ಪ್ರಧಾನಿ ಮೋದಿ ರೋಡ್ ಶೋ ವೇಳೆ ಬ್ಯಾರಿಕೇಡ್ ಹಾರಿ ಬಂದು ಹೂವಿನ ಹಾರ ನೀಡಿದ ಬಾಲಕ: ಎಸ್ ಪಿಜಿ ಭದ್ರತೆಯಲ್ಲಿ ಲೋಪ!

ಪ್ರಧಾನ ಮಂತ್ರಿಗಳ ಬೆಂಗಾವಲು ವಾಹನ ಚಲಿಸುವಾಗ ಏನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ಜನರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು.
ಪ್ರಧಾನ ಮಂತ್ರಿಗಳಿಗೆ ಹೂವಿನ ಹಾರ ನೀಡಿದ ಬಾಲಕ
ಪ್ರಧಾನ ಮಂತ್ರಿಗಳಿಗೆ ಹೂವಿನ ಹಾರ ನೀಡಿದ ಬಾಲಕ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಿನ್ನೆ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಮಾನ ನಿಲ್ದಾಣಕ್ಕೆ ಬಂದಿಳಿದು ಅಲ್ಲಿಂದ ಕಾರ್ಯಕ್ರಮ ನಡೆದ ರೈಲ್ವೆ ನಿಲ್ದಾಣ ಮೈದಾನದತ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅದರ ಪೂಟ್ ರೆಸ್ಟ್ ನಲ್ಲಿ ನಿಂತು ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಜನಸ್ತೋಮದತ್ತ ಕೈಬೀಸುತ್ತಾ, ಕೈಮುಗಿಯುತ್ತಾ ಸಾಗಿದರು.

ಪ್ರಧಾನ ಮಂತ್ರಿಯವರ ವಾಹನದ ಪಕ್ಕದಲ್ಲಿಯೇ ವಿಶೇಷ ಭದ್ರತಾ ಪಡೆ(SPG) ಸಿಬ್ಬಂದಿ ಸಾಗುತ್ತಿದ್ದರು. ಭದ್ರತಾ ಸಿಬ್ಬಂದಿಯ ಹತ್ತಿರ ಬ್ಯಾರಿಕೇಡ್ ಗಳು ಇದ್ದವು. ಇಷ್ಟೆಲ್ಲಾ ಭದ್ರತೆಯಿದ್ದರೂ ಅದೆಲ್ಲಿಂದ ಬಂದನೋ ಏನೋ ಒಬ್ಬ ಪುಟ್ಟ ಬಾಲಕ ಏಕಾಏಕಿ ಭದ್ರತೆಯನ್ನು ತೂರಿ ಪ್ರಧಾನಿಗಳ ಬಳಿ ಬಂದು ಹಾರ ಹಾಕಲು ಮುಂದಾದ. ಈ ವೇಳೆ ಬಾಲಕನ ಕೈಯಿಂದ ಪ್ರಧಾನಿಗಳು ಹಾರವನ್ನು ತೆಗೆದುಕೊಂಡರು. 

ತಕ್ಷಣ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ಬಾಲಕನನ್ನು ಆಚೆ ತಳ್ಳಿದರು. ಬಾಲಕ ಪ್ರಧಾನ ಮಂತ್ರಿಗಳು ಕಾರಿನಲ್ಲಿ ಕೈಬೀಸುತ್ತಾ ಬರುವಾಗ ಬ್ಯಾರಿಕೇಡ್ ಕೆಳಗೆ ತನ್ನ ತಂದೆಯ ಬಳಿ ನಿಂತಿದ್ದ. ಪೊಲೀಸರು ನಂತರ ಬಾಲಕ ಮತ್ತು ಆತನ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ಭದ್ರತಾ ಲೋಪ: ಇಲ್ಲಿ ಪುಟ್ಟ ಬಾಲಕ ಪ್ರಧಾನ ಮಂತ್ರಿಗಳಿಗೆ ಹೂವಿನ ಹಾರ ಹಾಕಲು ಬಂದ, ಆದರೆ ಇದು ಪ್ರಧಾನ ಮಂತ್ರಿಗಳ ಎಸ್ ಪಿಜಿ ಭದ್ರತೆಯಲ್ಲಿ ಲೋಪವಾಗಿರುವ ಮಾತುಗಳು ದಟ್ಟವಾಗಿ ಕೇಳಿಬರುತ್ತಿದೆ. ಆ ಬಗ್ಗೆಯೇ ಚರ್ಚೆಯಾಗುತ್ತಿದೆ. ಪ್ರಧಾನ ಮಂತ್ರಿಗಳು ಕಾರಿನಲ್ಲಿ ಕೈಬೀಸುತ್ತಾ ಗೋಕುಲ ರಸ್ತೆಯ ಮೂಲಕ ಹಾದುಹೋಗುವಾಗ ಈ ಘಟನೆ ನಡೆದಿದೆ.

