ಕೋಲಿ ಸಮಾಜವನ್ನು ಎಸ್‍ಟಿಗೆ ಸೇರಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ, ಸಮಾಜ ಬೆಳೆಯಲು ಗುರು ಮತ್ತು ಗುರುಪೀಠ ಬೇಕು: ಸಿಎಂ ಬೊಮ್ಮಾಯಿ
ಸಮಾಜದ ಬೆಳವಣಿಗೆಗೆ ಗುರು ಮತ್ತು ಗುರುಪೀಠ ಬೇಕು, ಇಲ್ಲಿ ಗುರುಪೀಠ ಸ್ಥಾಪನೆಗೆ, ಅಭಿವೃದ್ಧಿಗೆ ಏನೆಲ್ಲ ಅಗತ್ಯವಿದೆ ಅದನ್ನು ನಮ್ಮ ಸರ್ಕಾರ ಮಾಡುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
Published: 24th January 2023 04:41 PM | Last Updated: 24th January 2023 04:41 PM | A+A A-

ದೇವಲ ಗಾಣಗಾಪುರದಲ್ಲಿರುವ ಹೇರೂರ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವದಲ್ಲಿ ಭಾಗಿಯಾಗಿ, ವಿಠ್ಠಲ ಹೇರೂರರ ಕಂಚಿನಮೂರ್ತಿ ಅನಾವರಣ ಹಾಗೂ ವಿಠ್ಠಲ ಹೇರೂರರ ಗೀತೆಗಳ ಧ್ವನಿ ಮುದ್ರಿಕೆಯನ್ನು ಬಿಡುಗಡೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ
ಅಫ್ಜಲಪುರ: ಸಮಾಜದ ಬೆಳವಣಿಗೆಗೆ ಗುರು ಮತ್ತು ಗುರುಪೀಠ ಬೇಕು, ಇಲ್ಲಿ ಗುರುಪೀಠ ಸ್ಥಾಪನೆಗೆ, ಅಭಿವೃದ್ಧಿಗೆ ಏನೆಲ್ಲ ಅಗತ್ಯವಿದೆ ಅದನ್ನು ನಮ್ಮ ಸರ್ಕಾರ ಮಾಡುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇಂದು ಕಲ್ಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಸುಕ್ಷೇತ್ರ ದೇವಲ ಗಾಣಗಾಪುರ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆಯನ್ನು ಸಲ್ಲಿಸಿದ ಮುಖ್ಯಮಂತ್ರಿಗಳು ನಂತರ ದೇವಲ ಗಾಣಗಾಪುರದಲ್ಲಿರುವ ಹೇರೂರ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವದಲ್ಲಿ ಭಾಗಿಯಾಗಿ, ವಿಠ್ಠಲ ಹೇರೂರರ ಕಂಚಿನ ಮೂರ್ತಿ ಅನಾವರಣ ಹಾಗೂ ವಿಠ್ಠಲ ಹೇರೂರರ ಗೀತೆಗಳ ಸಿಡಿ ಬಿಡುಗಡೆ ಮಾಡಿದರು.
ನಂತರ ವೇದಿಕೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಸಮಾಜದ ಬೆಳವಣಿಗೆಗೆ ಗುರುಪೀಠ ಅತ್ಯಂತ ಅಗತ್ಯ. ಗುರುಪೀಠವನ್ನು ಬೆಳೆಸುವ ಕೆಲಸ ನನ್ನ ತವರು ಜಿಲ್ಲೆ ಹಾವೇರಿಯ ಚೌಡನಾಪುರದಲ್ಲಿ ಆಗುತ್ತಿರುವುದು ನನಗೆ ಅತ್ಯಂತ ಹೆಮ್ಮೆಯ ವಿಷಯ. ಗುರುಪೀಠವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವ ಕೆಲಸ ನಮ್ಮ ಮೇಲಿದೆ.
ಎಲ್ಲ ಸಮುದಾಯಗಳ ಬೇಡಿಕೆ ಹೆಚ್ಚಾಗಿದೆ: ಇದು 21ನೇ ಶತಮಾನ, ಸಮಾಜದಲ್ಲಿ ಜನರ ಬದುಕು, ಆಸೆ, ಆಕಾಂಕ್ಷೆಗಳು, ಬೇಡಿಕೆಗಳು ಹೆಚ್ಚಾಗುತ್ತಿವೆ. ಸಮಾಜದ ಎಲ್ಲ ವರ್ಗದ ಜನ ಮೇಲೆ ಬರಬೇಕು. ಸಮಾಜದ ಎಲ್ಲ ವರ್ಗದ ಜನರು ಶೈಕ್ಷಣಿಕವಾಗಿ,ಸಾಮಾಜಿಕವಾಗಿ, ಆರ್ಥಿಕವಾಗಿ ಬೆಳೆಯಬೇಕು ಸ್ವಾವಲಂಬನೆ ಬದುಕು ಬದುಕಬೇಕು ಎಂಬ ಆಶೋತ್ತರಗಳು ಯುವಕರಲ್ಲಿದೆ. ನಮ್ಮ ಹಕ್ಕುಗಳನ್ನು ಕೇಳಬೇಕು ಎಂಬ ಜಾಗೃತಿ ಜನರಲ್ಲಿ ಮೂಡಿದೆ. ಇದು ಮೂಡಿದ್ದರಿಂದಲೇ ನ್ಯಾಯ ಸಿಗುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದರು.
