ಕೋಲಾರ: ಕೆರೆಗೆ ಹಾರಿ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು, ವೈದ್ಯರ ವಿರುದ್ಧ ದೂರು ದಾಖಲು

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಬಳಿಯ ಎಂವಿಜೆ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯಗೆ ಶರಣಾಗಿರುವ ಘಟನೆ ಭಾನುವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೋಲಾರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಬಳಿಯ ಎಂವಿಜೆ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯಗೆ ಶರಣಾಗಿರುವ ಘಟನೆ ಭಾನುವಾರ ನಡೆದಿದೆ.

ದರ್ಶಿನಿ (26) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯಾಗಿದ್ದಾರೆ. ಕೋಲಾರ ತಾಲ್ಲೂಕು ಕೆಂದಟ್ಟಿ ಗ್ರಾಮದ ಬಳಿ ಇರುವ ಕ್ವಾರಿ ಕೆರೆಯಲ್ಲಿ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದು, ಈ ಸಂಬಂಧ ವೈದ್ಯರೊಬ್ಬರ ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.

ದರ್ಶಿನಿ ಅವರ ಸಹೋದರ ಪ್ರಜ್ವಲ್ ನೀಡಿದ ದೂರಿನ ಮೇರೆಗೆ ಕೋಲಾರ ಗ್ರಾಮಾಂತರ ಪೊಲೀಸರು ಆಕೆಗೆ ಕಿರುಕುಳ ನೀಡಿದ ಆರೋಪದ ಮೇಲೆ ಕಾಲೇಜಿನ ಹಿರಿಯ ವೈದ್ಯ ಡಾ.ಮಹೇಶ್ ವಿರುದ್ಧ ಐಪಿಸಿ ಸೆಕ್ಷನ್ 306 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಕಾಲೇಜು ಆಡಳಿತ ಮಂಡಳಿ ಅಥವಾ ಹಿರಿಯ ವೈದ್ಯರು ಕಿರುಕುಳ ಆರೋಪವನ್ನು ನಿರಾಕರಿಸಿದ್ದಾರೆ,

ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಕ್ಕೆ ಕಾರಣವೇನೆಂಬುದನ್ನು ತಿಳಿಯಲು ವಿಚಾರಣೆ ನಡೆಸಲಾಗುತ್ತಿದೆ ಎಂದು ಕೇಂದ್ರ ಶ್ರೇಣಿಯ ಪೊಲೀಸ್ ಮಹಾನಿರೀಕ್ಷಕ ಬಿಆರ್ ರವಿಕಾಂತೇಗೌಡ ಅವರು ಮಾಹಿತಿ ನೀಡಿದ್ದಾರೆ.

ಬಳ್ಳಾರಿ ಮೂಲದ ದರ್ಶಿನಿ ಅವರು ಕೊಪ್ಪಳ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿ ಎಂವಿಜೆ ಕಾಲೇಜಿನಲ್ಲಿ ಎಂಡಿ, ಪೀಡಿಯಾಟ್ರಿಕ್ಸ್‌ಗೆ ಉಚಿತ ಸೀಟು ಪಡೆದಿದ್ದರು.

ದರ್ಶಿನಿ ಅತ್ಯುತ್ತಮ ವಿದ್ಯಾರ್ಥಿನಿಯಾಗಿದ್ದಳು. ಎಲ್ಲರೊಂದಿಗೆ ಸ್ನೇಹದಿಂದ ಇದ್ದರು. ಆತ್ಮಹತ್ಯೆಗೆ ಶರಣಾಗಲೂ ಯಾವುದೇ ಕಾರಣಗಳಿರಲಿಲ್ಲ. ವೈದ್ಯರಿಂದಾಗಲೂ, ಉನ್ನತಾಧಿಕಾಗಳಿಂದಾಗಲೀ ಯಾವುದೇ ಕಿರಿಕುಳಗಳಾಗಿಲ್ಲ. ಎಂದು ಕಾಲೇಜು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶಿನಿ ಸಹೋದರ ಪ್ರಜ್ವಲ್, ಡಾ.ಮಹೇಶ್ ದರ್ಶಿನಿಗೆ ಕಿರುಕುಳ ನೀಡುತ್ತಿದ್ದರು. ಈ ಕುರಿತು ನನಗೆ ಹಾಗೂ ಪೋಷಕರ ಬಳಿ ಹೇಳಿಕೊಳ್ಳುತ್ತಿದ್ದಳು. ಕಾಲೇಜು ಆಡಳಿತ ಮಂಡಳಿಯು ನನಗೆ ವಿಶ್ರಾಂತಿಗೂ ಅವಕಾಶ ನೀಡುತ್ತಿಲ್ಲ. ಕೆಲಸದ ಒತ್ತಡ ಹೆಚ್ಚಾಗಿದೆ ಎಂದು ಹೇಳುತ್ತಿದ್ದಳು ಎಂದು ಹೇಳಿದ್ದಾರೆ.

ಕಾಲೇಜಿನಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಕೆಂದಟ್ಟಿ ಕ್ವಾರಿಗೆ ದರ್ಶಿನಿ ಆಟೋ ರಿಕ್ಷಾದಲ್ಲಿ ತೆರಳಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಕೋಲಾರ ಪೊಲೀಸರು ತಿಳಿಸಿದ್ದಾರೆ.

ಕ್ವಾರಿಹಳ್ಳದ ಬಳಿ ತಲುಪಿದ ದರ್ಶಿನಿ ಸ್ನೇಹಿತರೊಬ್ಬಿರಿಗೆ ದೂರವಾಣಿ ಕರೆ ಮಾಡಿ, ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಹೇಳಿದ್ದಾಳೆ. ಕೂಡಲೇ ಅವರು ಪೊಲೀಸರು ಹಾಗೂ ಕಾಲೇಜು ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ದರ್ಶಿನಿ ಕ್ವಾರಿಹಳ್ಳಕ್ಕೆ ಹಾರಿ ಪ್ರಾಣ ಬಿಟ್ಟಿದ್ದರು. ಕೆಲಗಂಟೆಗಳ ಬಳಿಕ ಶವ ಕಂಡ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ತೆರಳಿದ ಪೊಲೀಸರು ಶವವನ್ನು ಹೊರತೆಗೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com