ಬಿಜೆಪಿ ಕುರಿತು ಮಾನಹಾನಿ ಜಾಹೀರಾತು ಪ್ರಕರಣ: ರಾಹುಲ್, ಸಿದ್ದು, ಡಿಕೆಶಿಗೆ ಸಮನ್ಸ್ ಜಾರಿ

ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಸರಣಿ ಆರೋಪಗಳನ್ನು ಮಾಡಿ ಕಾಂಗ್ರೆಸ್‌ ಜಾಹೀರಾತು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರಿಗೆ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಸರಣಿ ಆರೋಪಗಳನ್ನು ಮಾಡಿ ಕಾಂಗ್ರೆಸ್‌ ಜಾಹೀರಾತು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರಿಗೆ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಮುಖ್ಯ ವಾಹಿನಿಯ ಆಂಗ್ಲ ಮತ್ತು ಕನ್ನಡ ದಿನ ಪತ್ರಿಕೆಗಳ ಮುಖಪುಟದಲ್ಲಿ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಸರಣಿ ಕಾಂಗ್ರೆಸ್ ಆರೋಪಗಳನ್ನು ಮಾಡಿ ಜಾಹೀರಾತು ನೀಡಿತ್ತು.

ಇದನ್ನು ಆಕ್ಷೇಪಿಸಿ ಬಿಜೆಪಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯವು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ವಿರುದ್ಧ ಸಂಜ್ಞೇಯ ಪರಿಗಣಿಸಿದೆ.

ಮಾನಹಾನಿ ಮಾಡಲಾಗಿದೆ ಎಂದು ಆಕ್ಷೇಪಿಸಿ ಬಿಜೆಪಿ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ವಿಶೇಷ (ಮ್ಯಾಜಿಸ್ಟ್ರೇಟ್‌) ನ್ಯಾಯಾಲಯದ ನ್ಯಾಯಾಧೀಶೆ ಜೆ ಪ್ರೀತ್‌ ಅವರು ಐಪಿಸಿಯ ಸೆಕ್ಷನ್‌ಗಳಾದ 499 ಮತ್ತು 500ರ ಅಡಿ ಕಾಂಗ್ರೆಸ್‌, ಡಿ ಕೆ ಶಿವಕುಮಾರ್‌, ಸಿದ್ದರಾಮಯ್ಯ ಮತ್ತು ರಾಹುಲ್‌ ಗಾಂಧಿ ಅವರ ವಿರುದ್ಧ ಸಂಜ್ಞೇಯ ಪರಿಗಣಿಸಲಾಗಿದೆ. ದೂರುದಾರ ಬಿಜೆಪಿಯ ಪ್ರಮಾಣಿತ ಹೇಳಿಕೆ ದಾಖಲಿಸಿಕೊಳ್ಳಲು ಪ್ರಕರಣವನ್ನು ಜುಲೈ 27ಕ್ಕೆ ಮುಂದೂಡಲಾಗಿದೆ ಎಂದು ಆದೇಶದಲ್ಲಿ ಹೇಳಿದೆ.

ದೂರುದಾರರ ವಾದ ಮತ್ತು ಅವರು ದೂರಿನಲ್ಲಿ ವಿವರಿಸಿರುವುದನ್ನು ಹಾಗೂ ಸಲ್ಲಿಸಲಾಗಿರುವ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಮೇಲ್ನೋಟಕ್ಕೆ ಅಪರಾಧದ ಸಂಜ್ಞೇಯ ಪರಿಗಣಿಸಲು ದೂರುದಾರರ ಮಂಡನೆಯು ತೃಪ್ತಿ ತಂದಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ. ಅಲ್ಲದೆ, ಕಾಂಗ್ರೆಸ್ ನಾಯಕರಿಗೆ ಸಮನ್ಸ್ ಜಾರಿ ಮಾಡಿದ್ದು, ಜುಲೈ 28ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆಯೂ ಸೂಚನೆ ನೀಡಿದೆ.

ಏನಿದು ಪ್ರಕರಣ?
ಬಿಜೆಪಿಯ ವಿರುದ್ಧ ಆಧಾರರಹಿತ, ಅತಾರ್ಕಿಕ ಮತ್ತು ಸುಳ್ಳು ಜಾಹೀರಾತನ್ನು ಪತ್ರಿಕೆಗಳ ಮುಖಪುಟದಲ್ಲಿ ನೀಡುವ ಮೂಲಕ ಆರೋಪಿಗಳು ಮಾನಹಾನಿ ಮಾಡುವುದಲ್ಲದೇ ನಕಲಿ ಆರೋಪಗಳನ್ನು ಮಾಡಿದ್ದಾರೆ. ಆಕ್ಷೇಪಾರ್ಹ ಜಾಹೀರಾತಿನಲ್ಲಿ “ಭ್ರಷ್ಟಾಚಾರ ದರ ಪಟ್ಟಿ” ಅಡಿಯಲ್ಲಿ ಹಲವು ಸುಳ್ಳುಗಳನ್ನು ಸೇರಿಸಲಾಗಿದೆ. ಆರೋಪಿಗಳು ತಮಗೆ ಸರಿ ಎನಿಸಿದ್ದನ್ನು ರಂಜಕವಾಗಿ ಜಾಹೀರಾತಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಆಕ್ಷೇಪಿಸಲಾಗಿದೆ.