ಕೋಲಿ ಸಮಾಜ ಎಸ್ ಟಿಗೆ ಸೇರಿಸಲು ಪ್ರಸ್ತಾವನೆ: ಕೋಲಿ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಈಗಾಗಲೇ ಕಳುಹಿಸಲಾಗಿದೆ. ಕೋಲಿ ಶಾಸ್ತ್ರದ ಅಧ್ಯಯನ ಬಗ್ಗೆ ವಿವರಗಳನ್ನು ಅವರು ಕೇಳಿದ್ದಾರೆ. ಎಲ್ಲ ವಿವರಗಳನ್ನು ಕಳುಹಿಸಲಾಗಿದೆ. ರಿಜಿಸ್ಚರ್ ಜನರಲ್ ಆಫ್ ಇಂಡಿಯಾಕ್ಕೆ ಕಳುಹಿಸಲಾಗಿದೆ, ಆರ್ಥಿಕ ಮತ್ತು ಸಾಮಾಜಿಕ ಇಲಾಖೆಗೆ ಬಂದಿದೆ. ಎರಡು ಬಾರಿ ಭೇಟಿಯಾಗಿ ತಿಳುವಳಿಕೆ ಕೊಟ್ಟಿದ್ದೇವೆ. ಬಂದ ಕೂಡಲೇ ಕೇಂದ್ರ ಸಚಿವ ಸಂಪುಟದ ಮುಂದಿಟ್ಟು ಅನುಮೋದನೆ ಪಡೆಯುತ್ತೇವೆ ಎಂದು ಸಿಎಂ ಘೋಷಿಸಿದರು.
ಮೂರು ಕ್ಷೇತ್ರಗಳಲ್ಲಿ ಬದ್ಧತೆಯಿಂದ ಕೆಲಸ: ಈ ಸಮಾಜದ ಶಿಕ್ಷಣ, ಉದ್ಯೋಗ ಮತ್ತು ಸಶಕ್ತೀಕರಣ ಕ್ಷೇತ್ರದಲ್ಲಿ ಸರ್ಕಾರ ಬದ್ಧತೆಯಿಂದ ಕೆಲಸ ಮಾಡುತ್ತಿದ್ದು, ಅದಕ್ಕೆ ಅತಿ ಹೆಚ್ಚಿನ ಅನುದಾನವನ್ನು ನೀಡುತ್ತದೆ ಎಂದರು. ಸಮಾಜದ ವಿಚಾರ ಬಂದಾಗ ಜಾತಿ, ಮತ, ಪಂಗಡ, ಧರ್ಮ, ಪಕ್ಷ ಎಲ್ಲವನ್ನೂ ಬಿಟ್ಟು ಸಮಾಜದ ಒಳಿತನ್ನು ಮಾಡಬೇಕು. ಕಾಲಕ್ಕೆ ಗೌರವ ಕೊಟ್ಟು ಕಾಲಮಿತಿಯಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹಾವೇರಿಯ ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮ ಸ್ವಾಮೀಜಿ, ಅಲ್ಲಮ ಪ್ರಭು ಪೀಠದ ಮಲ್ಲಣ್ಣಪ್ಪ ಸ್ವಾಮೀಜಿ, ಶಾಸಕರಾದ ಎಂ.ವೈ ಪಾಟಿಲ್, ದತ್ತಾತ್ರೆಯ ಪಾಟೀಲ್ ರೇವೂರು, ವಿಧಾನ ಪರಿಷತ್ ಸದಸ್ಯರಾದ ಬಾಬುರಾವ್ ಚಿಂಚನಸೂರ್, ಮಾಜಿ ಸಚಿವ ಮಾಲಿಕಯ್ಯ ಗುತ್ತೆದಾರ, ಪ್ರಮೋದ್ ಮದ್ವರಾಜ್, ತಿಪ್ಪಣ್ಣ ಕಮಕನೂರು ಹಾಗೂ ಮತ್ತಿತರರು ಹಾಜರಿದ್ದರು.