ನಮ್ಮ ಮೆಟ್ರೊ ಪಿಲ್ಲರ್ ಕುಸಿತ ಪ್ರಕರಣ: ನಾಗಾರ್ಜುನ ಕಂಪನಿ ಹೆಸರು ಸೇರಿ 9 ಮಂದಿಯ ಹೆಸರು ಎಫ್ಐಆರ್ ನಲ್ಲಿ ದಾಖಲು!

28 ವರ್ಷದ ತೇಜಸ್ವಿನಿ ಸುಲಾಖೆ ಮತ್ತು ಆಕೆಯ ಎರಡೂವರೆ ವರ್ಷದ ಮಗ ವಿಹಾನ್ ಎಲ್ ಸುಲಾಖೆ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಗೋವಿಂದಪುರ ಪೊಲೀಸರು ಎಫ್‌ಐಆರ್‌ನಲ್ಲಿ ನಾಗಾರ್ಜುನ ಕಂಪನಿ ಸೇರಿ 9 ಮಂದಿಯ ಹೆಸರನ್ನು ದಾಖಲಿಸಿಕೊಂಡಿದ್ದಾರೆ.
ಮೆಟ್ರೋ ಪಿಲ್ಲರ ಕುಸಿದು ಬಿದ್ದಿರುವುದು (ಸಂಗ್ರಹ ಚಿತ್ರ)
ಮೆಟ್ರೋ ಪಿಲ್ಲರ ಕುಸಿದು ಬಿದ್ದಿರುವುದು (ಸಂಗ್ರಹ ಚಿತ್ರ)

ಬೆಂಗಳೂರು: 28 ವರ್ಷದ ತೇಜಸ್ವಿನಿ ಸುಲಾಖೆ ಮತ್ತು ಆಕೆಯ ಎರಡೂವರೆ ವರ್ಷದ ಮಗ ವಿಹಾನ್ ಎಲ್ ಸುಲಾಖೆ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಗೋವಿಂದಪುರ ಪೊಲೀಸರು ಎಫ್‌ಐಆರ್‌ನಲ್ಲಿ ನಾಗಾರ್ಜುನ ಕಂಪನಿ ಸೇರಿ 9 ಮಂದಿಯ ಹೆಸರನ್ನು ದಾಖಲಿಸಿಕೊಂಡಿದ್ದಾರೆ.

ಈ ಸಂಬಂಧ ತನಿಖೆಗೆ ಹಾಜರಾಗುವಂತೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಅಧಿಕಾರಿಗಳು ಮತ್ತು ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿ (ಎನ್‌ಸಿಸಿ)ಗೆ ನೋಟಿಸ್ ಜಾರಿ ಮಾಡಿದ್ದಾರೆ.

ನಾಗಾರ್ಜುನ ಕಂಪನಿ ಮತ್ತು ಅದರ ನಿರ್ದೇಶಕ ಚೈತನ್ಯ, ಜೂನಿಯರ್ ಎಂಜಿನಿಯರ್ ಪ್ರಭಾಕರ್, ಮೇಲ್ವಿಚಾರಣಾ ಪ್ರಾಜೆಕ್ಟ್ ಮ್ಯಾನೇಜರ್ ಮಥಾಯ್, ಯೋಜನಾ ವ್ಯವಸ್ಥಾಪಕ ವಿಕಾಸ್ ಸಿಂಗ್, ಮೇಲ್ವಿಚಾರಕ ಲಕ್ಷ್ಮೀಪತಿ ಹಾಗೂ ಬಿಎಂಆರ್‌ಸಿಎಲ್ ಉಪ ಮುಖ್ಯ ಎಂಜಿನಿಯರ್ ವೆಂಕಟೇಶ್ ಶೆಟ್ಟಿ, ಕಾರ್ಯನಿರ್ವಾಹಕ ಎಂಜಿನಿಯರ್ ಮಹೇಶ್ ಬೆಂಡೆಕರಿ ಮತ್ತು ಜೂನಿಯರ್ ಎಂಜಿನಿಯರ್ ಜಾಫರ್ ಸಾದಿಕ್ ಹೆಸರನ್ನು ಎಫ್ಐಆರ್ ನಲ್ಲಿ ದಾಖಲಿಸಿದ್ದಾರೆಂದು ತಿಳಿದುಬಂದಿದೆ.

ಗುರುವಾರದೊಳಗೆ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಸೂಚಿಸಿ ಎಲ್ಲಾ ಒಂಬತ್ತು ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಪೂರ್ವ) ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.

ಈ ಹೆಸರುಗಳು ಮಂಗಳವಾರವೇ ಏಕೆ ಕೇಳಿಬರಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಸಂಚಾರಕ್ಕೆ ಅನುವು ಮಾಡಿಕೊಡುವುದು ನಮ್ಮ ಮೊದಲ ಆದ್ಯತೆಯಾಗಿತ್ತು. ಹೀಗಾಗಿ ನಾವು ಪಿಲ್ಲರ್ ತೆರವುಗೊಳಿಸುವ ಕೆಲಸ  ಮಾಡಿದ್ದೆವು. ಜೊತೆಗೆ ಫೋರೆನ್ಸಿಕ್ ತಜ್ಞರು ಸೇರಿದಂತೆ ತನಿಖಾ ಸಂಸ್ಥೆಗಳಿಗೆ ಸ್ಥಳದಲ್ಲಿ ಪರಿಶೀಲನೆ ನಡೆಸಲು ಅವಕಾಶ ನೀಡಬೇಕಿತ್ತು ಎಂದು ತಿಳಿಸಿದ್ದಾರೆ.

ಬುಧವಾರ ಬಿಎಂಆರ್‌ಸಿಎಲ್ ಅಧಿಕಾರಿಗಳು ಗೋವಿಂದಪುರ ಪೊಲೀಸ್ ಠಾಣೆಯ ತನಿಖಾಧಿಕಾರಿ (ಐಒ) ಮುಂದೆ ಹಾಜರಾಗಿದ್ದು, ತನಿಖೆಗೆ ಸಹಕರಿಸುತ್ತಿದ್ದಾರೆ. ಅವರು ನೀಡಿದ ಮಾಹಿತಿಗಳ ಆಧಾರದ ಮೇಲೆ ಎಫ್‌ಐಆರ್‌ನಲ್ಲಿ ಹೆಸರುಗಳನ್ನು ದಾಖಲಿಸಲಾಗಿದೆ.

ನಾವು ಐಐಎಸ್‌ಸಿಯ ತಜ್ಞರನ್ನು ಸ್ಥಳಕ್ಕೆ ಕರೆಸಿ ಅವರ ಅಭಿಪ್ರಾಯಗಳ ಪಡೆಯುತ್ತಿದ್ದೇವೆ. ಮಂಗಳವಾರ, ಎಫ್‌ಎಸ್‌ಎಲ್ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಇದೀಗ ಭಾರತೀಯ ವಿಜ್ಞಾನ ಸಂಸ್ಥೆಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ನಿನ್ನೆಯಷ್ಟೇ ಬಿಎಂಆರ್‌ಸಿಎಲ್ ಮುಖ್ಯ ಎಂಜಿನಿಯರ್ ಹಾಗೂ ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ (ರಸ್ತೆ ಮತ್ತು ಫ್ಲೈಓವರ್ ವಿಭಾಗ) ಡಿಸಿಪಿ ಅವರೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com