ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ- ಪ್ರಾಣಿ ಸಂಘರ್ಷ ಪ್ರಕರಣಗಳು: 3 ವರ್ಷಗಳಲ್ಲಿ 63 ಚಿರತೆಗಳ ಸೆರೆ
ಮೈಸೂರು ಜಿಲ್ಲೆಯಲ್ಲಿ ಶಂಕಿತ ಚಿರತೆ ದಾಳಿಯಿಂದ ಕಳೆದ ಕೆಲವು ತಿಂಗಳ ಅಂತರದಲ್ಲಿ ಒಂದಿಲ್ಲೊಂದು ಸಾವು ಸಂಭವಿಸಿದ್ದು, ಮಾನವ-ಪ್ರಾಣಿ ಸಂಘರ್ಷ ತಡೆಯುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಭಾರಿ ಟೀಕೆ ವ್ಯಕ್ತವಾಗಿದೆ.
Published: 31st January 2023 01:47 PM | Last Updated: 31st January 2023 01:47 PM | A+A A-

ಟಿ ನರಸೀಪುರ ತಾಲೂಕಿನಲ್ಲಿ ನಾಲ್ವರನ್ನು ಕೊಂದಿದ್ದು ಎನ್ನಲಾದ ಚಿರತೆ ಗುರುವಾರ ಬೋನಿಗೆ ಸಿಕ್ಕಿಬಿದ್ದಿದೆ.
ಮೈಸೂರು: ಜಿಲ್ಲೆಯಲ್ಲಿ ಶಂಕಿತ ಚಿರತೆ ದಾಳಿಯಿಂದ ಕಳೆದ ಕೆಲವು ತಿಂಗಳ ಅಂತರದಲ್ಲಿ ಒಂದಿಲ್ಲೊಂದು ಸಾವು ಸಂಭವಿಸಿದ್ದು, ಮಾನವ-ಪ್ರಾಣಿ ಸಂಘರ್ಷ ತಡೆಯುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಭಾರಿ ಟೀಕೆ ವ್ಯಕ್ತವಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಮೈಸೂರು ಜಿಲ್ಲೆಯೊಂದರಲ್ಲೇ 63 ಚಿರತೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದಿರುವುದು ಜಿಲ್ಲೆಯಲ್ಲಿ ಮಾನವ-ಚಿರತೆ ಸಂಘರ್ಷ ಪ್ರಕರಣಗಳಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ತೋರಿರುವ ಗಂಭೀರತೆಯನ್ನು ತಿಳಿಸುತ್ತದೆ.
ಚಿರತೆಗಳು ತಮ್ಮ ಆವಾಸಸ್ಥಾನದ ಅಗತ್ಯತೆ ಮತ್ತು ಆಹಾರಕ್ಕಾಗಿ ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಆಗ್ಗಾಗ್ಗೆ ಮಾನವ ವಾಸಸ್ಥಳದ ಬಳಿ ಕಂಡುಬಂದರೂ, ಚಿರತೆ ದಾಳಿಯಿಂದಾಗಿ ಡಿಸೆಂಬರ್ 1 ರಂದು ಟಿ ನರಸೀಪುರ ತಾಲೂಕಿನ ಸೋಸಲೆ ಕೆಬ್ಬೆಹುಂಡಿಯ 22 ವರ್ಷದ ಮೇಘನಾ ಸಾವಿನ ನಂತರ ಚಿರತೆಗಳನ್ನು ಹಿಡಿಯಲು ಕ್ರಮ ಕೈಗೊಳ್ಳಬೇಕೆಂಬ ಕೂಗು ವ್ಯಾಪಕವಾಗಿ ಕೇಳಿಬಂದಿತು.