ಕೆಎಸ್‌ಡಿಎಲ್‌ನಲ್ಲಿ ಹುದ್ದೆಗೆ 5-15 ಕೋಟಿ ರೂಪಾಯಿ, ಎಂಜಿನಿಯರ್‌ ಹುದ್ದೆಗೆ ರೂ. 1-5 ಕೋಟಿ, ಉಪ ನೋಂದಣಾಧಿಕಾರಿ ಹುದ್ದೆಗೆ ರೂ. 50 ಲಕ್ಷದಿಂದ- 5 ಕೋಟಿ, ಬೆಸ್ಕಾಂನಲ್ಲಿನ ಹುದ್ದೆಗೆ ರೂ. 1 ಕೋಟಿ, ಪಿಎಸ್‌ ಹುದ್ದೆಗೆ ರೂ. 80 ಲಕ್ಷ, ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ರೂ. 50-70 ಲಕ್ಷ, ಪ್ರಾಧ್ಯಾಪಕರ ಹುದ್ದೆಗೆ ರೂ. 30-50  ಲಕ್ಷ, ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ರೂ. 30 ಲಕ್ಷ, ಅಂತೆಯೇ ಕಿರಿಯ ಎಂಜಿನಿಯರ್‌, ಬಮೂಲ್‌, ಲೋಕೋಪಯೋಗಿ ಕಿರಿಯ ಎಂಜಿನಿಯರ್‌, ಪೇದೆಗಳ ಹುದ್ದೆಗೆ ಲಂಚ ನಿಗದಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಬಿಡಿಎ ಆಯುಕ್ತರು, ಕೆಪಿಎಸ್‌ಸಿ ಅಧ್ಯಕ್ಷರು, ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿ, ಕುಲಪತಿ, ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್‌ ಹುದ್ದೆಗಳಿಗೂ ಲಂಚದ ದರ ನಿಗದಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಆರೋಪಿಗಳು ಬಹಿರಂಗವಾಗಿ ಹೇಳಿರುವುದರಿಂದ ಇದು ಕ್ರಿಮಿನಲ್‌ ಮಾನಹಾನಿಯಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಕೋವಿಡ್‌ ಸಂಬಂಧಿತ ಸಾಮಗ್ರಿಗಳ ಪೂರೈಕೆ ಮತ್ತು ಖರೀದಿಯಲ್ಲಿ ಶೇ. 70ರಷ್ಟು ಕಮಿಷನ್‌ ಪಡೆಯಲಾಗಿದೆ. ಲೋಕೋಪಯೋಗಿ ಇಲಾಖೆಯ ಗುತ್ತಿಗೆ, ರಸ್ತೆ ನಿರ್ಮಾಣದಲ್ಲಿ 70:30ರಷ್ಟು ಲಂಚ ಪಡೆಯಲಾಗಿದೆ ಎಂದು ದೂರಿದ್ದಾರೆ. ಅಲ್ಲದೇ, ಶೇ 40ರ ಸರ್ಕಾರವು 1.50 ಲಕ್ಷ ಕೋಟಿ ರೂಪಾಯಿ ಲೂಟಿ ಮಾಡಿದೆ ಎಂದು ಉಲ್ಲೇಖಿಸಲಾಗಿದೆ. ಈ ಮೂಲಕ ಬಿಜೆಪಿಯ ವಿರುದ್ಧ ಮಾನಹಾನಿ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಜನಪ್ರಿಯ ʼಡಬಲ್‌ ಎಂಜಿನ್‌ ಸರ್ಕಾರʼಕ್ಕೆ ಪರ್ಯಾಯವಾಗಿ ʼಟ್ರಬಲ್‌ ಎಂಜಿನ್‌ ಸರ್ಕಾರʼ ಎಂಬ ಪದ ಬಳಕೆ ಮಾಡಲಾಗಿದ್ದು, ಈ ಮೂಲಕ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ಸಾಧ್ಯತೆಯನ್ನು ಕುಸಿಯುವಂತೆ ಮಾಡಲಾಗಿದೆ. ಈ ಜಾಹೀರಾತಿನಲ್ಲಿ ಡಿ ಕೆ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರ ಫೋಟೊಗಳನ್ನು ಬಳಕೆ ಮಾಡಲಾಗಿದ್ದು, ಈ ಇಬ್ಬರೂ ನಕಲಿ ಮತ್ತು ಸಳ್ಳು ಹೇಳಿಕೆಗಳಿಗೆ ನೇರವಾಗಿ ಕಾರಣವಾಗಿದ್ದಾರೆ. ಈ ಜಾಹೀರಾತು ಪ್ರಕಟವಾದ ತಕ್ಷಣ ರಾಹುಲ್‌ ಗಾಂಧಿ ಅವರು ಅದನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ನಕಲಿ ಮತ್ತು ಪೂರ್ವಾಗ್ರಹ ಪೀಡಿತ ಜಾಹೀರಾತು ನೀಡಲು ರಾಹುಲ್‌ ಗಾಂಧಿ ಸೂಚನೆ ನೀಡಿದ್ದಾರೆ ಎಂದು ದೂರಿನಲ್ಲಿ ವಾದಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com