‘ಗ್ಯಾರಂಟಿಗಳು’ ಉಚಿತವಲ್ಲ, ಬಡವರ ಸಬಲೀಕರಣಕ್ಕೆ ಕಾಂಗ್ರೆಸ್ ಪ್ರಯತ್ನ: ಗೃಹ ಸಚಿವ ಪರಮೇಶ್ವರ
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಜನರಿಗೆ ನೀಡಿದ ಗ್ಯಾರಂಟಿಗಳು 'ಉಚಿತ' ಅಲ್ಲ. ಸಮಾಜದ ಎಲ್ಲಾ ಬಡವರು ಮತ್ತು ದೀನದಲಿತರ ಸಬಲೀಕರಣವೇ ಈ ಯೋಜನೆಗಳ ಉದ್ದೇಶವಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಮಂಗಳವಾರ ಇಲ್ಲಿ ಹೇಳಿದರು.
Published: 07th June 2023 11:19 AM | Last Updated: 07th June 2023 11:19 AM | A+A A-

ಜಿ ಪರಮೇಶ್ವರ
ಮಂಗಳೂರು: ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಜನರಿಗೆ ನೀಡಿದ ಗ್ಯಾರಂಟಿಗಳು 'ಉಚಿತ' ಅಲ್ಲ. ಸಮಾಜದ ಎಲ್ಲಾ ಬಡವರು ಮತ್ತು ದೀನದಲಿತರ ಸಬಲೀಕರಣವೇ ಈ ಯೋಜನೆಗಳ ಉದ್ದೇಶವಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಮಂಗಳವಾರ ಇಲ್ಲಿ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕೂಲಂಕುಷವಾಗಿ ಅಧ್ಯಯನ ನಡೆಸಿ ಸಂಪೂರ್ಣ ಜವಾಬ್ದಾರಿಯಿಂದ ಭರವಸೆ ನೀಡಲಾಗಿದೆ ಎಂದರು.
ಕಾಂಗ್ರೆಸ್, ಬಡವರು ಮತ್ತು ಮಧ್ಯಮ ವರ್ಗದವರ ಹಿತಾಸಕ್ತಿಗಾಗಿ ಕೆಲಸ ಮಾಡುವ ಪಕ್ಷವಾಗಿದೆ. ಜನರು ಕಾಂಗ್ರೆಸ್‌ಗೆ ಮತ ನೀಡಿ ಅಧಿಕಾರಕ್ಕೆ ತಂದಿದ್ದಾರೆ ಮತ್ತು ನಾವು ಅವರ ನಂಬಿಕೆಯನ್ನು ಕಾಪಾಡಬೇಕು ಎಂದು ಹೇಳಿದರು.
ಬಜೆಟ್‌ನಲ್ಲಿ ಅಗತ್ಯ ಹಣವನ್ನು ಮೀಸಲಿಟ್ಟ ನಂತರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸರ್ಕಾರವು ವ್ಯವಸ್ಥೆಯನ್ನು ರೂಪಿಸುತ್ತದೆ. ರಾಜ್ಯದ ಬಿಜೆಪಿ ನಾಯಕರು ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯು ಅವರ ಭರವಸೆಗಳ ಬಗ್ಗೆ ಎಂದಿಗೂ ಕಾಳಜಿ ವಹಿಸುವುದಿಲ್ಲ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಕಪ್ಪುಹಣವನ್ನು ಹೊರತರುವ ಮತ್ತು ಎಲ್ಲ ವ್ಯಕ್ತಿಗಳ ಬ್ಯಾಂಕ್ ಖಾತೆಗಳಿಗೆ ತಲಾ 15 ಲಕ್ಷ ರೂ. ಗಳನ್ನು ಜಮೆ ಮಾಡುವ ಭರವಸೆಯನ್ನು ಇನ್ನೂ ಈಡೇರಿಸಿಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: ನೈತಿಕ ಪೊಲೀಸ್ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ: ಜಿ. ಪರಮೇಶ್ವರ್
ಮಂಗಳೂರಿನಲ್ಲಿ ಚಿನ್ನ ಮತ್ತು ವಜ್ರದ ಹಬ್ ಆಗಿ ಅಭಿವೃದ್ಧಿಪಡಿಸಲು 15 ಎಕರೆ ಭೂಮಿಯನ್ನು ಗುರುತಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಕೋರಿರುವುದಾಗಿ ತಿಳಿಸಿದ ಅವರು, ಈ ಹಬ್ ರಾಜ್ಯಕ್ಕೆ ಆದಾಯವನ್ನು ತರುತ್ತದೆ ಮತ್ತು ಮಂಗಳೂರನ್ನು ರಾಜ್ಯದ ಎರಡನೇ ಪ್ರಮುಖ ನಗರವಾಗಿ ಅಭಿವೃದ್ಧಿಪಡಿಸುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಮಾಜಿ ಸಚಿವ ಬಿ ರಮಾನಾಥ್ ರೈ, ಎಂಎಲ್ಸಿ ಮಂಜುನಾಥ್ ಭಂಡಾರಿ, ಕಾಂಗ್ರೆಸ್ ಮುಖಂಡರಾದ ಜೆ ಆರ್ ಲೋಬೋ, ಮಿಥುನ್ ರೈ, ಮಮತಾ ಗಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.