1,344 ರೌಡಿ ಶೀಟರ್‌ಗಳ ಮನೆಗಳ ಮೇಲೆ ಪೊಲೀಸರ ದಾಳಿ

ರೌಡಿಸಂ ಮುಕ್ತ ಬೆಂಗಳೂರು ಆಗಬೇಕೆಂದು ಡಿಜಿಪಿ ಹಾಗೂ ಆಯುಕ್ತರ ಸೂಚನೆ ಬೆನ್ನಲ್ಲೇ ರಾಜಧಾನಿಯ 1344 ರೌಡಿ ಶೀಟರ್ ಗಳ ಮನೆಗಳ ಮೇಲೆ ಗುರುವಾರ ಪೊಲೀಸರು ದಿಢೀರ್ ದಾಳಿ ನಡೆಸಿ, ಬಿಸಿ ಮುಟ್ಟಿಸಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರೌಡಿಸಂ ಮುಕ್ತ ಬೆಂಗಳೂರು ಆಗಬೇಕೆಂದು ಡಿಜಿಪಿ ಹಾಗೂ ಆಯುಕ್ತರ ಸೂಚನೆ ಬೆನ್ನಲ್ಲೇ ರಾಜಧಾನಿಯ 1344 ರೌಡಿ ಶೀಟರ್ ಗಳ ಮನೆಗಳ ಮೇಲೆ ಗುರುವಾರ ಪೊಲೀಸರು ದಿಢೀರ್ ದಾಳಿ ನಡೆಸಿ, ಬಿಸಿ ಮುಟ್ಟಿಸಿದರು.

ನಗರದಾದ್ಯಂತ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಏಕಕಾಲದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಯಿತು, ಮುಂಜಾನೆಯೇ ತಮ್ಮ ಮನೆ ಬಾಗಿಲಿಗೆ ಬಂದ ಪೊಲೀಸರನ್ನು ಕಂಡು ರೌಡಿಗಳು ಬೆಚ್ಚಿಬಿದ್ದರು.

ದಾಳಿ ವೇಳೆ ಪೊಲೀಸರು 9.01 ಕೆಜಿ ಗಾಂಜಾ, ಮಾರಕಾಸ್ತ್ರಗಳು ಮತ್ತು ಕದ್ದ ವಾಹನಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆಂದು ತಿಳಿದುಬಂದಿದೆ.

ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯಿದೆ ಅಡಿ 2 ಪ್ರಕರಣ ಹಾಗೂ ಎನ್‍ಡಿಪಿಎಸ್ ಕಾಯ್ದೆಯಡಿ 3 ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಲ್ಲದೆ, ಈ ಕಾರ್ಯಾಚರಣೆಯಲ್ಲಿ ವಿಚಾರಣಾ ಪ್ರಕರಣಗಳಲ್ಲಿ ನ್ಯಾಯಾಲಯಗಳಿಂದ ಹೊರಡಿಸಲಾಗಿದ್ದ ರೌಡಿಗಳ ವಿರುದ್ಧದ 46 ಜಾಮೀನು ರಹಿತ ವಾರಂಟ್ ಜಾರಿಯಾಗಿದ್ದರೂ ತಲೆಮರೆಸಿಕೊಂಡಿದ್ದ ರೌಡಿಗಳನ್ನು ಪತ್ತೆ ಮಾಡಿ, ವಶಕ್ಕೆ ಪಡೆದು ಸಂಬಂಧಪಟ್ಟ ನ್ಯಾಯಾಲಯಗಳಿಗೆ ಹಾಜರು ಪಡಿಸಲಾಗಿದೆ.

ಬಸವೇಶ್ವರನಗರ ಪೊಲೀಸರು ಸಂದೀಪ್‌ ಅಲಿಯಾಸ್‌ ದೂಬಿಯಿಂದ 500 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದರೆ, ಮಾಗಡಿ ರಸ್ತೆ ಪೊಲೀಸರು ದರ್ಶನ್ ಅಲಿಯಾಸ್ ಮುರಡಿ ವಿರುದ್ಧ ವಾರೆಂಟ್ ಜಾರಿಗೊಳಿಸಿದ್ದಾರೆ. ಇದರಂೆ ಕಾಮಾಕ್ಷಿಪಾಳ್ಯ ಪೊಲೀಸರು ವಿಷ್ಣು ಅಲಿಯಾಸ್ ಕೆಂಡ ಮತ್ತು ಲಕ್ಷ್ಮಣ್ ಅಲಿಯಾಸ್ ಲಕ್ಕು ವಿರುದ್ಧ ವಾರೆಂಟ್ ಜಾರಿಗೊಳಿಸಿದ್ದಾರೆ.

ಪಶ್ಚಿಮ ವಿಭಾಗದಲ್ಲಿ 177 ರೌಡಿಗಳು, ದಕ್ಷಿಣ ವಿಭಾಗದಲ್ಲಿ 175, ಉತ್ತರ ವಿಭಾಗದಲ್ಲಿ 254, ಕೇಂದ್ರ ವಿಭಾಗ 90, ಪೂರ್ವ 207, ಆಗ್ನೇಯ ವಿಭಾಗ 160, ಈಶಾನ್ಯ ವಿಭಾಗದಲ್ಲಿ 156, ವೈಟ್‍ಫೀಲ್ಡ್ ವಿಭಾಗದಲ್ಲಿ 125 ರೌಡಿಗಳ ಮನೆಗಳ ಮೇಲೆ ದಾಳಿ ಮಾಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com