ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 100 ಸ್ಥಾನಗಳಲ್ಲಿ ಎಸ್‌ಡಿಪಿಐ ಸ್ಪರ್ಧೆ; ವಿಎಚ್‌ಪಿ ಮುಖಂಡನ ವಿರುದ್ಧ ಕ್ರಮಕ್ಕೆ ಆಗ್ರಹ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕರ್ನಾಟಕದ ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ 100 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಮಂಗಳವಾರ ಹೇಳಿದೆ.
Published: 31st January 2023 03:49 PM | Last Updated: 31st January 2023 07:35 PM | A+A A-

ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕರ್ನಾಟಕದ ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ 100 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಮಂಗಳವಾರ ಹೇಳಿದೆ.
ಸಮಾನಾಂತರ ರಾಜಕೀಯದ ಅಜೆಂಡಾದೊಂದಿಗೆ ಎಸ್‌ಡಿಪಿಐ ಜನರ ಮುಂದೆ ಚುನಾವಣೆಗೆ ಹೋಗಲಿದೆ ಎಂದು ಎಸ್‌ಡಿಪಿಐ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷವು ತಾವು ಸ್ಪರ್ಧಿಸಲಿರುವ 54 ಕ್ಷೇತ್ರಗಳ ಹೆಸರನ್ನು ಈಗಾಗಲೇ ಘೋಷಿಸಿದ್ದು, 10 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧಿಸಲಿದೆ. ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಮತ್ತು ಉಳಿದ ಸ್ಥಾನಗಳ ಹೆಸರನ್ನು ಸಹ ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.
ನೆಟ್ಟಾರು ಹತ್ಯೆ ಸೇಡಿಗಾಗಿ ಫಾಜಿಲ್‌ನನ್ನು ಹತ್ಯೆ ಮಾಡಲಾಯಿತು ಎಂಬ ಹೇಳಿಕೆಯನ್ನು ಕೊಡ್ಲಿಪೇಟೆ ಖಂಡಿಸಿದರು. ಬಿಜೆಪಿ ಕಾರ್ಯಕರ್ತ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆಗೆ ಸೇಡು ತೀರಿಸಿಕೊಳ್ಳಲು 2022ರ ಜುಲೈ 28ರಂದು ಮೊಹಮ್ಮದ್ ಫಾಜಿಲ್‌ನನ್ನು ಕೊಂದಿದ್ದ ಬಗ್ಗೆ ಪ್ರಸ್ತಾಪಿಸಿದರು.
'ಮೊಹಮ್ಮದ್ ಫಾಜಿಲ್ ಹತ್ಯೆಯನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮುಖಂಡ ಶರಣ್ ಪಂಪ್‌ವೆಲ್ ಸಮರ್ಥಿಸಿಕೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಎಲ್ಲಾ ಕೊಲೆಗಳ ಹಿಂದೆ ಇವರ ಪಾತ್ರವಿದೆಯಂತೆ. ಕೂಡಲೇ ಅವರನ್ನು ಬಂಧಿಸಬೇಕು' ಎಂದು ಆಗ್ರಹಿಸಿದರು.
'ಫಾಜಿಲ್ ಹತ್ಯೆಯನ್ನು ಶರಣ್ ತುಮಕೂರು ಮತ್ತು ಉಳ್ಳಾಲದಲ್ಲಿ ಸಾರ್ವಜನಿಕವಾಗಿ ಸಮರ್ಥಿಸಿಕೊಂಡಿದ್ದರು. ಅವರ ವಿರುದ್ಧ ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಪೊಲೀಸರಿಗೆ ಬುದ್ಧಿ ಇಲ್ಲವೇ? ಕೊಲೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತೊಡಗಿರುವವರನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕು' ಎಂದು ಕೊಡ್ಲಿಪೇಟೆ ಆಗ್ರಹಿಸಿದರು.