ಕದ್ದ ಫೋನ್ ವಾಪಸ್ ಪಡೆಯುವ ವೇಳೆ ವ್ಯಕ್ತಿಯ ಮೇಲೆ ದಾಳಿ ಮಾಡಿ ಮತ್ತೊಮ್ಮೆ ಕಳವು: ಇಬ್ಬರ ಬಂಧನ

ಕದ್ದ ಫೋನ್ ವಾಪಸ್ ಪಡೆಯುವ ವೇಳೆ ದರೋಡೆಕೋರರ ಗುಂಪು ದಾಳಿ ನಡೆಸಿರುವ ಘಟನೆಯೊಂದು ನಗರದ ಹೊಸೂರು ಮುಖ್ಯರಸ್ತೆಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕದ್ದ ಫೋನ್ ವಾಪಸ್ ಪಡೆಯುವ ವೇಳೆ ದರೋಡೆಕೋರರ ಗುಂಪು ದಾಳಿ ನಡೆಸಿರುವ ಘಟನೆಯೊಂದು ನಗರದ ಹೊಸೂರು ಮುಖ್ಯರಸ್ತೆಯಲ್ಲಿ ನಡೆದಿದೆ.

ವೈ ರಾಜ್ ಕುಮಾರ್ ದಾಳಿಗೊಳಗಾದ ವ್ಯಕ್ತಿಯಾಗಿದ್ದಾರೆ. ರಾಜ್ ಕುಮಾರ್ ಅವರು ಹೊಸೂರು ರಸ್ತೆಯ ಪ್ರಮುಖ ಔಷಧ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ, ಆಂಧ್ರಪ್ರದೇಶ ಮೂಲದವರಾದ ಇವರು ಕಳೆದ 7 ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ.

ಕೆಲಸದ ನಿಮಿತ್ತ ಕುಮಾರ್ ಅವರು ಹೊಸೂರು ಮುಖ್ಯರಸ್ತೆಯಲ್ಲಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮೊಬೈಲ್ ಫೋನ್ ಕಳ್ಳತನವಾಗಿದೆ. ಕಳ್ಳತನವಾಗಿರುವ ವಿಚಾರ ಗಮನಕ್ಕೆ ಬರುತ್ತಿದ್ದಂತೆಯೇ ಕುಮಾರ್ ಅವರು ಮೊಬೈಲ್ ಹುಡುಕಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಅದೇ ಬಸ್ ನಲ್ಲಿ ಸಂಚರಿಸುತ್ತಿದ್ದ ಸಹೋದರಿಗೆ ಫೋನ್ ಮಾಡುವಂತೆ ತಿಳಿಸಿದ್ದಾರೆ. ಈ ವೇಳೆ ಬಸ್ ನಲ್ಲಿದ್ದ ಮತ್ತೊಬ್ಬ ಆರೋಪಿ ಬಸ್ ನಿಲ್ದಾಣದಲ್ಲೇ ಕಳೆದುಕೊಂಡಿರಬಹುದು. ಅಲ್ಲಿಯೇ ಹೋಗಿ ಹುಡುಕಿ ಎಂದು ಸಲಹೆ ನೀಡಿದ್ದಾನೆ.

ಬಸ್ ನಿಲ್ದಾಣದ ಬಳಿ ತಲುಪಿದ ಕುಮಾರ್ ಅವರು ವ್ಯಕ್ತಿಯೊಬ್ಬನ ಮೇಲೆ ಅನುಮಾನಗೊಂಡು, ಫೋನ್ ಕೊಡುವಂತೆ ಕೇಳಿದ್ದಾರೆ. ಈ ವೇಳೆ ಆರೋಪಿ ಫೋನ್ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ. ನಂತರ ಕುಮಾರ್ ಅವರು, ತಂಗಿಯ ಫೋನ್ ಬಳಸಿ ಆರೋಪಿ ಫೋಟೋ ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದಿರುವ ಮೂವರು ಕುಮಾರ್ ಅವರ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ, ಫೋಟೋ ತೆಗೆಯುತ್ತಿದ್ದ ಫೋನ್'ನ್ನೂ ತೆಗೆದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಸೋಮವಾರ ಬೆಳಗ್ಗೆ 8.10 ರಿಂದ 8.30 ರ ನಡುವೆ ಕೂಡ್ಲು ಗೇಟ್ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಆರೋಪಿಗಳನ್ನು ಸುಭಾಷ್ ನಗರದ ನಿವಾಸಿಗಳೆಂದು ಹೇಳಲಾಗುತ್ತಿದ್ದು, ನಾಲ್ವರ ಪೈಕಿ ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಮತ್ತಿಬ್ಬರ ಬಂಧನಕ್ಕಾಗಿ ಬಲೆ ಬೀಸಿದ್ದು, ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಬಂಧನಕ್ಕೊಳಗಾಗಿರುವ ಆರೋಪಿಗಳಿಂದ ಎರಡೂ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com