ಹಿಂದಿನ ಸರ್ಕಾರದ ಜನಪರ ಯೋಜನೆಗಳಿಗೆ ಅನುದಾನ ಕಡಿತ ಮಾಡಬೇಡಿ: ಮಾಜಿ ಸಿಎಂ ಬೊಮ್ಮಾಯಿ ಒತ್ತಾಯ

 ಹಿಂದಿನ ಬಿಜೆಪಿ ಸರ್ಕಾರ ಘೋಷಿಸಿದ ಜನಪರ ಯೋಜನೆಗಳಿಗೆ ಅನುದಾನ ಕಡಿತ ಮಾಡದಂತೆ  ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. 
ಸಿಎಂ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಸಾಂದರ್ಭಿಕ ಚಿತ್ರ
ಸಿಎಂ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಸಾಂದರ್ಭಿಕ ಚಿತ್ರ

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ಘೋಷಿಸಿದ ಜನಪರ ಯೋಜನೆಗಳಿಗೆ ಅನುದಾನ ಕಡಿತ ಮಾಡದಂತೆ  ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. 

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ್ದ ಐದು ಭರವಸೆಗಳ ಕುರಿತು ಚರ್ಚಿಸಲು ಮತ್ತು ಘೋಷಣೆ ಮಾಡಲು ಶುಕ್ರವಾರ ಮಹತ್ವದ ಸಂಪುಟ ಸಭೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಬಸವರಾಜ ಬೊಮ್ಮಾಯಿ, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲ ಇಲಾಖೆಗಳ ಅಭಿವೃದ್ಧಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವುದು ಜವಾಬ್ದಾರಿಯುತ ಸರಕಾರದ ಕರ್ತವ್ಯವಾಗಿದ್ದು, ಸರಕಾರ ಖರ್ಚು ವೆಚ್ಚಗಳಿಗೆ ಬದ್ಧರಾಗಿ ಈ ಬಗ್ಗೆ ಬಹಿರಂಗ ಹೇಳಿಕೆ ನೀಡಬೇಕು ಎಂದಿದ್ದಾರೆ.

ಗ್ಯಾರಂಟಿ ಯೋಜನೆಗಳಿಗೆ 50,000 ಕೋಟಿ ರೂ. ಅಗತ್ಯವಿದೆ. ಇದು ರಾಜ್ಯದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಬಾರದು. ಜನರಿಗೆ ಪರೋಕ್ಷವಾಗಿ ಹೊರೆ ಬೀಳಬಾರದು.ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಕ್ರಮ ಕೈಗೊಳ್ಳುವ ವಿಶ್ವಾಸವಿದೆ. ಹಣಕಾಸು, ಶಿಕ್ಷಣ, ಆರೋಗ್ಯ, ಮಹಿಳಾ ಅಭಿವೃದ್ಧಿಯಂತಹ ಪ್ರಮುಖ ಕ್ಷೇತ್ರಗಳ ಬಗ್ಗೆ ಕಾಳಜಿ ವಹಿಸುವ ಅವಶ್ಯಕತೆಯಿದೆ ಮತ್ತು ಸರ್ಕಾರ ಮೂಲಸೌಕರ್ಯ ರೈತರು, ದಲಿತರು, ಬಡವರು ಮತ್ತು ಹಿಂದುಳಿದ ವರ್ಗಗಳ ಹಿತಾಸಕ್ತಿಗಳನ್ನು ಸಹ ರಕ್ಷಿಸಬೇಕು ಎಂದು ಹೇಳಿದ್ದಾರೆ.

"ರೈತರಿಗೆ 5 ಲಕ್ಷ ರೂ.ವರೆಗಿನ ಅಲ್ಪಾವಧಿ ಸಾಲ ಸೌಲಭ್ಯವನ್ನು ಕಡಿತಗೊಳಿಸುವುದು ಕಾರ್ಯಸಾಧ್ಯವಲ್ಲ; 2023-24 ರ ಬಜೆಟ್‌ನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ, 1,500 ಕೋಟಿ ರೂ. ನೀಡುವುದರೊಂದಿಗೆ ಆವರ್ತ ನಿಧಿಯನ್ನು 3,500 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಇದನ್ನು ಕಡಿಮೆ ಮಾಡಬಾರದು, ವಿವೇಕ ಯೋಜನೆಯಡಿ 7,601 ತರಗತಿ ಕೊಠಡಿಗಳು ಮತ್ತು ವಿವಿಧ ಯೋಜನೆಗಳ ಅಡಿಯಲ್ಲಿ 9,556 ಶಾಲಾ ಕಟ್ಟಡಗಳನ್ನು ನಿರ್ಮಿಸಲು ಮೀಸಲಿಟ್ಟಿರುವ ಹಣವನ್ನು ಹಿಂಪಡೆಯಬಾರದು ಎಂದು ಅವರು ಒತ್ತಾಯಿಸಿದ್ದಾರೆ.

ಫಲಾನುಭವಿಗಳಿಗೆ ಉಚಿತ ಡಯಾಲಿಸಿಸ್ ಮತ್ತು ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಹೆಚ್ಚಿಸುವ ಯೋಜನೆಗಳಿಗೆ ತೊಂದರೆಯಾಗಬಾರದು.  ಹಿಂದುಳಿದ  ಹಾಗೂ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಹಾಸ್ಟೆಲ್‌ಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅನುದಾನ ಕಡಿತಗೊಳಿಸಬಾರದು ಎಂದು ಮಾಜಿ ಮುಖ್ಯಮಂತ್ರಿ ಆಗ್ರಹಿಸಿದ್ದಾರೆ.

ಅನ್ನ ಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ದಾರರ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಉಚಿತ 10 ಕೆಜಿ ಅಕ್ಕಿ, ಗೃಹ ಲಕ್ಷ್ಮಿ ಯೋಜನೆಯಡಿ ಕುಟುಂಬದ ಪ್ರತಿ ಮಹಿಳೆಗೆ ರೂ 2,000; ನಿರುದ್ಯೋಗಿ ಪದವೀಧರರಿಗೆ ರೂ 3,000 ಭತ್ಯೆ ಮತ್ತು ಯುವ ನಿಧಿ ಯೋಜನೆಯಡಿ ಎರಡು ವರ್ಷಗಳವರೆಗೆ ನಿರುದ್ಯೋಗಿ ಡಿಪ್ಲೋಮಾದಾರರಿಗೆ ರೂ 1,500; ಸರ್ಕಾರಿ ಸ್ವಾಮ್ಯದ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ಗೃಹ ಜ್ಯೋತಿ ಯೋಜನೆಯಡಿ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ.

ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಿರುವಭರವಸೆಗಳನ್ನು ಈಡೇರಿಸಲು ಈಗ ಕಾಂಗ್ರೆಸ್ ನಾಯಕತ್ವ ಒತ್ತಡದಲ್ಲಿದೆ. ಈ ವಿಳಂಬದ ಬಗ್ಗೆ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ಗಳು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com