ಬಾಲಕ ಭದ್ರತೆ ತೂರಿ ಹೂವಿನ ಹಾರ ನೀಡಿದ ನಂತರ ಎಸ್ ಪಿಜಿ ಅಧಿಕಾರಿ ಹಿಂದೆ ನಿಂತು ಸ್ಥಳೀಯ ಪೊಲೀಸರು ಬಾಲಕ ಮತ್ತು ಆತನ ಪೋಷಕರನ್ನು ತಕ್ಷಣ ವಶಕ್ಕೆ ಪಡೆದಿದ್ದರು. ಬಾಲಕ ಮತ್ತು ಪೋಷಕರನ್ನು ಗೋಕುಲ ರಸ್ತೆ ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆದೊಯ್ಯಲಾಯಿತು. ಬಾಲಕನ ಕುಟುಂಬ ಗೋಕುಲ ರಸ್ತೆಯ ಬಳಿ ವಾಸಿಸುತ್ತಿದೆ. ತಾವು ಪ್ರಧಾನಿ ಮೋದಿಯವರ ದೊಡ್ಡ ಅಭಿಮಾನಿಗಳಾಗಿದ್ದು ಹೀಗಾಗಿ ನಮ್ಮ ಮಗನ ಆಸೆ ಈಡೇರಿಸಲು ಹೂವಿನ ಹಾರ ಕೊಟ್ಟು ಪ್ರಧಾನಿಗಳ ಬಳಿಗೆ ಕಳುಹಿಸಿದೆವು ಎನ್ನುತ್ತಾರೆ.

ಪ್ರಧಾನ ಮಂತ್ರಿಗಳ ಬೆಂಗಾವಲು ವಾಹನ ಚಲಿಸುವಾಗ ಏನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ಜನರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಯಾರು ಕೂಡ ಬ್ಯಾರಿಕೇಡ್ ನುಗ್ಗಿ ಪ್ರಧಾನಿಗಳಿಗೆ ಹೂವಿನ ಹಾರ ಹಾಕಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು ಎಂದು ಹುಬ್ಬಳ್ಳಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ಕೆಲವು ಸಂಘಟನೆಗಳ ಸದಸ್ಯರು ಹೂವಿನ ದಳಗಳನ್ನು ತಂದಿದ್ದರು. ಅವುಗಳನ್ನು ಸರಿಯಾಗಿ ತಪಾಸಣೆ ಮಾಡಿ ಬಿಡಲಾಯಿತು. ಪೊಲೀಸರು ಜನರಿಗೆ ಮತ್ತೆ ಮತ್ತೆ ಹೂ ಹಾರಗಳನ್ನು ಎಸೆಯಬೇಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡುತ್ತಲೇ ಇದ್ದರು. ಆದರೂ ಈ ಬಾಲಕನನ್ನು ಆತನ ಪೋಷಕರು ಕೆಂಪು ವಲಯದೊಳಗೆ ಹೋಗಲು ಬಿಟ್ಟಿದ್ದಾರೆ ಎನ್ನುತ್ತಾರೆ ಪೊಲೀಸರು.

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ರಮಣ್ ಗುಪ್ತ, ಬಾಲಕನ ಪೋಷಕರಿಂದ ವಿವರಣೆ ಕೇಳಿ ಬರೆದುಕೊಳ್ಳಲಾಗಿದ್ದು ಭದ್ರತೆಯಲ್ಲಿ ಆಗಿರುವ ಲೋಪ ಕುರಿತು ಪರೀಕ್ಷಿಸಲು ಇಲಾಖೆಯ ತನಿಖೆಗೆ ಆದೇಶಿಸಲಾಗಿದೆ. ಪೋಷಕರನ್ನು ವಿಚಾರಣೆ ನಡೆಸಿದ್ದು ಅವರ ವಿರುದ್ಧವಾಗಲಿ, ಬಾಲಕನ ಮೇಲಾಗಲಿ ಇದುವರೆಗೆ ಕೇಸು ದಾಖಲಿಸಿಲ್ಲ. ಘಟನೆ ನಡೆಯುವ ವೇಳೆ ಕರ್ತವ್ಯದಲ್ಲಿದ್ದ ಸಿಬ್ಬಂದಿ ವಿರುದ್ಧ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೆನಪಿಸಿದ ರಾಜೀವ್ ಗಾಂಧಿ ಹತ್ಯೆ: ಅದು ಮೇ 21, 1991, ತಮಿಳು ನಾಡಿನ ಶ್ರೀ ಪೆರಂಬದೂರಿಗೆ ಆಗಮಿಸಿದ ಪ್ರಧಾನಿ ರಾಜೀವ್ ಗಾಂಧಿ ಜನರ ಮಧ್ಯೆ ಬೆರೆದು ಮಾತನಾಡುತ್ತಿದ್ದಾಗ ಎಲ್ ಟಿಟಿಇ ಬೆಂಬಲಿಗರು ರಾಜೀವ್ ಗಾಂಧಿಯವರಿಗೆ ಹೂವಿನ ಹಾರ ಹಾಕಿದರು. ಹಾರದಲ್ಲಿ ಆತ್ಮಹತ್ಯಾ ಬಾಂಬ್ ಇತ್ತು. ಅದು ಸ್ಫೋಟಗೊಂಡು ರಾಜೀವ್ ಗಾಂಧಿಯವರ ದೇಹ ಛಿದ್ರವಾಗಿ ಹೋಯಿತು. ಅಂದು ಎಸ್ ಪಿಜಿ ಭದ್ರತೆಯಲ್ಲಿ ಲೋಪದೋಷವಾಗಿ ರಾಜೀವ್ ಗಾಂಧಿಯವರು ಹತ್ಯೆಯಾದರು ಎಂಬ ಮಾತುಗಳು ಕೇಳಿಬಂದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com