ಕರ್ನಾಟಕ ಸರ್ಕಾರದಿಂದ ಆರೋಗ್ಯ ಮತ್ತು ಪೋಷಣೆ ಸಮೀಕ್ಷೆ!
ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಎಚ್‌ಎಫ್‌ಡಬ್ಲ್ಯುಡಿ) ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರಾಜ್ಯದಲ್ಲಿ ಆರೋಗ್ಯ ಮತ್ತು ಪೌಷ್ಟಿಕತೆಯ ಸಮೀಕ್ಷೆಯನ್ನು ಪ್ರಾರಂಭಿಸಿದೆ.
Published: 10th June 2023 01:30 PM | Last Updated: 10th June 2023 01:30 PM | A+A A-

ಆರೋಗ್ಯ ಮತ್ತು ಪೋಷಣೆ ಸಮೀಕ್ಷೆ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಎಚ್‌ಎಫ್‌ಡಬ್ಲ್ಯುಡಿ) ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರಾಜ್ಯದಲ್ಲಿ ಆರೋಗ್ಯ ಮತ್ತು ಪೌಷ್ಟಿಕತೆಯ ಸಮೀಕ್ಷೆಯನ್ನು ಪ್ರಾರಂಭಿಸಿದೆ.
ಇದು ಉತ್ತಮ ನೀತಿಗಳನ್ನು ರೂಪಿಸಲು ಮತ್ತು ಅನುಷ್ಠಾನವನ್ನು ಸುಗಮಗೊಳಿಸಲು ಇಲಾಖೆಗಳಿಗೆ ಸಹಾಯ ಮಾಡುತ್ತದೆ ಎಂದು ಸರ್ಕಾರ ಹೇಳಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮೊಬೈಲ್ ಆ್ಯಪ್ ಮೂಲಕ ಸಮೀಕ್ಷೆಯನ್ನು ನಡೆಸಲಾಗುವುದು, ಇದನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳ ಸಮನ್ವಯದಲ್ಲಿ ವಿವರಗಳನ್ನು ಭರ್ತಿ ಮಾಡಲು ನೀಡಲಾಗುತ್ತದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹ ಸಮೀಕ್ಷೆ ನಡೆಯಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಅಭಿಪ್ರಾಯ ಸಂಗ್ರಹದ ಬಳಿಕ ಎನ್ಇಪಿ ಕುರಿತು ಅಂತಿಮ ನಿರ್ಧಾರ: ಸಚಿವ ಸುಧಾಕರ್
ಈಗಾಗಲೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದ ಪ್ರಾಯೋಗಿಕ ಸಮೀಕ್ಷೆ ಯಶಸ್ವಿಯಾಗಿದೆ ಎಂದು ಹೇಳಲಾಗಿದ್ದು, ಸಮೀಕ್ಷೆಯಲ್ಲಿನ ವಿವರಗಳು ಅಪೌಷ್ಟಿಕತೆ, ಗರ್ಭಿಣಿ ಮಹಿಳೆಯರಲ್ಲಿ ರಕ್ತಹೀನತೆ, ಹೆಚ್ಚಿನ ಅಪಾಯದ ಗರ್ಭಧಾರಣೆ ಮತ್ತು ಕುಟುಂಬ ಯೋಜನೆ ವಿಧಾನಗಳನ್ನು ಒಳಗೊಂಡಿರುತ್ತದೆ. ಮಾನಸಿಕ ಆರೋಗ್ಯ ಮತ್ತು ಕುಟುಂಬಗಳಲ್ಲಿನ ಆನುವಂಶಿಕ ಕಾಯಿಲೆಗಳನ್ನು ಸಹ ಪರಿಶೀಲಿಸಲಾಗುವುದು ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಸಮೀಕ್ಷೆಯು ದುರ್ಬಲ ಜಿಲ್ಲೆಗಳನ್ನು ಗುರುತಿಸಲು ಮತ್ತು ಅವುಗಳಿಗೆ ಬಜೆಟ್ ಹಂಚಿಕೆಗಳನ್ನು ಮಾಡುವ ಗುರಿಯನ್ನು ಹೊಂದಿದೆ. ಈ ಪ್ರಕ್ರಿಯೆಯು ಜೂನ್ 30 ರಂದು ಮುಕ್ತಾಯಗೊಳ್ಳಲಿದೆ, ನಂತರ ಇಲಾಖೆಗಳು ಕರ್ನಾಟಕದ ಆರೋಗ್ಯ ಸ್ಥಿತಿಯನ್ನು ಗುರುತಿಸಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ವಿವಿಧ ಯೋಜನೆಗಳನ್ನು ಸೂಚಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.