
ಸಂಗ್ರಹ ಚಿತ್ರ
ಬೆಂಗಳೂರು: ಐದು ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರ ವಿಧಿಸಿರುವ ಷರತ್ತುಗಳನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ಶುಕ್ರವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು, ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿನ ಆಪ್ ಮಾದರಿಯನ್ನು ಕಾಂಗ್ರೆಸ್ ಪಕ್ಷ ನಕಲು ಮಾಡಿದೆ ಎಂದು ಆರೋಪಿಸಿದರು.
“ಗೃಹ ಜ್ಯೋತಿ, ಗೃಹ ಲಕ್ಷ್ಮಿ ಮತ್ತು ಸರ್ಕಾರದ ಇತರೆ ಗ್ಯಾರಂಟಿ ಯೋಜನೆಗಳು ಬಡವರನ್ನು ಬಡವರನ್ನಾಗಿ ಮಾಡುವ ಕಾರ್ಯಕ್ರಮಗಳಲ್ಲದೆ ಬೇರೇನೂ ಅಲ್ಲ. ದೆಹಲಿ ಮತ್ತು ಪಂಜಾಬ್‌ನಲ್ಲಿ ನಾವು ಈ ಎಲ್ಲಾ ಭರವಸೆಗಳನ್ನು ವೈಜ್ಞಾನಿಕ ರೀತಿಯಲ್ಲಿ ಈಡೇರಿಸುತ್ತಿದ್ದೇವೆಂದು ಹೇಳಿದರು.
ಇದನ್ನೂ ಓದಿ: 'ಕಾಂಗ್ರೆಸ್ ಗ್ಯಾರಂಟಿ ಸೈಡ್ ಎಫೆಕ್ಟ್'; ಬೆಲೆ ಏರಿಕೆ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
ರಾಜ್ಯ ಸರ್ಕಾರದ ಸಚಿವರು ತಮ್ಮ ಗ್ಯಾರಂಟಿಗಳ ಕುರಿತು ಖಚಿತ ಮಾಹಿತಿ ನೀಡುತ್ತಿಲ್ಲ. ಪ್ರತಿದಿನ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.
5 ಗ್ಯಾರಂಟಿಗಳ ಮೂಲಕ ಕಾಂಗ್ರೆಸ್ ಜನತೆಗೆ ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿದೆ.ಈ ಪರಿಸ್ಥಿತಿಗಳು ಮತ್ತು ಗೊಂದಲಗಳು ಮುಂದುವರಿದಿದ್ದೇ ಆದರೆ, ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಎಪಿ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಎಚ್ಚರಿಕೆ ನೀಡಿದರು.
ಇಂದು ಸಾಂಕೇತಿಕ ಪ್ರತಿಭಟನೆಯನ್ನು ಮಾತ್ರ ನಡೆಸಿದ್ದೇವೆ, ಆದರೆ, ಸರ್ಕಾರ ಇದೇ ರೀತಿ ನಿರ್ಲಕ್ಷ್ಯ ತೋರಿದರೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.