ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಮನೆ ಮುಂದೆಯೇ ಪೊಲೀಸ್ ಪೇದೆ ಆತ್ಮಹತ್ಯೆ ಯತ್ನ!
ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮನೆಯ ಮುಂದೆ ಪೊಲೀಸ್ ಪೇದೆಯೊಬ್ಬರು ಆತ್ಮಹತ್ಯೆ ಯತ್ನಿಸಿರುವ ಘಟನೆ ನಡೆದಿದೆ. ಪೇದೆ ಚಾಕುವಿನಿಂದ ತನ್ನ ಕೈ ಕೊಯ್ದುಕೊಂಡು ಸಾಯಲು ಯತ್ನಿಸಿದ್ದರು ಎಂದು ತಿಳಿದು ಬಂದಿದೆ.
Published: 12th January 2023 09:37 AM | Last Updated: 12th January 2023 09:37 AM | A+A A-

ಆರಗ ಜ್ಞಾನೇಂದ್ರ
ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮನೆಯ ಮುಂದೆ ಪೊಲೀಸ್ ಪೇದೆಯೊಬ್ಬರು ಆತ್ಮಹತ್ಯೆ ಯತ್ನಿಸಿರುವ ಘಟನೆ ನಡೆದಿದೆ. ಪೇದೆ ಚಾಕುವಿನಿಂದ ತನ್ನ ಕೈ ಕೊಯ್ದುಕೊಂಡು ಸಾಯಲು ಯತ್ನಿಸಿದ್ದರು ಎಂದು ತಿಳಿದು ಬಂದಿದೆ.
ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಹೆಗಡೆ ನಗರದ ನಿವಾಸಿ ನವೀನ್ ಕುಮಾರ್ (25) ಆತ್ಮಹತ್ಯೆ ಯತ್ನಿಸಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ. ಜಯಮಹಲ್ ರಸ್ತೆಯಲ್ಲಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಅಧಿಕೃತ ಸರ್ಕಾರಿ ನಿವಾಸದ ಭದ್ರತಾ ಕರ್ತವ್ಯದಲ್ಲಿ ಮಂಗಳವಾರ ನವೀನ್ ನಿರತನಾಗಿದ್ದಾಗ ಈ ಘಟನೆ ನಡೆದಿದೆ.
ಸಚಿವರ ಮನೆ ಮುಂದೆ ಬೆಳಗ್ಗೆ 9.45ರ ಸುಮಾರಿಗೆ ಎಡಗೈ ಕುಯ್ದುಕೊಂಡು ನಿತ್ರಾಣನಾಗಿ ನವೀನ್ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಅಲ್ಲೇ ಭದ್ರತೆಯಲ್ಲಿ ಪೊಲೀಸರು ದಾಖಲಿಸಿದರು. ವೈದ್ಯಕೀಯ ಚಿಕಿತ್ಸೆಗೆ ಕಾನ್‌ಸ್ಟೇಬಲ್ ಸ್ಪಂದಿಸುತ್ತಿದ್ದು, ಆತ ಪ್ರಾಣಪಾಯದಿಂದ ಸುರಕ್ಷಿತವಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಗೃಹ ಸಚಿವರ ಭಧ್ರತೆಗಾಗಿ ಪೊಲೀಸ್ ಪೇದೆ ನವೀನ್ ಅವರನ್ನು ನಿಯೋಜನೆ ಮಾಡಲಾಗಿತ್ತು. ಆದರೆ ಇದ್ದಕ್ಕಿದ್ದಂತೆಯೇ ಇವರು ಆತ್ಮಹತ್ಯೆಗೆ ಯತ್ನಿಸಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.