ಬೆಂಗಳೂರು: ಪೆಟ್ ಶಾಪ್'ಗಳಲ್ಲಿ ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿದ್ದ 1 ಸಾವಿರ ದೇಶಿ, ವಿದೇಶಿ ಪಕ್ಷಿ-ಪ್ರಾಣಿಗಳ ರಕ್ಷಣೆ!
ನಗರದಲ್ಲಿ ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿದ್ದ 1 ಸಾವಿರ ದೇಶೀಯ ಹಾಗೂ ವಿದೇಶಿ ಪಕ್ಷಿ ಪ್ರಾಣಿಗಳನ್ನು ಬುಧವಾರ ರಕ್ಷಣೆ ಮಾಡಲಾಗಿದೆ.
Published: 12th January 2023 09:28 AM | Last Updated: 12th January 2023 12:21 PM | A+A A-

ಪೆಟ್ ಶಾಪ್ ಮೇಲೆ ನಡೆದ ದಿಢೀರ್ ದಾಳಿಯಲ್ಲಿ ಅಂಗಡಿಯಲ್ಲಿರುವ ಪೊಲೀಸ್ ಸಿಬ್ಬಂದಿ.
ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿದ್ದ 1 ಸಾವಿರ ದೇಶೀಯ ಹಾಗೂ ವಿದೇಶಿ ಪಕ್ಷಿ ಪ್ರಾಣಿಗಳನ್ನು ಬುಧವಾರ ರಕ್ಷಣೆ ಮಾಡಲಾಗಿದೆ.
ಸಾಕು ಪ್ರಾಣಿಗಳ ಮಾರಾಟಗಾರರಿಗೆ ಕಡ್ಡಾಯವಾಗಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದರೂ ನಗರದ ಬಹುತೇಕ ಸಾಕು ಪ್ರಾಣಿ ಮಾರಾಟಗಾರರು ನೋಂದಣಿ ಮಾಡಿಕೊಂಡಿಲ್ಲ. ಈ ಬಗ್ಗೆ ಸಾಕಷ್ಟು ಸಂಸ್ಥೆಗಳು ಪಶುಸಂಗೋಪನೆ ಇಲಾಖೆ ಹಾಗೂ ಬಿಬಿಎಂಪಿ ಪಶುಪಾಲನಾ ವಿಭಾಗಕ್ಕೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಬುಧನವಾರ ಬಿಬಿಎಂಪಿಯ ಪಶುಪಾಲನಾ ವಿಭಾಗ, ಪಶುಸಂಗೋಪನೆ ಇಲಾಖೆ ಹಾಗೂ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಅಧಿಕಾರಿಗಳ ನೇತೃತ್ವದಲ್ಲಿ ಏಕಕಾಲಕ್ಕೆ ನಗರದ ವಿವಿಧ ಭಾಗದಲ್ಲಿ ಕಾರ್ಯಾಚರಣೆ ನಡೆಸಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಸಾಕು ಪ್ರಾಣಿ ಹಾಗೂ ಪಕ್ಷಿಗಳನ್ನ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:ಬೆಂಗಳೂರು: ಪ್ರಮುಖ ರಸ್ತೆಗಳಲ್ಲಿ 'ಮೆಕ್ಯಾನಿಕಲ್ ಸ್ವೀಪರ್' ಬಳಕೆಗೆ ಬಿಬಿಎಂಪಿ ಮುಂದು!
