ಬಿಎಂಟಿಸಿಗೆ ಮತ್ತೊಂದು ಬಲಿ: ದ್ವಿಚಕ್ರ ವಾಹನ ಸವಾರ ಸಾವು
ನಗರದಲ್ಲಿ ಬಿಎಂಟಿಸಿ ಬಸ್ಸಿನಡಿಗೆ ಸಿಲುಕಿ ಮತ್ತೊಬ್ಬರು ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಯಶವಂತಪುರದ ಸತ್ವ ಅಪಾರ್ಟ್ಮೆಂಟ್ ಬಳಿ ಅಪಘಾತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈಗ ಮತ್ತೆ ಬಿಎಂಟಿಸಿ ಬಸ್ಗೆ ಮತ್ತೊಂದು ಬಲಿ ಸಂಭವಿಸಿದೆ.
Published: 28th January 2023 07:33 AM | Last Updated: 28th January 2023 07:47 AM | A+A A-

ಬಿಎಂಟಿಸಿ ಬಸ್ಸು
ಬೆಂಗಳೂರು: ನಗರದಲ್ಲಿ ಬಿಎಂಟಿಸಿ ಬಸ್ಸಿನಡಿಗೆ ಸಿಲುಕಿ ಮತ್ತೊಬ್ಬರು ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಯಶವಂತಪುರದ ಸತ್ವ ಅಪಾರ್ಟ್ಮೆಂಟ್ ಬಳಿ ಅಪಘಾತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈಗ ಮತ್ತೆ ಬಿಎಂಟಿಸಿ ಬಸ್ಗೆ ಮತ್ತೊಂದು ಬಲಿ ಸಂಭವಿಸಿದೆ. ನಾಗವಾರ-ಯಲಹಂಕ ಮಾರ್ಗದಲ್ಲಿ ಸರಣಿ ಅಪಘಾತವಾಗಿದೆ. ಎರಡು ಕಾರು, ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಹೊಡೆದಿದ್ದು ಅಪಘಾತದಲ್ಲಿ ಓರ್ವರು ಮೃತಪಟ್ಟಿದ್ದಾರೆ.
ನಾಗವಾರ-ಯಲಹಂಕ ಮಾರ್ಗದಲ್ಲಿ ಭಾರತೀಯ ಸಿಟಿ ಕ್ರಾಸ್ ಬಳಿ ಸರಣಿ ಅಪಘಾತವಾಗಿದ್ದು, ಎರಡು ಕಾರು, ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಹೊಡೆದು ಅಪಘಾತದಲ್ಲಿ ಬೈಕ್ ಸವಾರ ಅಯೂಬ್ (35) ಮೃತಪಟ್ಟಿದ್ದಾರೆ. ನಿನ್ನೆ ಸಂಜೆ 7.30 ರ ಸುಮಾರಿಗೆ ಘಟನೆ ನಡೆದಿದೆ.
ನಾಗವಾರ ಹಾಗೂ ಯಲಹಂಕ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ ಬೆಳ್ಳಳ್ಳಿ ಕಡೆಯಿಂದ ಹೆಗಡೆನಗರ ಮಾರ್ಗವಾಗಿ ಹೋಗುತ್ತಿತತು. ಇದೇ ಸಮಯದಲ್ಲಿ ಭಾರತೀಯ ಸಿಟಿ ಜಂಕ್ಷನ್ ಬಳಿ ಟ್ರಾಫಿಕ್ ವಾರ್ಡನ್ ಸೂಚನೆ ಮೇರೆಗೆ ಬೈಕ್ಗಳು ನಿಂತಿದ್ದವು. ಈ ವೇಳೆ ಹಿಂದೆಯಿಂದ ಅತೀ ವೇಗದಲ್ಲಿ ಬಂದ ಬಿಎಂಟಿಸಿ ಬಸ್, ಚಾಲಕನ ನಿಯಂತ್ರಣ ತಪ್ಪಿ 2 ಕಾರುಗಳಿಗೆ ಡಿಕ್ಕಿ ಹೊಡೆದಿದೆ ನಂತರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ನಾಲ್ವರಿಗೆ ಗಾಯಗಳಾಗಿದ್ದು ಗಾಯಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಅಯೂಬ್ ಮೃತಪಟ್ಟಿದ್ದಾರೆ. ರಫಿಯುಲ್ಲಾ ಖಾನ್, ಮುಸಾದ್ಧೀಕ್, ಮುನ್ನಾವರ್ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಲಕ ಹಾಗೂ ಬಸ್ಸನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಬ್ರೇಕ್ ವೈಫಲ್ಯದಿಂದ ಅಪಘಾತ ಸಂಭವಿಸಿದ್ದಾಗಿ ಚಾಲಕ ಗೋವಿಂದರಾಜು ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.