ತಾಲೂಕಿನ ಪಕ್ಕದ ಉಕ್ಕಲಗೆರೆ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿ ಎಂಎಲ್ ಹುಂಡಿಯ ಸಿ ಮಂಜುನಾಥ್ ಎಂಬ 20 ವರ್ಷದ ಯುವಕ ಚಿರತೆ ದಾಳಿಗೆ ಮೃತಪಟ್ಟ ಒಂದು ತಿಂಗಳ ನಂತರ ಮೇಘನಾ ಕೂಡ ಚಿರತೆ ದಾಳಿಗೆ ಬಲಿಯಾಗಿದ್ದರು. ಜನವರಿ 20ರಂದು ಕನ್ನಾಯಕನಹಳ್ಳಿ ಗ್ರಾಮದ 60 ವರ್ಷದ ಸಿದ್ದಮ್ಮ ಹಾಗೂ ಮರುದಿನ ಅದೇ ತಾಲೂಕಿನಲ್ಲಿ 11 ವರ್ಷದ ಜಯಂತ್ ಮೃತಪಟ್ಟಿದ್ದು, ಚಾಮುಂಡಿ ಬೆಟ್ಟದ ಸಿಎಫ್‌ಟಿಆರ್‌ಐ ಕ್ಯಾಂಪಸ್‌ನಲ್ಲಿ ಹಾಗೂ ಗ್ರಾಮವಾರು ಕಬ್ಬಿನ ಗದ್ದೆಗಳಲ್ಲಿ ಚಿರತೆ ಕಾಣಿಸಿಕೊಂಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ತಕ್ಷಣ ಕ್ರಮ ಕೈಗೊಳ್ಳುವಂತೆ ಜನರು ಆಗ್ರಹಿಸಿದ್ದಾರೆ.
ಸಾರ್ವಜನಿಕರ ಆಕ್ರೋಶದಿಂದಾಗಿ ಕಾರ್ಯಪ್ರವೃತ್ತರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದರು ಮತ್ತು ಮಾನವ-ಚಿರತೆ ಸಂಘರ್ಷವನ್ನು ತಗ್ಗಿಸಲು ಪ್ರತ್ಯೇಕವಾಗಿ ವಿಶೇಷ ಕಾರ್ಯಪಡೆಯನ್ನು ಸ್ಥಾಪಿಸಿದರು.
ಇದನ್ನೂ ಓದಿ: ಮೈಸೂರಿನಲ್ಲಿ ಬಾಲಕನ ಬಲಿ ಪಡೆದ ಚಿರತೆ ಸೆರೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಡಿಸಿಎಫ್ (ವನ್ಯಜೀವಿ) ಕೆ ಎನ್ ಬಸವರಾಜ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡಿ, ಪ್ರಸ್ತಾವನೆಯ ಪ್ರಕಾರ, ಚಿರತೆ ಕಾರ್ಯಪಡೆಯು ರೇಂಜ್ ಫಾರೆಸ್ಟ್ ಆಫೀಸರ್ (ಆರ್‌ಎಫ್‌ಒ), ನಾಲ್ವರು ಡೆಪ್ಯುಟಿ ಆರ್‌ಎಫ್‌ಒಗಳು ಮತ್ತು ಎಂಟು ಅರಣ್ಯ ಸಿಬ್ಬಂದಿ ಸೇರಿದಂತೆ 55 ಸಿಬ್ಬಂದಿಯನ್ನು ಹೊಂದಿರುತ್ತದೆ. ಕಾರ್ಯಪಡೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ 36 ಅರಣ್ಯ ವೀಕ್ಷಕರು ಮತ್ತು ಆರು ಚಾಲಕರು ಇರಲಿದ್ದಾರೆ. ತಂಡದಲ್ಲಿ ಇಬ್ಬರು ಫೋರೆನ್ಸಿಕ್ ವಿಶ್ಲೇಷಕರು ಮತ್ತು ಇಬ್ಬರು ಪಶುವೈದ್ಯರು ಇರುತ್ತಾರೆ ಎಂದು ಹೇಳಿದರು.
