ಏಜೆಂಟ್ ನಿಂದ ವಂಚನೆ: ಕುವೈತ್ ನಲ್ಲಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿದ ಕೊಡಗು ಜಿಲ್ಲಾಡಳಿತ
ಕುವೈತ್ ನಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿದ್ದ ಏಜೆಂಟ್ ನಿಂದ ವಂಚನೆಗೊಳಗಾದ ಮಹಿಳೆಯೊಬ್ಬರನ್ನು ಕೊಡಗು ಜಿಲ್ಲಾಡಳಿತ ಸುರಕ್ಷಿತವಾಗಿ ವಾಪಸ್ ಕರೆತಂದಿದೆ.
Published: 31st January 2023 08:16 PM | Last Updated: 01st February 2023 06:58 PM | A+A A-

ಕುವೈತ್ ನಲ್ಲಿ ಸಿಲುಕಿದ್ದ ಕೊಡಗಿನ ಮಹಿಳೆ
ನವದೆಹಲಿ: ಕುವೈತ್ ನಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿದ್ದ ಏಜೆಂಟ್ ನಿಂದ ವಂಚನೆಗೊಳಗಾದ ಮಹಿಳೆಯೊಬ್ಬರನ್ನು ಕೊಡಗು ಜಿಲ್ಲಾಡಳಿತ ಸುರಕ್ಷಿತವಾಗಿ ವಾಪಸ್ ಕರೆತಂದಿದೆ.
ವಂಚನೆಗೊಳಗಾಗಿದ್ದ ಮಹಿಳೆ ಚೆನ್ನೈ ವಿಮಾನ ನಿಲ್ದಾಣಕ್ಕೆ ತಲುಪಿದ್ದು, ಶೀಘ್ರವೇ ಕೊಡಗು ಜಿಲ್ಲೆಗೆ ತಲುಪಲಿದ್ದಾರೆ.
ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದ ನಿವಾಸಿ ಪಾರ್ವತಿ ಎಸ್ಟೇಟ್ ಲೈನ್ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಈ ಬಳಿಕ ಆಕೆ ಕೆಲವು ಕಾಲ ಕೇರಳದಲ್ಲಿ ಹೋಮ್ ನರ್ಸ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಕೇರಳದಲ್ಲಿ ಪಾರ್ವತಿ ಅವರಿಗೆ ಹನೀಫಾ ಎಂಬ ಉದ್ಯೋಗ ಏಜೆಂಟ್ ಎಂದು ಹೇಳಿಕೊಂಡಿದ್ದ ಮಹಿಳೆ ಪರಿಚಯವಾಗಿದ್ದರು. ವೀಸಾ ಪಾಸ್ ಪೋರ್ಟ್ ಸಹಿತ ಆಕೆ ಪಾರ್ವತಿಗೆ ಕುವೈತ್ ನಲ್ಲಿ ಉದ್ಯೋಗವೊಂದನ್ನು ಕೊಡಿಸುವುದಾಗಿ ಭರವಸೆ ನೀಡಿದ್ದರು.
ಎಲ್ಲವೂ ಅಂದುಕೊಂಡತೆಯೇ ಆಗಿ ಪಾರ್ವತಿ ಕುವೈತ್ ಗೆ ಕೆಲಸಕ್ಕೆ ತೆರಳಿದ್ದರು. ಆದರೆ 4 ತಿಂಗಳ ಬಳಿಕ ಆಕೆಯ ವೀಸಾ ಅವಧಿ ಮುಕ್ತಾಯವಾದಾಗ ತನಗೆ ಏಜೆಂಟ್ ಮೂಲಕ ಸಿಕ್ಕಿರುವುದು ವಿಸಿಟಿಂಗ್ ವೀಸಾ ಅಷ್ಟೇ ವರ್ಕಿಂಗ್ ವೀಸಾ ಅಲ್ಲ ಎಂಬುದು ಬಹಿರಂಗವಾಗಿದೆ. ಈ ನಡುವೆ ಏಜೆಂಟ್ ಪಾರ್ವತಿ ಎಂಬಾಕೆ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದ ಕುವೈತ್ ನ ನಿವಾಸಿಯಿಂದ 3 ಲಕ್ಷ ರೂಪಾಯಿ ಪಡೆದ್ದಾರೆ. ಇಷ್ಟೆಲ್ಲಾ ಘಟನೆಗಳಾದ ನಂತರ ಏಜೆಂಟ್ ನಾಪತ್ತೆಯಾದ ಪರಿಣಾಮ ಕುವೈತ್ ನ ನಿವಾಸಿ ಪಾರ್ವತಿಯಿಂದ 3 ಲಕ್ಷ ರೂಪಾಯಿ ಹಣ ವಾಪಸ್ ಕೇಳಿದ್ದಾರೆ ಹಾಗೂ ಶ್ರೀಲಂಕಾದ ಇನ್ನೂ ನಾಲ್ವರು ಮಹಿಳೆಯರೊಂದಿಗೆ ಕೊಠಡಿಯಲ್ಲಿ ಪಾರ್ವತಿಯನ್ನು ಕೂಡಿ ಹಾಕಿದ್ದರು.
ಇದನ್ನೂ ಓದಿ: ಕೊಡಗು: ವನ್ಯಜೀವಿ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆಯಿಂದ ಆನೆ ಸಿಗ್ನಲ್ ಬೋರ್ಡ್ ಗಳ ಅಳವಡಿಕೆ
ಪಾರ್ವತಿ ತಮ್ಮ ಸಂಕಷ್ಟವನ್ನು ಕೊಡಗಿನಲ್ಲಿದ್ದ ತಾಯಿಗೆ ಹೇಳಿಕೊಂಡಿದ್ದು ಈ ವಿಷಯ ಜಿಲ್ಲಾಡಳಿತದ ಅಧಿಕಾರಿಗಳಿಗೆ ತಲುಪಿತ್ತು. ಕಾರ್ಯಪ್ರವೃತ್ತವಾದ ಜಿಲ್ಲಾಡಳಿತ ತಕ್ಷಣವೇ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗೆ ಪಾರ್ವತಿ ಅವರನ್ನು ವಾಪಸ್ ಕರೆತರುವ ಜವಾಬ್ದಾರಿ ವಹಿಸಿತ್ತು. ಕುವೈತ್ ನಲ್ಲಿದ್ದ ರಾಯಭಾರಿ ಕಚೇರಿ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಆಕೆಯನ್ನು ಭಾರತಕ್ಕೆ ವಾಪಸ್ ಕರೆತರಲಾಗುತ್ತಿದೆ.