ಸೂಚಿಸಿದ್ದಾರೆ.

ಶಾಲೆಗಳಲ್ಲಿ ಮೌಲ್ಯ ಶಿಕ್ಷಣ ಜಾರಿಗೆ ತರುವ ತುರ್ತು ಅಗತ್ಯವಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರು ಅಭಿಪ್ರಾಯ ವ್ಯಕ್ತಪಡಿಸಿದರು. ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಸಭೆಯಲ್ಲಿ ಭಾಗವಹಿಸಿದ ಬಹುತೇಕ ಎಲ್ಲರಿಂದಲೂ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಈ ಸಭೆಯಲ್ಲಿ ವ್ಯಕ್ತವಾದ ಅಂಶಗಳ ಆಧಾರದ ಮೇಲೆ ಇಲಾಖಾ ಮಟ್ಟದಲ್ಲಿ ಆಯೋಜಿಸಿರುವ ಸಭೆಗಳಲ್ಲಿ ಮೌಲ್ಯ ಶಿಕ್ಷಣವನ್ನು ಅನುಷ್ಠಾನಗೊಳಿಸುವ ವಿಧಾನಗಳನ್ನು ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.

ಶಾಲಾ ಮಕ್ಕಳಿಗೆ ಸಾತ್ವಿಕ ಆಹಾರ ಪೂರೈಕೆ ಬಗ್ಗೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರೂ ಈ ಬಗ್ಗೆ ಯೋಚಿಸಿಲ್ಲ. ಆದರೆ, ಮಗುವಿನ ಬೆಳವಣಿಗೆ, ವರ್ತನೆ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದಾದರೆ ಮುಂದಿನ ದಿನಗಳಲ್ಲಿ ಸಾತ್ವಿಕ ಆಹಾರದ ಬಗ್ಗೆ ಚಿಂತನೆ ನಡೆಸುತ್ತೇವೆ. ಆಹಾರದ ಬಗ್ಗೆ ರಾಜ್ಯ, ದೇಶ ಮಾತ್ರವಲ್ಲ ಪ್ರಪಂಚದಲ್ಲಿ ಚರ್ಚೆಯಾಗುತ್ತಿದೆ. ಮೊಟ್ಟೆ ಬದಿಗಿಡಿ, ಕೆಲವು ದೇಶಗಳು ಹಾಲು ನೀಡಬಾರದು ಎನ್ನುತ್ತಿವೆ. ಆಹಾರದ ವಿಷಯದಲ್ಲಿ ಪ್ರತಿಯೊಬ್ಬರೂ ಅವರದೇ ಆದ ಅಭಿಪ್ರಾಯಗಳನ್ನು ಹೊಂದಿರುವುದು ಸಹಜ ಎಂದರು.

ಶಾಲೆಗಳಲ್ಲಿ ಸಾತ್ವಿಕ ಆಹಾರವನ್ನು ಪರಿಚಯಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಮಧ್ಯಾಹ್ನದ ಊಟದಲ್ಲಿ ಮೊಟ್ಟೆ ನೀಡುವುದಕ್ಕೆ ಕೆಲ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರಿಂದ ಸಾತ್ವಿಕ ಆಹಾರ ಸಮಸ್ಯೆ ತಲೆದೋರಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ. ಮಕ್ಕಳಿಗೆ ಪಾಠಗಳಲ್ಲಿ ಭಗವದ್ಗೀತೆಯನ್ನು ಸೇರಿಸುವ ಇತ್ತೀಚಿನ ವಿವಾದಗಳಿಂದಾಗಿ, ತರಗತಿಗಳ ಭಕ್ತಿ ಮತ್ತು ಮೌಲ್ಯದ ಅಂಶಗಳು ಕೆಲವು ಧರ್ಮಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮಕ್ಕಳಿಗೆ ವಿವಿಧ ಮೌಲ್ಯಗಳು ಮತ್ತು ನೈತಿಕತೆಯನ್ನು ಕಲಿಸುವ ಮಾರ್ಗಗಳಾಗಿ ಧಾರ್ಮಿಕ ಪಠ್ಯಗಳ ಪ್ರಬಂಧಗಳನ್ನು ಸೇರಿಸಲಾಗುವುದು. ಇದು ಭಗವದ್ಗೀತೆಗೆ ಸೀಮಿತವಾಗಿರದೆ, ಕುರಾನ್ ಮತ್ತು ಬೈಬಲ್‌ನಂತಹ ಇತರ ಧಾರ್ಮಿಕ ಗ್ರಂಥಗಳ ಅಂಶಗಳು ಇರಲಿವೆ ಎಂದು ಮೂಲವೊಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದೆ.

ಮಕ್ಕಳಲ್ಲಿ ಮೊಬೈಲ್ ಫೋನ್ ಬಳಕೆ ಕಡಿಮೆ ಮಾಡುವಂತೆ ಪೋಷಕರಿಗೆ ಸಲಹೆ ನೀಡಲಾಗಿದೆ.  ರಾಜಕಾರಣಿಗಳಿಗೆ ನೈತಿಕ ಶಿಕ್ಷಣ ಅಗತ್ಯವಿದೆ‌. ಶಿಕ್ಷಣದಲ್ಲಿ ಪರಿವರ್ತನೆ ಆಗಬೇಕಿದೆ. ವಿದ್ಯಾರ್ಥಿಗಳಿಗೆ ಔದ್ಯೋಗಿಕ, ಆಧ್ಯಾತ್ಮಿಕ, ವ್ಯಾವಹಾರಿಕ ಮೂರು ಶಿಕ್ಷಣ ನೀಡಬೇಕು. ಇಂದಿನ ಶಿಕ್ಷಣದಲ್ಲಿ ಔದ್ಯೋಗಿಕ ಹಾಗೂ ವ್ಯಾವಹಾರಿಕ ಶಿಕ್ಷಣ ಸಿಗುತ್ತಿದೆ. ಆದರೆ ಆಧ್ಯಾತ್ಮಿಕ ಶಿಕ್ಷಣ ಸಿಗುತ್ತಿಲ್ಲ ಎಂದು ಸಭೆಯಲ್ಲಿ ಸಲಹೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com