7 ತಂಡಗಳನ್ನು ರಚನೆ ಮಾಡಿಕೊಂಡು ಅಧಿಕಾರಿಗಳು ನಗರದ ವಿವಿಧೆಡೆ ಪರಿಶೀಲನೆ ನಡೆಸಿದ್ದಾರೆ. ಶಿವಾಜಿನಗರ, ಜೆ.ಪಿ.ನಗರ, ಪುಟ್ಟೇನಹಳ್ಳಿ, ಬಸವನಗುಡಿ ಮತ್ತಿತರ ಪ್ರದೇಶಗಳಲ್ಲಿ ಬುಧವಾರ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, 16 ಜಾತಿಯ 1,000 ದೇಶೀಯ ಮತ್ತು ವಿದೇಶಿ ಪಕ್ಷಿಗಳು ಮತ್ತು ಪ್ರಾಣಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ದಾಳಿ ವೇಳೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ಪಿಸಿಎ) ಕಾಯಿದೆ 1960, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, ನಾಯಿ ಸಾಕಣೆ ಮಾರುಕಟ್ಟೆ ನಿಯಮಗಳು 2017 ಮತ್ತು ಪೆಟ್ ಶಾಪ್ ನಿಯಮಗಳು 2018 ರ ಅಡಿಯಲ್ಲಿ ರೂಪಿಸಲಾದ ವಿವಿಧ ನಿಯಮಗಳನ್ನು ಪಕ್ಷಿಗಳು ಮತ್ತು ಪ್ರಾಣಿಗಳನ್ನು ಮಾರಾಟ ಮಾಡುವ ಅಂಗಡಿಗಳು ಸ್ಪಷ್ಟವಾಗಿ ಉಲ್ಲಂಘಿಸುತ್ತಿರುವುದು ಕಂಡುಬಂದಿದೆ.
ದಾಳಿಯ ಸಮಯದಲ್ಲಿ ಬಹುತೇಕ ಅಂಗಡಿಗಳಲ್ಲಿ ಅನೇಕ ಪಕ್ಷಿಗಳನ್ನು ಒಂದೇ ಪಂಜರದಲ್ಲಿ ಇರಿಸಿರುವುದು, ಪಕ್ಷಿಗಳು ಮತ್ತು ಪ್ರಾಣಿಗಳು ಸ್ಥಳ ಮತ್ತು ತಾಜಾ ಗಾಳಿಗಾಗಿ ಹೆಣಗಾಡುತ್ತಿರುವುದು, ನೀರು ಅಥವಾ ಆಹಾರ ಪೂರೈಕೆ ಇಲ್ಲದಿರುವುದು ಶುಚಿತ್ವ ಇಲ್ಲದಿರುವುದು ಕಂಡು ಬಂದಿತ್ತು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಆಯುಕ್ತೆ ಅಶ್ವತಿ ತಿಳಿಸಿದ್ದಾರೆ.
ಇದನ್ನೂ ಓದಿ: ಸ್ಯಾಂಕಿ ಟ್ಯಾಂಕ್ ಬಳಿ ಮೇಲ್ಸೇತುವೆ ನಿರ್ಮಾಣ ಪ್ರಗತಿಯಲ್ಲಿದೆ: ಬಿಬಿಎಂಪಿ
“ಸಾರ್ವಜನಿಕರು ಅಂಗಡಿಗಳಿಗೆ ತೆರಳಿದಾಗ ಸಾಕುಪ್ರಾಣಿ ಮಾರಾಟಗಾರರ ಪರವಾನಗಿಯನ್ನು ಪರಿಶೀಲಿಸಬೇಕು. ಸಾಕುಪ್ರಾಣಿಗಳ ಖರೀದಿಯ ನಿಯಮಗಳನ್ನು ಗಮನಿಸಿ, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ನೋಂದಾಯಿತ ತಳಿಗಾರರು ಮತ್ತು ಸಾಕುಪ್ರಾಣಿ ಅಂಗಡಿಗಳಿಂದ ಮಾತ್ರ ಖರೀದಿ ಮಾಡುವಂತೆ ನಾವು ಒತ್ತಾಯಿಸುತ್ತೇವೆಂದು ಅಶ್ವತಿ ತಿಳಿಸಿದ್ದಾರೆ.
