ಹೊಸಪೇಟೆ: ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್'ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯದ್ದು ದೇಶದಲ್ಲೇ ಅತೀ ದೊಡ್ಡ ಭ್ರಷ್ಟ ಸರ್ಕಾರವಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್'ನ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಸರ್ಕಾರದಿಂದ ಜನರು ಬೇಸತ್ತು ಹೋಗಿದ್ದಾರೆ. 40 ಪರ್ಸೆಂಟ್ ಕಮಿಷನ್ ಮತ್ತು ಪೇ ಸಿಎಂ ವಿವಾದಗಳಲ್ಲಿ ಸರ್ಕಾರ ಮುಳುಗಿದ್ದು, ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಬಿಜೆಪಿ ಮರೆತರೂ ಮೃತ ಅಧಿಕಾರಿಗಳ ಕುಟುಂಬದೊಂದಿಗೆ ನಾವು ಸದಾ ಇರುತ್ತೇವೆ. ಈ ಸಾವುಗಳಿಗೆ ಬಿಜೆಪಿ ಸರ್ಕಾರವೇ ಹೊಣೆಯಾಗಬೇಕು ಎಂದು ತಿಳಿಸಿದ್ದಾರೆ.
"ಮುಖ್ಯಮಂತ್ರಿ ಹುದ್ದೆಯನ್ನು 2,500 ಕೋಟಿ ರೂ.ಗೆ ಖರೀದಿಸಲಾಗಿದೆ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗಪಡಿಸಿದ್ದಾರೆ. ಸಚಿವ ಮುರುಗೇಶ್ ನಿರಾಣಿ ಕೂಡ ಭ್ರಷ್ಟ ಸಚಿವರೆಂದು ಆರೋಪಿಸಿದ್ದಾರೆ. ಇನ್ನೊಬ್ಬ ನಾಯಕ ಸಿಪಿ ಯೋಗಿಶ್ವರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಗೂಂಡಾ ಎಂದು ಕರೆದಿದ್ದಾರೆ. ಸ್ಯಾಂಟ್ರೊ’ ರವಿ ಸರ್ಕಾರವನ್ನು ನಡೆಸುತ್ತಿದ್ದಾನೆ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳ ವರ್ಗಾವಣೆಯನ್ನು ನಿಯಂತ್ರಿಸುತ್ತಾನೆ. ಈ ಸರ್ಕಾರ ಅಧೋಗತಿಗೆ ತಲುಪಿದೆ. ಬಿಜೆಪಿ ರೌಡಿಗಳ ಹಾಗೂ ಬದ್ಮಾಶ್ ಗಳ ಪಾರ್ಟಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 22 ಜಿಲ್ಲೆಗಳಲ್ಲಿ ಯಾತ್ರೆ ನಡೆಯಲಿದೆ. ಯಾತ್ರೆ ವೇಳೆ ಜನರ ಸಮಸ್ಯೆಗಳನ್ನು ಆಲಿಸಲಾಗುತ್ತದೆ. 2013 ರಲ್ಲಿ ನಮ್ಮ ಸರ್ಕಾರ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಲಾಗಿದೆ. ಈ ಕುರಿತು ಚರ್ಚೆ ನಡೆಸಲು ಸಿಎಂ ಬೊಮ್ಮಾಯಿ ಅವರನ್ನು ಬಹಿರಂಗವಾಗಿ ಆಹ್ವಾನಿಸುತ್ತೇನೆ. 2018 ರಲ್ಲಿ ಬಿಜೆಪಿ 600 ಭರವಸೆಗಳನ್ನು ನೀಡಿದ್ದು, ಇದರಲ್ಲಿ ಎಷ್ಟು ಭರವಸೆಗಳನ್ನು ಈಡೇರಿಸಿದ್ದಾರೆ? ಎಂದು ಪ್ರಸ್ನಿಸಿದ್ದಾರೆ.
ಮುಖ್ಯಮಂತ್ರಿಗಳ ಸುಳ್ಳು ಜನರ ಮುಂದೆಯೇ ಇದೆ. ತುಂಗಭದ್ರಾ ಅಣೆಕಟ್ಟಿನಲ್ಲಿ ಸುಮಾರು 37 ಟಿಎಂಸಿ ಅಡಿ ನೀರು ಸಂಗ್ರಹವಾಗಲು ಸಾಧ್ಯವಾಗದೇ ಹೂಳು ತುಂಬಿಕೊಂಡಿದೆ. ಇದರಿಂದ ಈ ವರ್ಷ 200 ಟಿಎಂಸಿ ಅಡಿ ನೀರು ವ್ಯರ್ಥವಾಗಿದೆ. ಬಿಜೆಪಿ ಪ್ರಸ್ತಾಪಿಸಿದ ಪರ್ಯಾಯ ಅಣೆಕಟ್ಟುಗಳ ಕಥೆ ಏನಾಯಿತು? ನಾವು ಅಧಿಕಾರಕ್ಕೆ ಬಂದರೆ ಪರ್ಯಾಯ ಜಲಾಶಯ ನಿರ್ಮಿಸುತ್ತೇವೆಂದು ತಿಳಿಸಿದರು,
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಾತನಾಡಿ, ಮಹಿಳೆಯರ ಕಷ್ಟಗಳನ್ನು ಅರಿತಿರುವುದರಿಂದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರು ಗೃಹ ಲಕ್ಷ್ಮಿ ಯೋಜನೆಯಡಿ ಕುಟುಂಬದ ಒಬ್ಬ ಮಹಿಳೆಗೆ ಮಾಸಿಕ 2,000 ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದರು. ಆದರೆ, ಜನರ ಗಮನ ಬೇರೆಡೆಗೆ ಸೆಳೆಯಲು ಹಬ್ಬ ಮುಗಿದರೂ ಕೂಡ ಸರ್ಕಾರ ಸಂಕ್ರಾಂತಿ ಜಾಹೀರಾತುಗಳನ್ನು ನೀಡುತ್ತಿದೆ. ಕಳೆದ 70 ವರ್ಷಗಳ ಕಾಲ ಕಾಂಗ್ರೆಸ್ ಮಾಡಿದ್ದನ್ನೆಲ್ಲಾ ಬಿಜೆಪಿ ಮಾರಾಟ ಮಾಡುತ್ತಿದೆ. ಪ್ರಕರಣಗಳ ಲೆಕ್ಕಿಸದೆ ಸರ್ಕಾರ ಬಿ ರಿಪೋರ್ಟ್ ಸಲ್ಲಿಸುತ್ತಿದೆ. ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಎಲ್ಲಾ ಪ್ರಕರಣಗಳನ್ನು ಪುನಃ ತೆರೆಯುತ್ತದೆ ಎಂದರು.
Advertisement