ಕಲಬುರಗಿ ಕಾನ್ಸ್ ಟೇಬಲ್ ಹತ್ಯೆ ಪ್ರಕರಣ ಸಿಐಡಿ ತನಿಖೆಗೆ: ಗೃಹ ಸಚಿವ ಡಾ.ಜಿ ಪರಮೇಶ್ವರ್

ಕಲಬುರಗಿ ಕಾನ್ಸ್ ಟೇಬಲ್ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಮಂಗಳವಾರ ಹೇಳಿದರು.
ಸಚಿವ ಪರಮೇಶ್ವರ್
ಸಚಿವ ಪರಮೇಶ್ವರ್

ಬೆಂಗಳೂರು: ಕಲಬುರಗಿ ಕಾನ್ಸ್ ಟೇಬಲ್ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಮಂಗಳವಾರ ಹೇಳಿದರು.

ವಿಧಾನಸಭೆಯಲ್ಲಿ ಮಾತನಾಡಿದ ಸಚಿವರು, ನಮಗೂ ಸತ್ಯಾಂಶ ಹೊರಬರಬೇಕು ಎಂಬ ಆಸೆ ಇದೆ. ಹೀಗಾಗಿ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗುವುದು ಎಂದು ಹೇಳಿದರು.

ಅದೇ ರೀತಿ ಟ್ರ್ಯಾಕ್ಟರ್ ಮಾಲೀಕನಿಗೆ ಗುಂಡೇಟು ಹೊಡೆದ ಪ್ರಕರಣವನ್ನು ಕೂಡ ಸಿಐಡಿ ತನಿಖೆಗೆ ಒಪ್ಪಿಸುವುದಾಗಿ ತಿಳಿಸಿದರು.

ಸೋಮವಾರ ಸಂಜೆ ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 330 ರ ಅಡಿ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ರೈತನೊಬ್ಬ ಮರಳು ಸಾಗಾಣಿಕೆ ಮಾಡುವ ವೇಳೆ ತಡೆಯಲು ಬಂದ ಕಾನ್​ಸ್ಟೇಬಲ್​ ಮೃತಪಟ್ಟ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವಂತೆ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು, ಶಶಿಲ್ ನಮೋಶಿ, ರವಿಕುಮಾರ್, ತಳವಾರ್ ಸಾಬಣ್ಣ ಪ್ರಸ್ತಾಪಿಸಿದ್ದರು. ಇದಕ್ಕೆ ಉತ್ತರ ನೀಡಿದ್ದ ಗೃಹ ಸಚಿವ ಪರಮೇಶ್ವರ್, ಪೊಲೀಸರು ತಡೆದಾಗ ಟ್ರ್ಯಾಕ್ಟರ್ ಅನ್ನು ನಿಲ್ಲಿಸಿದ್ದರೆ ದಂಡ ಹಾಕಿ ಬಿಡುತ್ತಿದ್ದರು. ಆದರೆ ಇಲ್ಲಿ ನಮ್ಮ ಪೊಲೀಸ್ ಕಾನ್​ಸ್ಟೇಬಲ್​ ಮೃತರಾಗಿದ್ದಾರೆ.

ತನಿಖೆ ವೇಳೆ ಸಾಯಿಬಣ್ಣ ಟ್ರ್ಯಾಕ್ಟರ್ ಮಾಲೀಕ ಎಂದು ಆತನ ವಿಚಾರಣೆ ನಡೆಸಲು ಮುಂದಾದಾಗ ಚಾಕು ತೆಗೆದು ಇರಿಯಲು ಯತ್ನಿಸಿದ್ದರಿಂದ ಕಾಲಿಗೆ ಶೂಟ್ ಮಾಡಲಾಯಿತು. ಇಡೀ ಪ್ರಕರಣವನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಹಾಗಾಗಿ, ನ್ಯಾಯಾಂಗ ತನಿಖೆಗೆ ವಹಿಸಲ್ಲ ಎಂದು ಹೇಳಿದ್ದರು.

