
ಸಂಗ್ರಹ ಚಿತ್ರ
ಮೈಸೂರು: ಡಾ.ವಿಷ್ಣುವರ್ಧನ್ ಅವರ ಹುಟ್ಟೂರಾದ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕೆಂಬ ಅವರ ಅಭಿಮಾನಿಗಳು ಮತ್ತು ಅನುಯಾಯಿಗಳ ಬಹುದಿನಗಳ ಬೇಡಿಕೆ ಸದ್ಯದಲ್ಲೇ ನನಸಾಗಲಿದೆ.
ಜನವರಿ 29ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ವಿಷ್ಣುವರ್ಧನ್ ಅವರ ಸ್ಮಾರಕವನ್ನು ಉದ್ಘಾಟನೆ ಮಾಡಲಿದ್ದು, ಇದಕ್ಕಾಗಿ ಭರದ ಸಿದ್ಧತೆ ನಡೆದಿದೆ ಎಂದು ತಿಳಿದುಬಂದಿದೆ.
ಈ ಬೆಳವಣಿಗೆಯ ಬಗ್ಗೆ ನಟ ಮತ್ತು ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಅವರು ಮಾತನಾಡಿದ್ದು, ಖಚಿತಪಡಿಸಿದ್ದಾರೆ. ಕಾಮಗಾರಿ ಪೂರ್ಣಗೊಂಡ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ 18 ರಂದು ವಿಷ್ಣುವರ್ಧನ್ ಸ್ಮಾರಕ ಉದ್ಘಾಟಿಸಲಿರುವ ಸಿಎಂ ಬೊಮ್ಮಾಯಿ
"ಮೈಸೂರಿನಲ್ಲಿ ಪೂರ್ಣಗೊಂಡಿರುವ ಡಾ. ವಿಷ್ಣುವರ್ಧನ್ ಅವರ ಸ್ಮಾರಕದ ಉದ್ಘಾಟನೆಗೆ ಬರಲು ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ. ತಾವೆಲ್ಲರೂ ಇಷ್ಟು ವರ್ಷ ಕಾದಿದ್ದೀರಿ. ಇಂದು ಈ ಸಂತೋಷದ ಸುದ್ದಿಯನ್ನು ಎಲ್ಲರೂ ಕೇಳುತ್ತಿದ್ದೀರಿ. ನೀವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ವಿಷ್ಣುವರ್ಧನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ.." ಎಂದು ಅನಿರುದ್ಧ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಮೈಸೂರು ನಗರದ ಹೊರವಲಯದ ಎಚ್‌ಡಿ ಕೋಟೆ ರಸ್ತೆಯ ಹಾಲಾಳು ಗ್ರಾಮದ ಬಳಿ ಐದು ಎಕರೆ ಪ್ರದೇಶದಲ್ಲಿ ರೂ.11 ಕೋಟಿ ವೆಚ್ಚದಲ್ಲಿ ಸ್ಮಾರಕವನ್ನು ನಿರ್ಮೀಸಲಾಗಿದ್ದು, ಜನವರಿ ಅಂತ್ಯದ ವೇಳೆಗೆ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು ಎಂದು ಹೇಳಲಾಗುತ್ತಿದೆ.
ನಟನ ಚಲನಚಿತ್ರ ಪ್ರಯಾಣದ ಗ್ಯಾಲರಿ, ವಿಷ್ಣು ಅವರ ಅಪರೂಪದ ಫೋಟೋಗಳು, ವಿಷ್ಣು ಬಳಸುತ್ತಿದ್ದ ವಸ್ತುಗಳು, ಬಟ್ಟೆ ಇಲ್ಲಿ ಕಾಣಿಸಲಿವೆ. ಸಿನಿಮಾದಲ್ಲಿನ ಪ್ರಶಸ್ತಿಗಳೂ ಸ್ಮಾರಕದ ಮ್ಯೂಸಿಯಂನಲ್ಲಿರಲಿವೆ. ವಿಶೇಷವಾದ ವಿಷ್ಣು ಪುತ್ಥಳಿಯನ್ನೂ ನಿರ್ಮಿಸಲಾಗಿದೆ. ಸ್ಮಾರಕವು ಪ್ರವಾಸಿ ಆಕರ್ಷಣೆಯಾಗುವ ನಿರೀಕ್ಷೆಯಿದೆ.
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ನಟರ ಸ್ಮಾರಕಕ್ಕೆ ಸೆಪ್ಟೆಂಬರ್ 15, 2020 ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ಸ್ಮಾರಕದ ಕಾಮಗಾರಿ ಪೂರ್ಣಗೊಳ್ಳಲು ಸುಮಾರು 25 ತಿಂಗಳುಗಳ ಬೇಕಾಯಿತು.