
ಸಂಗ್ರಹ ಚಿತ್ರ
ಬೆಂಗಳೂರು: ನಗರದಲ್ಲಿ ಮಂಗಳವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಶರಣಾಗಿದ್ದಾರೆ.
ಮೃತರನ್ನು ಕಾನೂನು ವಿದ್ಯಾರ್ಥಿ ರಿಜ್ವಾನ್ (25) ಮತ್ತು ಡಿಫಾರ್ಮಸಿ ವಿದ್ಯಾರ್ಥಿ ಶ್ರೀನಾಥ್ (25) ಎಂದು ಗುರ್ತಿಸಲಾಗಿದೆ.
ರಿಜ್ವಾನ್ ಕೆ.ಜಿ.ಹಳ್ಳಿಯ ಪಿ ಮತ್ತು ಟಿ ಕಾಲೋನಿ ನಿವಾಸಿಯಾಗಿದ್ದರೆ, ಶ್ರೀನಾಥ್ ಕೋಲಾರದ ಶ್ರೀನಿವಾಸಪುರದವರಾಗಿದ್ದು, ಕೆಆರ್ ಪುರಂನ ಫಾರ್ಮಸಿ ಕಾಲೇಜಿನಲ್ಲಿ ಓದುತ್ತಿದ್ದರೆಂದು ತಿಳಿದುಬಂದಿದೆ.
ಕೆಲ ತಿಂಗಳ ಹಿಂದೆ ರಿಜ್ವಾನ್ ಮದುವೆಯಾಗಿದ್ದರು ಎನ್ನಲಾಗಿದೆ. ಮಂಗಳವಾರ ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಪತ್ನಿ ಆರ್‌ಟಿ ನಗರದಲ್ಲಿರುವ ಪೋಷಕರ ಮನೆಯಲ್ಲಿ ವಾಸವಿದ್ದರು. ರಿಜ್ವಾನ್ ಫೋನ್ ತೆಗೆಯದ ಹಿನ್ನೆಲೆಯಲ್ಲಿ ಪೋಷಕರು ಹುಡುಕಾಟ ಆರಂಭಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಇದನ್ನೂ ಓದಿ: ರಸ್ತೆ ಅಪಘಾತ: ಕೇರಳ ಗೃಹ ಕಾರ್ಯದರ್ಶಿ ವಿ.ವೇಣು ಸೇರಿ 8 ಮಂದಿಗೆ ಗಾಯ
ಕಾಲೇಜಿನಲ್ಲಿ ನಡೆದ ಯಾವುದೋ ಘಟನೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಕೆ.ಜಿ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಇನ್ನು ಶ್ರೀನಾಥ್ ಅವರು ಕೆಆರ್ ಪುರಂನ ಹೀರಂಡಹಳ್ಳಿಯಲ್ಲಿ ತಂಗಿದ್ದ ಕೊಠಡಿಯಲ್ಲಿ ಮಂಗಳವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶ್ರೀನಾಥ್ ಅವರು ಬಾಡಿ ಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಸ್ನೇಹಿತರೊಬ್ಬರು ಕೊಠಡಿ ಬಳಿ ಹೋದಾಗ ಘಟನೆ ಬೆಳಕಿಗೆ ಬಂದಿದೆ.
ಈ ನಡುವೆ ಶ್ರೀನಾಥ್ ಅವರ ಪೋಷಕರು, ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ. ನಮ್ಮ ಮಗನನ್ನು ಹತ್ಯೆ ಮಾಡಲಾಗಿದ್ದು, ಆತ್ಮಹತ್ಯೆಯೆಂದು ಬಿಂಬಿಸಲು ನೇಣಿನ ಕುಣಿಕೆಗೆ ಹಾಕಿದ್ದಾರೆಂದು ಆರೋಪಿಸಿದ್ದಾರೆ. ಈ ಸಂಬಂಧ ಆವಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.