ಗಂಡ ಎಂಜಿನಿಯರ್, ಮಗಳು ಡಾಕ್ಟರ್; ಪೊಲೀಸ್ ಅಧಿಕಾರಿ ಸೋಗಿನಲ್ಲಿ ಬೋಂಡಾ, ದಿನಸಿ ಸುಲಿಗೆ ಮಾಡುತ್ತಿದ್ದ ಮಹಿಳೆ ಬಂಧನ

ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡ ಮಹಿಳೆಯೊಬ್ಬರು ಸ್ಥಳೀಯ ಮಾರಾಟಗಾರರಿಂದ ಬೋಂಡಾ ಮತ್ತು ಬಜ್ಜಿ ಸೇರಿದಂತೆ ದಿನಸಿ ಪದಾರ್ಥಗಳನ್ನು ಸುಲಿಗೆ ಮಾಡಿದ್ದಕ್ಕಾಗಿ ಬ್ಯಾಟರಾಯನಪುರದ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅದೆಷ್ಟೋ ಪೊಲೀಸರು ಬೀದಿ ಬದಿ ವ್ಯಾಪಾರಿಗಳು ಅಥವಾ ಅಂಗಡಿಗಳಿಂದ ಸುಲಿಗೆ ಮಾಡುತ್ತಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತವೆ. ಈ ನಿಟ್ಟಿನಲ್ಲಿ ತಾನೂ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡ ಮಹಿಳೆಯೊಬ್ಬರು ಸ್ಥಳೀಯ ಮಾರಾಟಗಾರರಿಂದ ಬೋಂಡಾ ಮತ್ತು ಬಜ್ಜಿ ಸೇರಿದಂತೆ ದಿನಸಿ ಪದಾರ್ಥಗಳನ್ನು ಸುಲಿಗೆ ಮಾಡಿದ್ದಕ್ಕಾಗಿ ಬ್ಯಾಟರಾಯನಪುರದ ಪೊಲೀಸರು ಬಂಧಿಸಿದ್ದಾರೆ.

ಬ್ಯಾಟರಾಯನಪುರದ ಅಯ್ಯಪ್ಪ ದೇವಸ್ಥಾನದ ಬಳಿ ತಳ್ಳುವ ಗಾಡಿಯಲ್ಲಿ ಬೋಂಡಾ ವ್ಯಾಪಾರ ಮಾಡಿಕೊಂಡಿದ್ದ 26 ವರ್ಷದ ಸಹೈಕ್ ಸಲಾಮ್ ಎಂಬ ವ್ಯಾಪಾರಿ 'ಹಫ್ತಾ' (ಸುಲಿಗೆ) ವ್ಯವಸ್ಥೆಯಿಂದ ಬೇಸತ್ತು, ಮಹಿಳೆಯ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿದ್ದಾನೆ.

ಮಹಿಳೆಯು ಕಳೆದ ಒಂದು ತಿಂಗಳಿನಿಂದ ಸಾಮಾನ್ಯ ಉಡುಪಿನಲ್ಲಿ ವಾರಕ್ಕೊಮ್ಮೆ ಅಥವಾ ಎರಡು ಬಾರಿ ತನ್ನ ಅಂಗಡಿಗೆ ಭೇಟಿ ನೀಡುತ್ತಿದ್ದರು. ಕೊಡಿಗೇಹಳ್ಳಿ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು, ಪದಾರ್ಥಗಳನ್ನು ಉಚಿತವಾಗಿ ತೆಗೆದುಕೊಂಡು ಹೋಗುತ್ತಿದ್ದರು ಎಂದು ವ್ಯಾಪಾರಿ ಆರೋಪಿಸಿದ್ದಾರೆ.

ಅಂಗಡಿಗೆ ಬರುತ್ತಿದ್ದ ಮಹಿಳೆ, ಅಂಗಡಿಯು ಕಾನೂನುಬಾಹಿರವೆಂದು ವರದಿ ಮಾಡುವುದಾಗಿ ಮತ್ತು ಆಕೆ ಪ್ರತಿಸಲ ಭೇಟಿ ನೀಡಿದಾಗ ಪದಾರ್ಥಗಳನ್ನು ಉಚಿತವಾಗಿ ನೀಡಲು ವಿಫಲವಾದರೆ, ಅಂಗಡಿಯನ್ನು ಮುಚ್ಚಿಸುವುದಾಗಿ ಬೆದರಿಕೆಯೊಡ್ಡುತ್ತಿದ್ದರು. ಇದರಿಂದ ಹೆದರಿದ್ದ ಸಲಾಂ, ಕಳೆದ ಒಂದು ತಿಂಗಳಿನಿಂದ ಪ್ರತಿ ಬಾರಿ ಬೋಂಡಾ, ಬಜ್ಜಿ ಮತ್ತು ವಡೆಗಳನ್ನು ನೀಡುತ್ತಿದ್ದನು.

