ಬಳ್ಳಾರಿಯಲ್ಲಿ ಪಿಎಫ್‌ಐ ಮಾಸ್ಟರ್ ವೆಪನ್ ಟ್ರೇನರ್‌ನನ್ನು ಬಂಧಿಸಿದ ಎನ್‌ಐಎ
ಕರ್ನಾಟಕದಲ್ಲಿ ತಲೆಮರೆಸಿಕೊಂಡಿದ್ದ ನಿಜಾಮಾಬಾದ್ ಭಯೋತ್ಪಾದನೆ ಸಂಚಿನಲ್ಲಿ ಭಾಗಿಯಾಗಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಮಾಸ್ಟರ್ ವೆಪನ್ ಟ್ರೇನರ್‌ನನ್ನು ಬಂಧಿಸಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಬುಧವಾರ ತಿಳಿಸಿದೆ.
Published: 14th June 2023 05:46 PM | Last Updated: 14th June 2023 05:46 PM | A+A A-

ಎನ್ಐಎ
ಬೆಂಗಳೂರು: ಕರ್ನಾಟಕದಲ್ಲಿ ತಲೆಮರೆಸಿಕೊಂಡಿದ್ದ ನಿಜಾಮಾಬಾದ್ ಭಯೋತ್ಪಾದನೆ ಸಂಚಿನಲ್ಲಿ ಭಾಗಿಯಾಗಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಮಾಸ್ಟರ್ ವೆಪನ್ ಟ್ರೇನರ್‌ನನ್ನು ಬಂಧಿಸಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಬುಧವಾರ ತಿಳಿಸಿದೆ.
ಭಾರತದಲ್ಲಿ ಇಸ್ಲಾಮಿಕ್ ಆಳ್ವಿಕೆ ಸ್ಥಾಪಿಸುವ ಉದ್ದೇಶದೊಂದಿಗೆ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸಲು ಮತ್ತು ನಿರ್ವಹಿಸಲು ಯುವಕರನ್ನು ನೇಮಿಸಿಕೊಳ್ಳಲು ಮತ್ತು ಅವರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲು ನಿಷೇಧಿತ ಸಂಘಟನೆ ಪಿಎಫ್ಐನ ನಾಯಕರು ಮತ್ತು ಕಾರ್ಯಕರ್ತರು ನಡೆಸಿದ ಕ್ರಿಮಿನಲ್ ಪಿತೂರಿಗೆ ಈ ಪ್ರಕರಣವು ಸಂಬಂಧಿಸಿದೆ.
ಇದನ್ನು ಓದಿ: ಭಯೋತ್ಪಾದನೆಗೆ ಆರ್ಥಿಕ ನೆರವು ಪ್ರಕರಣ: ಮಧ್ಯ ಪ್ರದೇಶದ ಜಬಲ್‌ಪುರದ 13 ಸ್ಥಳಗಳಲ್ಲಿ ಎನ್‌ಐಎ ದಾಳಿ
"ಬಂಧಿತ ಆರೋಪಿಯನ್ನು ನಂದ್ಯಾಲ್‌ನ ನೊಸ್ಸಮ್ ಮೊಹಮ್ಮದ್ ಯೂನಸ್ ಅಲಿಯಾಸ್ ಯೂನಸ್(33) ಎಂದು ಗುರುತಿಸಲಾಗಿದ್ದು, ತನ್ನ ಅಣ್ಣನ ಇನ್ವರ್ಟರ್ ವ್ಯವಹಾರದಲ್ಲಿ ಕೆಲಸ ಮಾಡುತ್ತಿದ್ದನು. 2022ರ ಸೆಪ್ಟೆಂಬರ್‌ನಲ್ಲಿ ಆತನ ಮನೆಯನ್ನು ಶೋಧಿಸಿದಾಗ, ಆರೋಪಿ ತನ್ನ ಹೆಂಡತಿ ಮತ್ತು ಇಬ್ಬರು ಅಪ್ರಾಪ್ತ ಪುತ್ರರೊಂದಿಗೆ ತಲೆಮರೆಸಿಕೊಂಡಿದ್ದನು" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯೂನಸ್ ತನ್ನ ಇಡೀ ಕುಟುಂಬವನ್ನು ಆಂಧ್ರಪ್ರದೇಶದಿಂದ ಕರ್ನಾಟಕದ ಬಳ್ಳಾರಿಯ ಕೌಲ್ ಬಜಾರ್ ಪ್ರದೇಶಕ್ಕೆ ಸ್ಥಳಾಂತರಿಸಿದ್ದ ಎಂದು ಎನ್‌ಐಎ ತನಿಖೆಯಿಂದ ತಿಳಿದು ಬಂದಿದೆ.
ಯೂನಸ್ ಶಸ್ತ್ರಾಸ್ತ್ರ ತರಬೇತುದಾರನಾಗಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಪ್ರದೇಶದಲ್ಲಿ ಪಿಎಫ್‌ಐನಿಂದ ನೇಮಕಗೊಂಡ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದನು ಮತ್ತು ಈ ಎರಡು ರಾಜ್ಯಗಳಿಗೆ ರಾಜ್ಯ ಸಂಯೋಜಕನಾಗಿ ಕೆಲಸ ಮಾಡುತ್ತಿದ್ದನು.
"NIA ವಿಚಾರಣೆಯ ಸಮಯದಲ್ಲಿ ತಪ್ಪಿಸಿಕೊಳ್ಳುವ ಉತ್ತರಗಳನ್ನು ನೀಡುತ್ತಿರುವ ಯೂನಸ್, PFI ಶಸ್ತ್ರಾಸ್ತ್ರ ತರಬೇತಿ ವಿಚಾರಕ್ಕೆ ಸಂಬಂಧಿಸಿದಂತೆ ಶೇಖ್ ಇಲ್ಯಾಸ್ ಅಹ್ಮದ್ ಎಂಬಾತನ ಹೆಸರು ಹೇಳಿದ್ದು, ಇಲ್ಯಾಸ್ ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ" ಎಂದು ಎನ್ಐಎ ಹೇಳಿದೆ.