ನೈಟ್ ವಿಷನ್ ಬೈನಾಕ್ಯುಲರ್‌ಗಳು, ಥರ್ಮಲ್ ಬೈನಾಕ್ಯುಲರ್‌ಗಳು, ಜಿಪಿಎಸ್ ಹೊಂದಿರುವ ಡ್ಯಾಶ್ ಕ್ಯಾಮೆರಾಗಳು, ಇನ್‌ಫ್ರಾರೆಡ್ ಜಿಎಸ್‌ಎಂ ಕ್ಯಾಮೆರಾಗಳು, ಲಾಂಗ್ ರೇಂಜ್ ಸರ್ಚ್‌ಲೈಟ್‌ಗಳು ಮತ್ತು 4.6 ಕೋಟಿ ವೆಚ್ಚದಲ್ಲಿ ಕಸ್ಟಮೈಸ್ ಮಾಡಿದ ಜೀಪ್‌ಗಳನ್ನು ಖರೀದಿಸಲು ಪ್ರಸ್ತಾಪಿಸಿದ್ದೇವೆ. 19 ಟ್ರ್ಯಾಪ್ ಬೋನುಗಳಿದ್ದು, ಹೆಚ್ಚುವರಿಯಾಗಿ 30 ಬೋನುಗಳನ್ನು ಖರೀದಿಸಲಾಗುವುದು ಮತ್ತು ಎರಡು ಜಾನುವಾರು ಬೋನುಗಳನ್ನು ಖರೀದಿಸಲಾಗುವುದು. ಟಾಸ್ಕ್ ಫೋರ್ಸ್‌ಗಾಗಿ ನಾವು ಹೆಚ್ಚುವರಿ ಟ್ರಾಂಕ್ವಿಲೈಸಿಂಗ್ ಗನ್‌ಗಳನ್ನು ಸಹ ಖರೀದಿಸುತ್ತೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಚಿರತೆ ದಾಳಿಗೆ ಇಬ್ಬರು ಬಲಿ: ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಿಎಂ ಬೊಮ್ಮಾಯಿ ಉನ್ನತ ಮಟ್ಟದ ಸಭೆ
ಚಿರತೆ ದಾಳಿಯಲ್ಲಿ ಗಾಯಗೊಂಡ ಮತ್ತೊಬ್ಬ ರೈತ
ಮೈಸೂರು: ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನಲ್ಲಿ ಸೋಮವಾರ ಬೆಳಗ್ಗೆ ಚಿರತೆ ದಾಳಿಗೆ 50 ವರ್ಷದ ಕೂಲಿ ಕಾರ್ಮಿಕರೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಮತ್ತು ಕೆಆರ್ ಪೇಟೆ ತಾಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದ ನಿವಾಸಿ ಜಯರಾಮ್ ರಾಮಸಮುದ್ರ ಗ್ರಾಮದಲ್ಲಿ ಕಬ್ಬು ಕಟಾವು ಮಾಡಲು ಹೋಗಿದ್ದಾಗ ಚಿರತೆ ದಾಳಿ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಯರಾಮ್ ಇತರ ಕೂಲಿ ಕಾರ್ಮಿಕರೊಂದಿಗೆ ಕಬ್ಬು ಕಡಿಯುವ ಕೆಲಸದಲ್ಲಿ ನಿರತರಾಗಿದ್ದಾಗ ಗದ್ದೆಯಲ್ಲಿ ಅಡಗಿದ್ದ ಚಿರತೆ ಅವರ ಮೇಲೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದೆ. ಈ ವೇಳೆ ಇತರ ಕಾರ್ಮಿಕರು ಚಿರತೆ ಓಡಿಸಿ ಅವರನ್ನು ಉಳಿಸಿದ್ದಾರೆ.
ಗಾಯಾಳು ಜಯರಾಮ್ ಅವರನ್ನು ತಾಲೂಕು ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು ಚಿರತೆ ಹಿಡಿಯಲು ಕಾರ್ಯಾಚರಣೆ ಕೈಗೊಂಡಿದ್ದಾರೆ.