ಜನವರಿ 5 ರಂದು ಸಂಜೆ ಮಹಿಳೆ ಅಂಗಡಿಯ ಬಳಿ ಹೋದಾಗ, ತಾಳ್ಮೆ ಕಳೆದುಕೊಂಡ ಸಲಾಂ, ಸ್ಥಳದಲ್ಲಿಯೇ ಮೊಟ್ಟೆಯ ಬೋಂಡಾ ತಿಂದದ್ದು ಸೇರಿ 100 ರೂ ಮೌಲ್ಯದ ಇತರ ಬೋಂಡಾಗಳನ್ನು ಪಾರ್ಸೆಲ್ ಮಾಡಿಕೊಟ್ಟ ಹಣವನ್ನು ಪಾವತಿಸುವಂತೆ ಕೇಳಿದ್ದಾರೆ. ಹಣ ಕೇಳಿದ್ದಕ್ಕೆ ಕೋಪಗೊಂಡ ಮಹಿಳೆ ತಕ್ಷಣ ಆತನ ಗಾಡಿ ತೆಗೆಯುವಂತೆ ಬೆದರಿಕೆಯೊಡ್ಡಿದ್ದಾರೆ.

ಸಲಾಂ ಕೂಡಲೇ 112ಕ್ಕೆ ಕರೆ ಮಾಡಿ ತನಗಾಗುತ್ತಿರುವ ಕಿರುಕುಳದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರಿಗೆ ಕರೆ ಮಾಡಿದ ತಕ್ಷಣ ಮಹಿಳೆ ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೆ, ಆತ ಆಕೆಯ ವಾಹನ ನೋಂದಣಿ ಸಂಖ್ಯೆಯನ್ನು ಬರೆದುಕೊಂಡಿದ್ದರು. ಬಳಿಕ ಸ್ಥಳಕ್ಕೆ ಆಗಮಿಸಿದ ಹೊಯ್ಸಳ ಗಸ್ತು ಸಿಬ್ಬಂದಿ ಸಲಾಂ ಅವರಿಂದ ಮಾಹಿತಿ ಸಂಗ್ರಹಿಸಿ, ಕೊಡಿಗೇಹಳ್ಳಿ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸುವಂತೆ ತಿಳಿಸಿದ್ದಾರೆ.

ಬಳಿಕ ಕಾರ್ಯಾಚರಣೆ ಕೈಗೊಂಡ ಪೊಲೀಸರು ಗೃಹಿಣಿ ಲೀಲಾವತಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯ ಪತಿ ಎಂಜಿನಿಯರ್, ಹಿರಿಯ ಮಗಳು ಡಾಕ್ಟರ್ ಮತ್ತು ಮಗ ಎಂಜಿನಿಯರಿಂಗ್ ವಿದ್ಯಾರ್ಥಿ ಎಂದು ಪೊಲೀಸರಿಗೆ ತಿಳಿದು ಬಂದಿದೆ. ಕುಟುಂಬ ಆರ್ಥಿಕವಾಗಿ ಉತ್ತಮವಾಗಿದೆ. ಆದರೆ, ಲೀಲಾವತಿ ಪೊಲೀಸ್ ಇಲಾಖೆಯ ಹೆಸರನ್ನು ದುರುಪಯೋಗಪಡಿಸಿಕೊಂಡು ತಿಂಡಿಗಳನ್ನು ಸುಲಿಗೆ ಮಾಡುತ್ತಿದ್ದರು. ಹಣ್ಣುಗಳು, ತರಕಾರಿಗಳು ಮತ್ತು ದಿನನಿತ್ಯ ದಿನಸಿ ಮಾರಾಟಗಾರರನ್ನು ಸುಲಿಗೆ ಮಾಡುತ್ತಿದ್ದರು ಎನ್ನಲಾಗಿದೆ.

ಪೊಲೀಸರ ವಿಚಾರಣೆ ವೇಳೆ ಲೀಲಾವತಿ ಮಾರಾಟಗಾರರಿಂದ ವಸೂಲಿ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಇಲಾಖೆ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಪೊಲೀಸರಲ್ಲಿ ಕ್ಷಮೆ ಯಾಚಿಸಿದ್ದಾರೆ. ಬಳಿಕ ಆಕೆಯನ್ನು ಬಂಧಿಸಲಾಗಿದ್ದು, ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದಾರೆ.

ಲೀಲಾವತಿಯವರ ಸುಲಿಗೆ ಕಥೆ ಒಂದು ವರ್ಷದಿಂದ ನಡೆಯುತ್ತಿದೆ. ಈ ಹಿಂದೆ ಕೆಲವು ಮಹಿಳಾ ಪೊಲೀಸ್ ಅಧಿಕಾರಿಗಳಿಂದ ಆಹಾರ ವಸೂಲಿ ನಡೆಯುತ್ತಿರುವ ಬಗ್ಗೆ ಮಾರಾಟಗಾರರು ಕೊಡಿಗೇಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ, ಯಾರೊಬ್ಬರೂ ಅಧಿಕೃತವಾಗಿ ದೂರು ದಾಖಲಿಸಿರಲಿಲ್ಲ. ದೂರಿನ ಮೇರೆಗೆ ಠಾಣೆಯಲ್ಲಿದ್ದ ಮಹಿಳಾ ಸಿಬ್ಬಂದಿಯನ್ನೂ ವಿಚಾರಣೆಗೊಳಪಡಿಸಲಾಗಿತ್ತು.

ಲೀಲಾವತಿಯನ್ನು ಬಂಧಿಸಿದ ನಂತರ, ಬೇಕರಿ ಮಾಲೀಕರು, ಬಿರಿಯಾನಿ ಹೋಟೆಲ್ ಮಾಲೀಕರು ಮತ್ತು ಇತರರು ಸೇರಿದಂತೆ ಐವರು ಮಾರಾಟಗಾರರು ಅವರ ವಿರುದ್ಧ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com