ಕೊಕ್ಕರೆ ಬೆಳ್ಳೂರು ಪಕ್ಷಿಧಾಮದಲ್ಲಿ ಚಿರತೆ ಹಾವಳಿ: ಆತಂಕದಲ್ಲಿ ಗ್ರಾಮಸ್ಥರು

ಪಕ್ಷಿಗಳ ಸಂರಕ್ಷಣೆಗೆ ಮೀಸಲಾಗಿರುವ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರಿನಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಪಕ್ಷಿಗಳ ಸಂರಕ್ಷಣೆಗೆ ಮೀಸಲಾಗಿರುವ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರಿನಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಗ್ರಾಮದಲ್ಲಿ ಬೆಳ್ಳಂಬೆಳಿಗ್ಗೆಯೇ ಚಿರತೆಗಳು ಅಡ್ಡಾಡುತ್ತಿದ್ದು, ಸಾಕು ನಾಯಿಗಳನ್ನು ಚಿರತೆಗಳು ಬೇಟೆಯಾಗುತ್ತಿರುವ ವಿಡಿಯೋಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

ಗುರುವಾರ ರಾತ್ರಿ ರಮೇಶ್ ಎಂಬುವವರ ಮನೆ ಮುಂದೆ ಬಂದಿರುವ ಚಿರತೆಯೊಂದು, ಸಾಕು ನಾಯಿಯ ಮೇಲೆ ದಾಳಿ ನಡೆಸಿದೆ. ಈ ಸಂಬಂಧ ರಮೇಶ್ ಮತ್ತು ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಚಿರತೆ ಮರಿಗಳ ಹೆಜ್ಜೆ ಗುರುತನ್ನು ಪತ್ತೆ ಮಾಡಿದ್ದಾರೆ.

ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿರುವ ಅರಣ್ಯಾಧಿಕಾರಿಗಳು ಬೋನುಗಳನ್ನು ಸ್ಥಾಪಿಸಿದ್ದಾರೆ. ಸಂಜೆಯ ನಂತರ ಆಹಾರಕ್ಕಾಗಿ ಚಿರತೆಗಳ ಓಡಾಟ ಹೆಚ್ಚಾಗುವುದರಿಂದ ಗ್ರಾಮಸ್ಥರು ಸಂಜೆ 6 ಗಂಟೆಯ ನಂತರ ಮನೆಯಿಂದ ಹೊರಗೆ ಹೋಗುವುದನ್ನು ತಪ್ಪಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ತುರ್ತು ಸಂದರ್ಭಗಳಲ್ಲಿ ಹೊರಗೆ ಹೋಗಲೇಬೇಕೆಂದರೆ ಗುಂಪು ಗುಂಪಾಗಿ ಟಾರ್ಚ್ ಲೈಟ್ ಗಳನ್ನು ಇಟ್ಟುಕೊಂಡು ಹೊರ ಹೋಗಬೇಕೆಂದು ಅರಣ್ಯಾಧಿಕಾರಿ ಗವಿಯಪ್ಪ ಅವರು ತಿಳಿಸಿದ್ದಾರೆ.

ಬೆಳಗಿನ ಸಂದರ್ಭದಲ್ಲಿ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಎದುರಾಗುತ್ತಿದ್ದು, ರಾತ್ರಿ ವೇಳೆ ವಿದ್ಯುತ್ ಇರುದರಿಂದ ರೈತರು ಕತ್ತಲಲ್ಲಿಯೇ ಜಮೀನುಗಳಿಗೆ ನಡೆದುಕೊಂಡು ಹೋಗಿ ನೀರು ಬಿಡುವಂತಾಗಿದೆ. ಈ ವೇಳೆ ಚಿರತೆ ದಾಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಹಗಲಿನಲ್ಲಿ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಗ್ರಾಮಸ್ಥರು ಸೆಸ್ಕ್‌ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com