ಸಚಿವರ ಉತ್ತರ ಖಂಡಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ್ದರು. ಪೊಲೀಸರು ಗೃಹ ಸಚಿವರ ದಾರಿ ತಪ್ಪಿಸಿದ್ದಾರೆ. ಪೊಲೀಸ್ ತನಿಖೆಯ ಮೇಲೆ ನಮಗೆ ವಿಶ್ವಾಸ ಇಲ್ಲ. ಹಾಗಾಗಿ ನ್ಯಾಯಾಂಗ ತನಿಖೆಗೆ ವಹಿಸಬೇಕು, ಅಲ್ಲಿಯವರೆಗೂ ಧರಣಿ ನಿಲ್ಲಿಸಲ್ಲ ಎಂದಿದ್ದರು. ಅದರಂತೆ ಮಂಗಳವಾರ ಬೆಳಗ್ಗೆಯೂ ಧರಣಿ ನಡೆಸಿದ್ದರು.

ಈ ವೇಳೆ ಸಚಿವರು ಪ್ರಕರಣದ ತನಿಖೆಯನ್ನು ಸಿಐಡಿ ತನಿಖೆಗೆ ವಹಿಸುವುದಾಗಿ ತಿಳಿಸಿದರು. ಬಳಿಕ ಬಿಜೆಪಿ ಧರಣಿ ಕೈಬಿಟ್ಟಿತು.

ಬಳಿಕ ಮಾತನಾಡಿ ಬಿಜೆಪಿ ಎಂಎಲ್‌ಸಿ ಶಶಿಲ್ ನಮೋಶಿ ಅವರು, ಸರ್ಕಾರ ಈ ಕ್ರಮವನ್ನು ಸ್ವಾಗತಿಸುತ್ತೇನೆ, ಆದರೆ ಸರ್ಕಾರವು ಪ್ರಕರಣದ ತನಿಖೆಯನ್ನು ಉತ್ತಮ ಅಧಿಕಾರಿಗೆ ನಿಯೋಜಿಸಬೇಕೆಂದು ಆಗ್ರಹಿಸಿದರು.

ಬಿಜೆಪಿ ಸದಸ್ಯ ಎನ್ ರವಿಕುಮಾರ್ ಮಾತನಾಡಿ, ಮೈಸೂರು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಗೊಂಡಿರುವ ಸಾಯಿಬಣ್ಣನನ್ನು ಇನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ, ಈ ಸಂಬಂಧ ಕೂಡಲೇ ಪೊಲೀಸರಿಗೆ ಸೂಚಿಸಬೇಕು ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಸಚಿವ ಪರಮೇಶ್ವರ್ ಅವರು, ಕಾರ್ಯವಿಧಾನದ ಸಮಸ್ಯೆಗಳು ಎದುರಾಗಿದ್ದು, ಸಿಐಡಿ ತನ್ನ ತನಿಖೆಯನ್ನು ಪ್ರಾರಂಭಿಸಿದ ನಂತರ ಈ ಬಗ್ಗೆ ಪರಿಶೀಲನೆ ನಡೆಸಲಿದೆ ಎಂದು ಹೇಳಿದರು.

ಅಕ್ರಮ ಮರಳು ಸಾಗಾಟ ತಡೆಯಲು ಹೋದ ಹೆಡ್ ಕಾನ್ಸ್ಟೇಬಲ್ ರನ್ನು ಮೈಸೂರ್ ಚವಾಣ್ ಅವರನ್ನು ಟ್ರ್ಯಾಕ್ಟರ್ ಹರಿಸಿ ಹತ್ಯೆ ಮಾಡಲಾಗಿತ್ತು. ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನಾರಾಯಣಪುರ ಸಮೀಪ ಘಟನೆ ನಡೆದಿತ್ತು.

ಅಕ್ರಮ ಮರಳು ಸಾಗಾಟ ಹಿನ್ನೆಲೆಯಲ್ಲಿ ಮೈಸೂರ್ ಚವಾಣ್ ತಪಾಸಣೆಗೆ ಹೋಗಿದ್ದರು. ಈ ವೇಳೆ ಅವರ ಮೇಲೆ ದುಷ್ಕರ್ಮಿಗಳು ಟ್ರ್ಯಾಕ್ಟರ್ ಹರಿಸಿದ್ದರು. .ಟ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಮೈಸೂರು ಚವಾಣ್ ಸ್ಥಳದಲ್ಲೇ ಮೃತಪಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com