ಒಡಿಶಾ ರೈಲು ದುರಂತ: ಬೈಯಪ್ಪನಹಳ್ಳಿಯಲ್ಲಿ ಪ್ರಯಾಣಿಕರಿಗೆ ಊಟದ ವ್ಯವಸ್ಥೆ ಮಾಡುವಂತೆ ಬಿಬಿಎಂಪಿಗೆ ಸಿಎಂ ಸೂಚನೆ
ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಊಟ, ತಿಂಡಿ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಶನಿವಾರ ಸೂಚನೆ ನೀಡಿದ್ದಾರೆ.
Published: 04th June 2023 08:21 AM | Last Updated: 04th June 2023 10:09 PM | A+A A-

ಸಿಎಂ ಸಿದ್ದರಾಮ್ಯ
ಬೆಂಗಳೂರು: ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಊಟ, ತಿಂಡಿ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಶನಿವಾರ ಸೂಚನೆ ನೀಡಿದ್ದಾರೆ.
ಒಡಿಶಾದಲ್ಲಿ ಸಂಭವಿಸಿರುವ ರೈಲು ಅಪಘಾತದಿಂದ ಆ ಮಾರ್ಗದಲ್ಲಿ ಸಂಚರಿಸುವ ಹತ್ತಾರು ರೈಲುಗಳ ಪ್ರಯಾಣ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆ ಭಾಗಕ್ಕೆ ತೆರಳಬೇಕಾದ ಕಾರ್ಮಿಕರು ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲೇ ದಿನ ಕಳೆಯುವಂತಾಗಿದೆ. ಹೀಗಾಗಿ ಅವರೆಲ್ಲರಿಗೂ ಊಟದ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ.
ಏತನ್ಮಧ್ಯೆ, ಹೌರಾ ರೈಲು ನಿಲ್ದಾಣದಲ್ಲಿ ಸಿಲುಕಿರುವ ಕರ್ನಾಟಕದ ವಾಲಿಬಾಲ್ ಆಟಗಾರರು ಮತ್ತು ತರಬೇತುದಾರರ ತಂಡವು ಸಾರಿಗೆ ವ್ಯವಸ್ಥೆ ಮಾಡಿದ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ವಾಲಿಬಾಲ್ ಆಟಗಾರರು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಸಂಪರ್ಕಿಸಿದ್ದರು. ಬಳಿಕ ರಾಜ್ಯ ಸರ್ಕಾರ ಕೋಲ್ಕತ್ತಾದಿಂದ ವಿಮಾನದ ಮೂಲಕ ಬೆಂಗಳೂರಿಗೆ ಬರಲು ವ್ಯವಸ್ಥೆ ಮಾಡಿತ್ತು. ಇದರಂತೆ ಆಟಗಾರರು ಭಾನುವಾರ ಬೆಂಗಳೂರು ತಲುಪಿದ್ದಾರೆ.
16 ವರ್ಷದೊಳಗಿನವರ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲು 32 ಸದಸ್ಯರ ಹುಡುಗರು, ಹುಡುಗಿಯರು ಮತ್ತು ತರಬೇತುದಾರರು ಕೋಲ್ಕತ್ತಾಗೆ ತೆರಳಿದ್ದರು. ಸಂಕಷ್ಟದಲ್ಲಿದ್ದ ತಮಗೆ ಶೀಘ್ರಗತಿಯಲ್ಲಿ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂತೋಷ್ ಲಾಡ್ ಅವರಿಗೆ ಆಟಗಾರರು ಕೃತಜ್ಞತೆ ಸಲ್ಲಿಸಿದ್ದಾರೆ.