ನಾಯಿ ಮರಿಗಳನ್ನು ಮಾರಾಟ ಮಾಡುವಾಗ ಕನಿಷ್ಠ 45 ದಿನಗಳಾದರೂ ತಾಯಿಯ ಬಳಿಯಿರಬೇಕು. ಆದರೆ, ಅನೇಕ ಅಂಗಡಿಗಳಲ್ಲಿ ನಾಯಿ ಮರಿಗಳು ತನ್ನ ತಾಯಿಯ ಹಾಲನ್ನು ಕುಡಿಯಲು ಬಿಡದೆ ಸಣ್ಣ ಮರಿಗಳನ್ನೇ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಕೆಲವೆಡೆ ಸೂಕ್ತ ವ್ಯವಸ್ಥೆ, ಆಹಾರ, ನೀರು ಇಲ್ಲದೆ ಪಕ್ಷಿಗಳು ಹಾಗೂ ನಾಯಿಗಳು ಸತ್ತಿರುವುದು, ಕೊಳೆತು ಬಿದ್ದಿರುವುದೂ ಕೂಡ ಕಂಡು ಬಂದಿತ್ತು. ಇನ್ನೂ ಕೆಲವೆಡೆ ಅಂಗಡಿ ಮಾಲೀಕರು ಪ್ರಾಣಿಗಳೂ ಗಾಯಗೊಂಡಿದ್ದರೂ ಅವುಗಳಿಗೆ ಸೂಕ್ತ ಚಿಕಿತ್ಸೆ ನೀಡದಿರುವುದು ಕಂಡು ಬಂದಿತ್ತು.
ವಶಪಡಿಸಿಕೊಂಡ ಕೆಲವು ಜಾತಿಗಳ ಪಕ್ಷಿಗಳಲ್ಲಿ ಆಫ್ರಿಕನ್ ಗಿಳಿಗಳು, ಪಾರ್ಟ್ರಿಡ್ಜ್, ಬಡ್ಗಿಗರ್ಸ್/ಲವ್ ಬರ್ಡ್ಸ್, ಫಿಂಚ್‌ಗಳು, ಟರ್ಕಿಗಳು, ಕಾಕಟಿಯಲ್‌ಗಳು, ಆಫ್ರಿಕನ್ ಕಾಗೆಗಳು ಮತ್ತು ಕೆಂಪು ಇಯರ್ಡ್ ಸ್ಲೈಡರ್‌ಗಳು ಸೇರಿವೆ.
ಇದನ್ನೂ ಓದಿ: ಕಳೆದ ವರ್ಷ ಪ್ರವಾಹ ಪರಿಸ್ಥಿತಿಯಿಂದ ಪಾಠ ಕಲಿತ ಬಿಬಿಎಂಪಿ: ಚರಂಡಿಗಳಲ್ಲಿ ಹೂಳೆತ್ತುವ ಕಾರ್ಯದಲ್ಲಿ ಚುರುಕು!
ದೇಶೀಯ ಜಾತಿಗಳಲ್ಲಿ ಪಾರಿವಾಳಗಳು, ಮೊಲಗಳು, ಬಾತುಕೋಳಿಗಳು, ಹ್ಯಾಮ್ಗಳು, ನಾಯಿಗಳು, ಬೆಕ್ಕುಗಳು ಮತ್ತು ಇಲಿಗಳಿವೆ.
ರಕ್ಷಿಸಿದ ಎಲ್ಲಾ ಪ್ರಾಣಿಗಳನ್ನು ಕಾನೂನಿನ ಪ್ರಕಾರ ಮಾನ್ಯತೆ ಪಡೆದ ಸೌಲಭ್ಯಗಳಿರುವ ಪ್ರಾಣಿ ರಕ್ಷಣಾ ಗೃಹದಲ್ಲಿ ಇರಿಸಲಾಗಿದೆ. ದೂರುಗಳಿದ್ದಲ್ಲಿ ಸಾರ್ವಜನಿಕರು 24x7 +91 82771 00200 ಸಹಾಯವಾಣಿಗೆ ಕರೆ ಮಾಡಬಹುದು ಅಥವಾ ಪಶುಸಂಗೋಪನೆಯ ಅಧಿಕೃತ ಟ್ವಿಟರ್ ಖಾತೆಗೆ ಟ್ವೀಟ್ ಮಾಡಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.