ಬೆಂಗಳೂರು: ಕೆಆರ್ ಮಾರ್ಕೆಟ್ ಫ್ಲೈ ಓವರ್‌ನಿಂದ ನೋಟಿನ ಮಳೆ ಸುರಿಸಿದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಸಿಟಿ ಮಾರ್ಕೆಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಪತ್ತೆ ಹಚ್ಚಿದ್ದಾರೆ. ವಿಚಾರಣೆಗೆ ಒಳಪಡಿಸಿದಾಗ, ತಾನು Vdot9events.com ನ ಸಂಸ್ಥಾಪಕ ಮತ್ತು ಸಿಇಒ ಎಂದು ಹೇಳಿದ್ದಾರೆ.
Published: 25th January 2023 08:22 AM | Last Updated: 25th January 2023 08:22 AM | A+A A-

ಕೆಆರ್ ಮಾರ್ಕೆಟ್ ಫ್ಲೈ ಓವರ್ ನಿಂದ ಹಣ ಎಸೆದ ವ್ಯಕ್ತಿ
ಬೆಂಗಳೂರು: ನಗರದ ಸಿಟಿ ಮಾರ್ಕೆಟ್ ಪ್ರದೇಶದ ಜನರು ಮಂಗಳವಾರ ಬೆಳಿಗ್ಗೆ ತಾವು ಕಂಡದ್ದನ್ನು ನಂಬಲು ಸಾಧ್ಯವಾಗಲಿಲ್ಲ. ಮೇಲ್ಸೇತುವೆಯಿಂದ ಕೆಳಗೆ 10 ರೂಪಾಯಿ ಮೌಲ್ಯದ ನೋಟುಗಳ ಮಳೆ ಸುರಿಯುವುದನ್ನು ಕಂಡು ಆಶ್ಚರ್ಯಚಕಿತರಾದರು. ಮೊದಲಿಗೆ ಇದು ತಮಾಷೆಯಂತೆ ಕಂಡುಬಂದರೂ, ಅದು ನಿಜವಾದ ನೋಟುಗಳು ಎಂದು ತಿಳಿದ ನಂತರ ಜನರು ನಗದು ಸಂಗ್ರಹಿಸಲು ಪರಸ್ಪರ ಮುಗಿ ಬೀಳಲಾರಂಭಿಸಿದರು.
ಫ್ಲೈಓವರ್‌ನಿಂದ ಹಣ ಎಸೆಯುತ್ತಿದ್ದ ವ್ಯಕ್ತಿಯು ಸೂಟ್ ಧರಿಸಿದ್ದನು ಮತ್ತು ಆತನ ಕುತ್ತಿಗೆಗೆ ಗೋಡೆ ಗಡಿಯಾರವನ್ನು ನೇತುಹಾಕಿಕೊಂಡಿದ್ದನು. ಅರುಣ್ ಅಕಾ ಆ್ಯಂಕರ್ ಅರುಣ್ ಎಂದು ಗುರುತಿಸಲಾಗಿದ್ದು, ದ್ವಿಚಕ್ರ ವಾಹನದಲ್ಲಿ ಬಂದು ಬೆಳಗ್ಗೆ 10.45ರ ಸುಮಾರಿಗೆ ಫ್ಲೈ ಓವರ್ ಮೇಲೆ ನಿಲ್ಲಿಸಿದ್ದಾರೆ. ನಂತರ ತನ್ನ ಬಳಿಯಿದ್ದ ಚೀಲದಿಂದ ನೋಟುಗಳನ್ನು ಫ್ಲೈಓವರ್‌ನಿಂದ ಕೆಳಗೆ ಎಸೆದಿದ್ದಾರೆ.
ಅವರ ಈ ನಡೆಯು ಫ್ಲೈಓವರ್ ಮೇಲಿದ್ದ ಪ್ರಯಾಣಿಕರ ಗಮನವನ್ನೂ ಸೆಳೆಯಿತು. ಕೆಲವರು ಅವರನ್ನು ತಡೆದು ನಿಲ್ಲಿಸಿ ನಗದನ್ನು ತಮಗೇ ನೀಡುವಂತೆ ಕೇಳಿದರು. ಇದನ್ನು ಕೇಳಿಸಿಕೊಳ್ಳದ ಅರುಣ್ ಮಾತ್ರ ಫ್ಲೈಓವರ್‌ನ ಎರಡೂ ಬದಿಯಿಂದ ನೋಟುಗಳನ್ನು ಕೆಳಗೆ ಎಸೆದಿದ್ದಾರೆ. ಅದಾದ ಕೆಲವೇ ನಿಮಿಷಗಳಲ್ಲಿ ಬೈಕ್ ಸ್ಟಾರ್ಟ್ ಮಾಡಿ ವೇಗವಾಗಿ ಹೊರಟು ಹೋಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಕೆಆರ್ ಮಾರ್ಕೆಟ್ ಫ್ಲೈ ಓವರ್ ನಿಂದ ನೋಟಿನ ಮಳೆ ಸುರಿಸಿದ ವ್ಯಕ್ತಿ; ಹಣ ಪಡೆಯಲು ಮುಗಿಬಿದ್ದ ಜನ; ಇಷ್ಟಕ್ಕೂ ಯಾರು ಈತ?
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಸಿಟಿ ಮಾರ್ಕೆಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಪತ್ತೆ ಹಚ್ಚಿದ್ದಾರೆ. ವಿಚಾರಣೆಗೆ ಒಳಪಡಿಸಿದಾಗ, ತಾನು Vdot9events.com ನ ಸಂಸ್ಥಾಪಕ ಮತ್ತು ಸಿಇಒ ಎಂದು ಹೇಳಿದ್ದಾರೆ.
ತಾನು ಬಿಸಿನೆಸ್ ಕೋಚ್, ಮೋಟಿವೇಶನಲ್ ಸ್ಪೀಕರ್, ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದೇನೆ ಮತ್ತು ಕರ್ನಾಟಕದ ಮೊದಲ ಈವೆಂಟ್ ಬ್ಲಾಗರ್ ಎಂದು ಅರುಣ್ ಪೊಲೀಸರಿಗೆ ತಿಳಿಸಿದ್ದಾರೆ. ನಾಗರಬಾವಿ ನಿವಾಸಿಯಾದ ಅರುಣ್ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದರು. ಆದರೆ, ಸರಿಯಾದ ಸಮಯದಲ್ಲಿ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ. ಒಳ್ಳೆಯ ಉದ್ದೇಶದಿಂದಲೇ ಮಾಡಿದ್ದೇನೆ ಎಂದು ಹೇಳಿದರು.
ಕನಿಷ್ಠ 3 ಸಾವಿರ ನಗದು ಎಸೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಅವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಸಾರ್ವಜನಿಕ ದಾರಿಯಲ್ಲಿ ಅಪಾಯ ಅಥವಾ ಅಡ್ಡಿಪಡಿಸಿದ ಕಾರಣಕ್ಕಾಗಿ ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆತನ ಕೃತ್ಯದ ಹಿಂದಿನ ಕಾರಣ ತಿಳಿಯಲು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.