ಜಿಎಸ್ಟಿ ಹೆಸರಿನಲ್ಲಿ ಖಾಸಗಿ ಕಂಪನಿಗೆ ರೂ.9.6 ಕೋಟಿ ವಂಚನೆ: ಇಬ್ಬರ ಬಂಧನ
ಜಿಎಸ್ಟಿ ತೆರಿಗೆ ಕಟ್ಟಬೇಕೆಂದು ಹೇಳಿ ಅಸೋಸಿಯೇಟ್ ಚಾರ್ಟರ್ಡ್ ಅಕೌಂಟೆಂಟ್ ಸೋಗಿನಲ್ಲಿ ಖಾಸಗಿ ಸಂಸ್ಥೆಯೊಂದರ ಮಾಲೀಕರಿಗೆ ಬರೋಬ್ಬರಿ ರೂ.9.6 ಕೋಟಿ ವಂಚಿಸಿದ್ದ ಚಾರ್ಟೆಡ್ ಅಕೌಂಟೆಂಟ್ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಸಂಜಯನಗರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
Published: 27th January 2023 01:04 PM | Last Updated: 27th January 2023 01:04 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಜಿಎಸ್ಟಿ ತೆರಿಗೆ ಕಟ್ಟಬೇಕೆಂದು ಹೇಳಿ ಅಸೋಸಿಯೇಟ್ ಚಾರ್ಟರ್ಡ್ ಅಕೌಂಟೆಂಟ್ ಸೋಗಿನಲ್ಲಿ ಖಾಸಗಿ ಸಂಸ್ಥೆಯೊಂದರ ಮಾಲೀಕರಿಗೆ ಬರೋಬ್ಬರಿ ರೂ.9.6 ಕೋಟಿ ವಂಚಿಸಿದ್ದ ಚಾರ್ಟೆಡ್ ಅಕೌಂಟೆಂಟ್ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಸಂಜಯನಗರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ನಿಖಿಲ್ ಹಾಗೂ ವಿನಯ್ ಬಾಬು ಬಂಧಿತ ಆರೋಪಿಗಳಾಗಿದ್ದಾರೆ. ಪ್ರಕರಣ ಸಂಬಂಧ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು ಇವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಕೊರಿಯಾ ಮೂಲದ ಟರ್ಮಿನಸ್ ಡೆಚಾಂಗ್ ಸೀಟ್ ಎಂಬ ಆಟೋಮೋಟಿವ್ ಖಾಸಗಿ ಕಂಪನಿಗೆ ಅಸೋಸಿಯೇಟ್ ಚಾರ್ಟರ್ಡ್ ಅಕೌಂಟೆಂಟ್ ಆಗಿ ಇಬ್ಬರು ಸೇರಿಕೊಂಡಿದ್ದರು. ಹೀಗೆ, ಸೇರಿಕೊಂಡವರು ಜಿಎಸ್ಟಿ ತೆರಿಗೆ ಕಟ್ಟಬೇಕೆಂದು ಕಂಪನಿ ಮಾಲೀಕರ ಬಳಿ ಸುಮಾರು 9 ಕೋಟಿ 60 ಲಕ್ಷ ಹಣವನ್ನ ಹಂತ ಹಂತವಾಗಿ ಪಡೆದಿದ್ದಾರೆ.
ಕಂಪನಿ ಆಂತರಿಕ ಲೆಕ್ಕಪರಿಶೋಧನೆ ವರದಿ ನೀಡಿದ್ದ ಆರೋಪಿ ನಿಖಿಲ್, 9 ಕೋಟಿಗೂ ಹೆಚ್ಚು ಜಿಎಸ್ಟಿ ಕಟ್ಟಬೇಕೆಂದು ವರದಿ ನೀಡಿದ್ದ. ನಿಖಿಲ್ ವರದಿ ಅನ್ವಯ ಹಂತ ಹಂತವಾಗಿ ಮಾಲೀಕರು ಜಿಎಸ್ಟಿ ಕಟ್ಟಿದ್ದರು. ಇತ್ತೀಚೆಗೆ ಆರೋಪಿಗಳ ಲೆಕ್ಕದ ಬಗ್ಗೆ ಕಂಪನಿ ಮಾಲೀಕರಿಗೆ ಅನುಮಾನ ಬಂದಿದೆ. ಬಳಿಕ ಬೇರೊಬ್ಬ ಲೆಕ್ಕಾಧಿಕಾರಿ ಬಳಿ ಪರಿಶೀಲನೆ ನಡೆಸಿದಾಗ, ಆರೋಪಿಗಳ ಕೃತ್ಯ ಬಯಲಾಗಿದೆ.
ಈ ಬಗ್ಗೆ ಸತ್ಯ ಗೊತ್ತಾಗುತ್ತಿದ್ದಂತೆ ಮಾಲೀಕ ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ನಂತರ ಪ್ರಕರಣವು ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಹಿನ್ನೆಲೆ ವಂಚನೆಯ ಪ್ರಕರಣವನ್ನು ಸದಾಶಿವನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಪ್ರಕರಣ ತನಿಖೆ ಕೈಗೆತ್ತಿಕೊಂಡ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮೂವರು ಆರೋಪಿಗಳಿಗಾಗಿ ತೀವ್ರ ಶೋಧನೆ ನಡೆಸುತ್ತಿದ್ದಾರೆ.
ಈ ನಡುವೆ ಮಾಲೀಕರಿಂದ ಪಡೆದ ಹಣದಲ್ಲಿ ಆರೋಪಿಗಳು ರೂ.3 ಕೋಟಿ ಮೌಲ್ಯದ ಭೂಮಿಯನ್ನು ಖರೀದಿ ಮಾಡಿದ್ದು, ಕೆಲ ಹಣವನ್ನು ವೈಯಕ್ತಿಕ ಕೆಲಸಗಳಿಗೆ ಬಳಕೆ ಮಾಡಿಕೊಂಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.