
ಸಂಗ್ರಹ ಚಿತ್ರ
ಬೆಂಗಳೂರು: ಫೆಬ್ರವರಿ 5ರಿಂದ 7ರವರೆಗೆ ಬೆಂಗಳೂರಿನಲ್ಲಿ ಜಿ20 ರಾಷ್ಟ್ರಗಳ ಇಂಧನ ಪರಿವರ್ತನಾ ಕಾರ್ಯಕಾರಿ ಗುಂಪಿನ ಮೊದಲ ಸಭೆ ನಡೆಯಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಇಂಧನ ಸಚಿವಾಲಯದ ಕಾರ್ಯದರ್ಶಿ ಅಲೋಕ್ ಕುಮಾರ್ ಅವರು, “ಭಾರತಕ್ಕೆ ಜಿ20 ಗುಂಪಿನ ಅಧ್ಯಕ್ಷತೆ ದೊರಕಿರುವುದರಿಂದ ದೇಶಾದ್ಯಂತ ಹಲವು ಸಭೆಗಳನ್ನು ಆಯಾಜಿಸಲಾಗುತ್ತಿದೆ. ಇದರ ಭಾಗವಾಗಿ ಇಂಧನ ಪರಿವರ್ತನೆಗೆ ಸಂಬಂಧಿಸಿದ ಸಭೆಯು ಬೆಂಗಳೂರಿನಲ್ಲಿ ನಿಗದಿಯಾಗಿದೆ ಎಂದು ಹೇಳಿದರು.
ಜಿ-20 ರಾಷ್ಟ್ರಗಳು ಹಾಗೂ ವಿಶ್ವ ಬ್ಯಾಂಕ್, ಏಷ್ಯಾ ಅಭಿವೃದ್ಧಿ ಬ್ಯಾಂಕ್, ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ ಸೇರಿದಂತೆ ಅಂತರಾಷ್ಟ್ರೀಯ ಮಟ್ಟದ ಮುಂಚೂಣಿ ಸಂಸ್ಥೆಗಳು ಸಭೆಯಲ್ಲಿ ಪಾಲ್ಗೊಳ್ಳುತ್ತಿವೆ ಎಂದು ತಿಳಿಸಿದರು.
ಇದು ಇಂಧನ ಪರಿವರ್ತನಾ ಕಾರ್ಯಕಾರಿ ಗುಂಪಿನ ಮೊದಲ ಸಭೆಯಾಗಿದೆ. ಸಭೆಯು ತಾಂತ್ರಿಕ ಅಡೆತಡೆಗಳನ್ನು ನಿವಾರಿಸುವ ಮೂಲಕ ಇಂಧನ ಪರಿವರ್ತನೆಗೆ ಕಡಿಮೆ ಬಡ್ಡಿದರದ ಹಣಕಾಸು, ಇಂಧನ ಸುರಕ್ಷತೆ ಮತ್ತು ಬಹು ವಿಧದ ಪೂರೈಕೆ ಜಾಲ, ಇಂಧನ ಸಾಮರ್ಥ್ಯ, ಕೈಗಾರಿಕೆಗಳಲ್ಲಿ ಕಡಿಮೆ ಇಂಗಾಲ ಹೊರಸೂಸುವಿಕೆ, ಪರಿವರ್ತನೆ ಮತ್ತು ಜವಾಬ್ದಾರಿಯುತ ಬಳಕೆ ಮುಂತಾದ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಲಿದೆ ಎಂದರು.