"ಬನ್ನಿ, ಬನ್ನಿ ನಮ್ ಕಾಡಿನವರು" ಎಂದು ಕರೆಯುತ್ತಿದ್ದರು ಅಣ್ಣಾವ್ರು: ಡಾ.ರಾಜ್'ಕುಮಾರ್ ಸ್ಮರಿಸಿದ ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಚಿತ್ರರಂಗದ ವರನಟ ಡಾ.ರಾಜ್‌ಕುಮಾರ್‌ ಅವರ ಜೊತೆಗಿನ ಒಡನಾಟವನ್ನು ಶುಕ್ರವಾರ ಸ್ಮರಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಚಿತ್ರರಂಗದ ವರನಟ ಡಾ.ರಾಜ್‌ಕುಮಾರ್‌ ಅವರ ಜೊತೆಗಿನ ಒಡನಾಟವನ್ನು ಶುಕ್ರವಾರ ಸ್ಮರಿಸಿದ್ದಾರೆ.

ಡಾ.ರಾಜ್ ಕುಮಾರ್ ಅಕಾಡೆಮಿ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 2022ರ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ರಾಜ್ಯದ ಅಭ್ಯರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮದ ಕುರಿತು ಇಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳು, ಡಾ.ರಾಜ್ ಕುಮಾರ್ ಅವರನ್ನು ಸ್ಮರಿಸಿದ್ದಾರೆ.

‘ನಾನು ರಾಜ್‌ಕುಮಾರ್ ಅವರನ್ನು ಭೇಟಿ ಮಾಡಲು ಹೋದಾಗಲೆಲ್ಲ, ‘ಬನ್ನಿ, ಬನ್ನಿ ನಮ್ ಕಾಡಿನವರು’ ಎಂದು ಖುಷಿಯಿಂದ ಕರೆಯುತ್ತಿದ್ದರು. ಡಾ.ರಾಜ್ ಕುಮಾರ್ ಅವರದ್ದು ಅತ್ಯಂತ ಸರಳ ವ್ಯಕ್ತಿತ್ವ. ಪ್ರತಿಯೊಬ್ಬರನ್ನೂ ಗೌರವದಿಂದ ಕಾಣುವ ಮೇರು ಸಂಸ್ಕಾರದ ರಾಯಭಾರಿ ಆಗಿದ್ದವರು. ಡಾ.ರಾಜ್ ಅವರ ಬದುಕಿನಿಂದ ನಾವು ಕಲಿಯಬೇಕಾದ್ದು, ರೂಢಿಸಿಕೊಳ್ಳಬೇಕಾದ್ದು ತುಂಬಾ ಇದೆ’ ಎಂದು ಕೊಂಡಾಡಿದ್ದಾರೆ.

‘ಜಾತಿ ತಾರತಮ್ಯದ ಕಾರಣದಿಂದ ಶಿಕ್ಷಣದಿಂದ ವಂಚಿತರಾದವರು ಬಹಳಷ್ಟು ಜನರಿದ್ದಾರೆ. ಅವರಿಗೆ ಶಿಕ್ಷಣದ ಜೊತೆಗೆ ಬದುಕಿನ ಅವಕಾಶಗಳೂ ದೊರಕುವುದಿಲ್ಲ. ಯುಪಿಎಸ್‌ಸಿ ನಲ್ಲಿ ತೇರ್ಗಡೆ ಹೊಂದಿದವರು ಈ ಅಸಮಾನತೆ ಮತ್ತು ಜಾತಿ ವ್ಯವಸ್ಥೆಯನ್ನು ಅಳಿಸುವ ಮೂಲಕ ದೇಶದ ಮತ್ತು ಸಮಾಜದ ಪ್ರಗತಿಗೆ ಶ್ರಮಿಸಬೇಕು’ ಎಂದು ಕರೆ ನೀಡಿದ್ದಾರೆ.

‘ಡಾ.ರಾಜ್‌ಕುಮಾರ್ ಅಕಾಡೆಮಿ ಅಪಾರ ಯಶಸ್ಸು ಗಳಿಸಲು ರಾಘವೇಂದ್ರ ರಾಜ್‌ಕುಮಾರ್ ಮತ್ತು ಅಕಾಡೆಮಿ ಸಿಬ್ಬಂದಿಯ ಕೊಡುಗೆ ಅಪಾರ. ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆದು ದೇಶ ಸೇವೆಯ ಕನಸು ಕಟ್ಟಿಕೊಂಡಿರುವ ಅಸಂಖ್ಯ ಮನಸುಗಳಿಗೆ ಆಸರೆಯಾಗಲಿ ಎಂದು ಹಾರೈಸುತ್ತೇನೆ’ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com